ಚಿಕ್ಕಮಗಳೂರು ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಲು ಒತ್ತಾಯ

  • ಕಾಫಿ, ಅಡಿಕೆ, ಬೆಳೆಗಳು ನೆಲಕಚ್ಚಿವೆ - ಕೊಳೆರೋಗವೂ ಆವರಿಸಿದೆ
  • ಒಂದು ಎಕರೆ ಕಾಫಿ ತೋಟ ನಿರ್ವಹಿಸಲು ಕನಿಷ್ಠ ಒಂದು ಲಕ್ಷ ರೂ. ವೆಚ್ಚ 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನೆರೆ ಹಾಗೂ ಭೂಕುಸುತದಿಂದ ಮಲೆನಾಡು ಭಾಗದ ಜನರು ತತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿಯು ಅಪರ ಜಿಲ್ಲಾಧಿಕಾರಿ ಬಿ ರೂಪ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದೆ. 

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಭಾಗದ ಜನರ ಜೀವನ ಅಸ್ತವ್ಯಸ್ತವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಿ, ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Image

ಸಮಿತಿಯ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ರಸೂಲ್ ಖಾನ್ ಮಾತನಾಡಿ, “ಕಳೆದ ನಾಲ್ಕು ವರ್ಷಗಳಿಂದ ಸುರಿಯುತ್ತಿರುವ ಅಧಿಕ ಪ್ರಮಾಣದ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ನಿರಂತರವಾಗಿ ಹಲವಾರು ಅನಾಹುತಗಳು ಸಂಭವಿಸಿವೆ. ಕಾಫಿ, ಅಡಿಕೆ, ಬೆಳೆಗಳು ನೆಲಕಚ್ಚಿದ್ದು, ಉಳಿದ ಗಿಡಗಳಿಗೆ ಕೊಳೆರೋಗ ಆವರಿಸಿರುವುದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ" ಎಂದು ಹೇಳಿದರು. 

ಒಂದು ಎಕರೆ ಕಾಫಿ ತೋಟವನ್ನು ನಿರ್ವಹಣೆ ಮಾಡಲು ಕನಿಷ್ಠ ಒಂದು ಲಕ್ಷ ರೂ. ವೆಚ್ಚ ತಗುಲುತ್ತದೆ. ಜಿಲ್ಲೆಯಲ್ಲಿ ನಾಲ್ಕು ವರ್ಷಗಳಿಂದ ಅತಿವೃಷ್ಟಿಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಕೊಡಗು | ಭಾರೀ ಮಳೆ; ಕಾಫಿ ತೋಟದ ನಡುವೆ ಜಲ ಸ್ಫೋಟ

"ಬ್ಯಾಂಕ್‌ನಲ್ಲಿ ಸಾಲ ಪಡೆದು ಬೆಳೆ ಆರಂಭಿಸಿದ್ದು, ಭಾರೀ ಮಳೆಯಿಂದ ಗಿಡಗಳು ನೆಲಕ್ಕುರುಳುತ್ತಿವೆ. ಅಡಿಕೆ, ಮೆಣಸು, ಕಾಫಿ ಬೆಳೆಗಳು ನೆಲಕಚ್ಚಿರುವ ಹಿನ್ನೆಲೆಯಲ್ಲಿ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ರೈತರ ಸಂಕಷ್ಟ ನಿವಾರಣೆಗೆ ಕಾಫಿ ಮಂಡಳಿ, ಕಂದಾಯ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡುವ ಮೂಲಕ ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪ್ರದೇಶ ಎಂದು ಘೋಷಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಸಮಿತಿ ಉಪಾಧ್ಯಕ್ಷರು, ಯುವ ಮುಖಂಡರು ಉಪಸ್ಥಿತರಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್