
- ರಾಜ್ಯದಲ್ಲಿ ಹಾಲಿಗೆ ವೈಜ್ಞಾನಿಕವಾಗಿ ಬೆಲೆ ಏರಿಸುವಂತೆ ರೈತರ ಒತ್ತಾಯ
- ಕರ್ನಾಟಕ ಹಾಲು ಉತ್ಪಾದಕರ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ
ಪ್ರತಿ ಲೀಟರ್ ಹಾಲಿಗೆ ₹50 ದರ ನಿಗದಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ಹಾಲು ಉತ್ಪಾದಕರ ವೇದಿಕೆ ಜೂನ್ 15ರಂದು ಫ್ರೀಡಂ ಪಾರ್ಕ್ನಲ್ಲಿ 'ರೈತರಿಂದ ಹಾಲಿನ ಚಳವಳಿ'ಗೆ ಕರೆ ನೀಡಿದೆ.
ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿರುವ ಕರ್ನಾಟಕ ಹಾಲು ಉತ್ಪಾದಕರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಂ.ಆರ್. ನಾರಾಯಣ ಗೌಡ, "ಹಾಲು ಉತ್ಪಾದನೆ ವೆಚ್ಚ ದಿನದಿಂದ ದಿನಕ್ಕೆ ದುಬಾರಿಯಾಗಿದ್ದು, ಸರ್ಕಾರ ಪ್ರತಿ ಲೀಟರ್ ಹಾಲಿಗೆ ₹26ರಿಂದ ₹28 ನೀಡುತ್ತಿದೆ. ಆದರೆ, ಒಕ್ಕೂಟದವರು ₹40ರಿಂದ ₹45ಕ್ಕೆ ಹಾಲು ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಲೀಟರ್ ಹಾಲಿಗೆ ₹50 ನಿಗದಿ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, "ರಾಜ್ಯದಲ್ಲಿ ಹಾಲಿನ ವೈಜ್ಞಾನಿಕ ಬೆಲೆ ಏರಿಸುವಂತೆ ಒತ್ತಾಯಿಸಿ ‘ನಮ್ಮ ಹಾಲು ನಮ್ಮ ಹಕ್ಕು’ ಎಂಬ ಘೋಷವಾಕ್ಯದ ಅಡಿಯಲ್ಲಿ ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲಾಗಿದೆ. ರಾಜ್ಯದಾದ್ಯಂತ 3 ಸಾವಿರಕ್ಕೂ ಹೆಚ್ಚು ರೈತರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ" ಎಂದು ಅವರು ತಿಳಿಸಿದರು.
"ಈ ಹಿಂದೆಯೂ ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ವೈಜ್ಞಾನಿಕ ಬೆಲೆ ₹50 ನೀಡಬೇಕೆಂದು ಒಂದೂವರೆ ವರ್ಷದಿಂದ ಅನೇಕ ಸಂಘಟನೆಯವರು ಹೋರಾಟ ಮಾಡಿದ್ದರು. ಆದರೆ, ಒಕ್ಕೂಟವು ಕೇವಲ ₹3 ಸಹಾಯಧನ ಹೆಚ್ಚಿಸಿ, ಸುಳ್ಳು ಭರವಸೆ ನೀಡಿ ಹೋರಾಟವನ್ನು ಹತ್ತಿಕ್ಕಿದ್ದರು" ಎಂದು ಅವರು ಕಿಡಿಕಾರಿದರು.
"ಪಂಜಾಬ್, ಹರಿಯಾಣ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರತಿ ಲೀಟರ್ ಹಾಲಿಗೆ ₹36 ರಿಂದ ₹45 ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕಡಿಮೆ ಬೆಲೆ ನೀಡುತ್ತಿರುವುದು ಖಂಡನೀಯ. ಹೈನುಗಾರಿಕೆ ಮಾಡುವ ಹಾಲು ಉತ್ಪಾದಕರು ಸಂಕಷ್ಟದಲ್ಲಿದ್ದು, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೆ ಹೋರಾಟ ಕೈಬಿಡಲಾಗುವುದು" ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಮೀನುಗಾರರ ಸಬ್ಸಿಡಿಗೆ ಕತ್ತರಿ; ಒತ್ತಡಕ್ಕೆ ಮಣಿಯದಿರಲು ಮೀನುಗಾರರ ಆಗ್ರಹ
ಒಕ್ಕೂಟಗಳಲ್ಲಿನ ಭ್ರಷ್ಟಾಚಾರ ತಡೆಯಿರಿ
ಹಾಲು ಒಕ್ಕೂಟ ಸಂಸ್ಥೆಗಳಲ್ಲಿ ನಡೆಯುತ್ತಿರುವ ದುಂದು ವೆಚ್ಚ ಮತ್ತು ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಿರುವ ಎಂ ಆರ್ ನಾರಾಯಣ ಗೌಡ, "ರಾಜ್ಯದ ಎಲ್ಲ ಹಾಲು ಒಕ್ಕೂಟಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಒಕ್ಕೂಟದಲ್ಲಿರುವ ಭ್ರಷ್ಟಾಚಾರ, ದುಂದುವೆಚ್ಚಕ್ಕೆ ಕಡಿವಾಣ ಹಾಕದಿದ್ದರೆ ಇದರ ನಷ್ಟವೂ ರೈತನ ಹೆಗಲಿಗೇ ಬೀಳಲಿದೆ. ಹೀಗಾಗಿ ಇಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು" ಎಂದು ಆಗ್ರಹಿಸಿದರು.
ಅಲ್ಲದೆ, "ಹೈನುಗಾರಿಕೆ ಮಾಡುವ ರೈತರಿಗೆ ಗೋಹತ್ಯೆ ನಿಷೇಧ ಕಾಯ್ದೆ ಮಾರಕವಾಗಿದೆ. ಗಂಡು ಕರು ಜನಿಸಿದರೆ ಹಸುವಿಗಿಂತ ಎರಡು ಪಟ್ಟು ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ ಈ ಕಾಯ್ದೆಯ ಬಗ್ಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಪರಿಶೀಲನೆ ನಡೆಸಬೇಕಿದೆ" ಎಂದು ಅವರು ಒತ್ತಾಯಿಸಿದರು.