ದೇವರ ಗುಜ್ಜಕೋಲು ಮುಟ್ಟಿದ ಪ್ರಕರಣ | ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ದಲಿತ ಸಂಘಟನೆಗಳ ಆಗ್ರಹ

  • ಕೋಲಾರ ಜಿಲ್ಲಾ ದಲಿತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
  • ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಒತ್ತಾಯ

ದೇವರ ಗುಜ್ಜಕೋಲು ಮುಟ್ಟಿದ ಕಾರಣಕ್ಕೆ ಮೈಲಿಗೆ ಆಯಿತೆಂದು ದಲಿತ ಕುಟುಂಬಕ್ಕೆ ದಂಡ ವಿಧಿಸಿದ ಪ್ರಕರಣದ ಸಂಬಂಧ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಕೋಲಾರ ಜಿಲ್ಲೆಯ ದಲಿತ ಪ್ರಗತಿಪರ ಸಂಘಟನೆಗಳ ವತಿಯಿಂದ ಕೋಲಾರದ ಮೆಕ್ಕೆ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮಾಲೂರು ತಾಲ್ಲೂಕು ಟೇಕಲ್ ಹೋಬಳಿ ಉಳ್ಳೇರಹಳ್ಳಿಯಲ್ಲಿ ಭೂತಮ್ಮನ ಮೂರ್ತಿ ಉತ್ಸವದ ಸಂದರ್ಭದಲ್ಲಿ ದೇವರನ್ನು ಹೊರುವ ಗುಜ್ಜಕೋಲು ಕೆಳಕ್ಕೆ ಬಿದ್ದಾಗ ಇದನ್ನು ಗಮನಿಸಿದ 14 ವರ್ಷದ ಚೇತನ್ ಎಂಬ ಪರಿಶಿಷ್ಟ ಜಾತಿಯ ವಿದ್ಯಾರ್ಥಿಯು ಕೋಲನ್ನು ಎತ್ತಿ ಕೊಟ್ಟಿದ್ದ. 

ಕೋಲು ಮುಟ್ಟಿದ ಕಾರಣಕ್ಕೆ ಗ್ರಾಮದ ಬಲಾಢ್ಯ ಜಾತಿಯವರು ಕೋಲು ಮೈಲಿಗೆಯಾಯಿತು ಎಂದು ಬಾಲಕನನ್ನು ಥಳಿಸಿ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಸೇರಿಸಿದ್ದರು; 'ದೇವಸ್ಥಾನ ಮೈಲಿಗೆಯಾಗಿದೆ, ಹಾಗಾಗಿ ಶುದ್ಧೀಕರಣ ಮಾಡಬೇಕು. ದೇವಸ್ಥಾನಕ್ಕೆ ಬಣ್ಣ ಬಳಿಯುವ ಖರ್ಚು 60 ಸಾವಿರ ರೂಪಾಯಿಗಳನ್ನು ಬಾಲಕನ ಕುಟುಂಬವೇ ಕೊಡಬೇಕು' ಎಂದು ದಂಡ ವಿಧಿಸಿದ್ದರು. ಒಂದು ವೇಳೆ ದಂಡ ಪಾವತಿಸದ ಪಕ್ಷದಲ್ಲಿ ಕುಟುಂಬವನ್ನು ಊರಿನಿಂದ ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದರು.

"ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಇಂಥ ಸಂದರ್ಭದಲ್ಲಿ ಸಂವಿಧಾನದ ಮೂಲ ಸಿದ್ಧಾಂತಗಳು ಕಗ್ಗೊಲೆಯಾಗುತ್ತಿವೆ. ಇಂಥ ಅಮಾನವೀಯ ಘಟನೆ ಖಂಡನೀಯ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಂತ್ರಸ್ತ ಕುಟುಂಬದ ಒಬ್ಬ ಸದಸ್ಯರಿಗೆ ಕಾಯಂ ಸರ್ಕಾರಿ ಕೆಲಸ ನೀಡಬೇಕು. ಈ ಕುಟುಂಬಕ್ಕೆ ಊರಿನ ಸೂಕ್ತ ಸ್ಥಳದಲ್ಲಿ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು. ವಿದ್ಯಾರ್ಥಿ ಚೇತನ್‌ಗೆ ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ಪೂರ್ಣ ಖರ್ಚನ್ನು ಸರ್ಕಾರವೇ ಭರಿಸಬೇಕು. ಕುಟುಂಬಕ್ಕೆ ಐದು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯನಾಗಿರುವ ನಾರಾಯಣಸ್ವಾಮಿ ಮತ್ತು ಆತನ ಸಹಚರರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. 

ಜಿಲ್ಲೆಯ ಎಲ್ಲ ಮುಜರಾಯಿ ಮತ್ತು ಸಾರ್ವಜನಿಕ ದೇವಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ದೇವಾಲಯ ಪ್ರವೇಶವಿದೆ ಎಂದು ದೇವಾಲಯಗಳ ಮುಂಭಾಗದ ನಾಮಫಲಕ ಹಾಕಿ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು. 

ಈ ಸುದ್ದಿ ಓದಿದ್ದೀರಾ? ಕೋಲಾರ | ದೇವರು ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ದಂಡ ಹಾಕಿದ ಬಲಾಢ್ಯರು: ಗ್ರಾಮದಿಂದ ಬಹಿಷ್ಕಾರ

ಮತ್ತೊಂದು ಪ್ರಕರಣದಲ್ಲಿ ಟೇಕಲ್ ಹೋಬಳಿಯ ವೀರಕಪುತ್ರ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಶಿಷ್ಟ ಜಾತಿಯ ಶಿಕ್ಷಕ ಎಂ ಕೃಷ್ಣಪ್ಪ ಅವರನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್ ಥಳಿಸಿದ್ದಾನೆ. ಶ್ರೀನಿವಾಸ್ ಮಗ ಎರಡನೇ ತರಗತಿ ಓದುತ್ತಿದ್ದು, ವಿದ್ಯಾರ್ಥಿ ಚಂದನ್ ಆಟವಾಡುವಾಗ ಆಕಸ್ಮಿಕವಾಗಿ ಬಿದ್ದಿದ್ದಾನೆ. ಆದರೆ, ಎಂ ಕೃಷ್ಣಪ್ಪ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕುರ್ಚಿಯಲ್ಲಿ ಥಳಿಸಲಾಗಿದೆ. ಆದರೂ ಪೊಲೀಸರು ಕ್ರಮ ಕೈಗೊಳ್ಳದೆ ತಾರತಮ್ಯ ಮಾಡುತ್ತಿದ್ದಾರೆ. ಆರೋಪಿ ಶ್ರೀನಿವಾಸ್ ಎಂಬುವರನ್ನು ಕೂಡಲೇ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಸಿಪಿಎಂ ಕೋಲಾರ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಗೀತಾ, ದಲಿತ ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ, ವಕ್ಕಲೇರಿ ರಾಜಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಂಬರೀಶ್, ಟಿ ವಿಜಯಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್