
- ಹಿಂದಿ ನಮ್ಮ ಭಾಷೆಯಲ್ಲ, ನಮ್ಮದು ಕನ್ನಡ ಭಾಷೆ: ಸಿ ಎಂ ಇಬ್ರಾಹಿಂ
- ಬಿಜೆಪಿಗೆ ಕನ್ನಡ ಮತ್ತು ಕನ್ನಡಿಗರು ಬೇಕಾಗಿಲ್ಲ: ವಾಟಾಳ್ ನಾಗರಾಜ್
ಸೆ.14ರಂದು ಕೇಂದ್ರ ಸರ್ಕಾರ ದೇಶದಾದ್ಯಂತ ‘ಹಿಂದಿ ದಿವಸ’ ಆಚರಣೆಗೆ ಮುಂದಾಗಿದ್ದು, ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಳೆದ ವರ್ಷ ಕೂಡ ಹಿಂದಿ ದಿವಸ ಆಚರಣೆ ಸಂದರ್ಭದಲ್ಲಿ ಕನ್ನಡಿಗರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ವಿರೋಧವಿದ್ದರೂ ಕೇಂದ್ರ ಸರ್ಕಾರ ಈ ವರ್ಷವೂ ಹಿಂದಿ ದಿವಸ ಆಚರಣೆಗೆ ಮುಂದಾಗಿದ್ದು, ಹಲವು ರಂಗಗಳ ಪ್ರಮುಖರು ಈದಿನ.ಕಾಮ್ ಜತೆಗೆ ಮಾತನಾಡಿ ಆಕ್ರೋಶ ಹೊರ ಹಾಕಿದ್ದಾರೆ.
‘ರಾಜ್ಯ ಸರ್ಕಾರದ ಹಿಂದಿ ದಿವಸ ಆಚರಣೆ ಎಷ್ಟು ಸಮಂಜಸ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಪ್ರಶ್ನಿಸಿದರು.
ಈ ದಿನ.ಕಾಮ್ ಜತೆಗೆ ಮಾತನಾಡಿದ ಅವರು, “ಇದು ಕೇಂದ್ರ ಸರ್ಕಾರದ ಆಚರಣೆ, ರಾಜ್ಯ ಸರ್ಕಾರಕ್ಕೂ, ಹಿಂದಿಗೂ ಏನು ಸಂಬಂಧ? ರಾಜ್ಯ ಸರ್ಕಾರ ಹಿಂದಿ ದಿವಸ ಆಚರಿಸಬೇಕಿಲ್ಲ. ಬೇಕಿದ್ದರೆ ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಸಿಬ್ಬಂದಿಗಳು ಆಚರಿಸಲಿ. ಇದು ಕೇಂದ್ರ ಸರ್ಕಾರದ ಆಶಯ” ಎಂದು ಹೇಳಿದರು.
ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಈಗಾಗಲೇ ಹಿಂದಿ ಹೇರಿಕೆ ನಡೆಯುತ್ತಿದೆ, ಈಗ ಹಿಂದಿ ದಿವಸ ಆಚರಣೆ ನಡೆಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಅದು ಸರಿಯಲ್ಲ” ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.
ಹಿಂದಿ ನಮ್ಮ ಭಾಷೆಯಲ್ಲ, ನಮ್ಮದು ಕನ್ನಡ ಭಾಷೆ: ಸಿ ಎಂ ಇಬ್ರಾಹಿಂ
ಜಾತ್ಯಾತೀತ ಜನತಾದಳದ (ಜೆಡಿಎಸ್) ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕೇಂದ್ರ ಸರ್ಕಾರ ಸಂಪೂರ್ಣವಾಗಿ ರಾಜ್ಯವನ್ನು ಕಡೆಗಣಿಸಿಕೊಂಡು ಬಂದಿದೆ. ಹಿಂದಿ ನಮ್ಮ ಭಾಷೆಯಲ್ಲ, ನಮ್ಮದು ಕನ್ನಡ ಭಾಷೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹಿಂದಿಯನ್ನು ಬೆಳೆಸಲು ಮತ್ತು ಅದನ್ನು ನಮ್ಮ ಮೇಲೆ ಹೇರಿಕೆ ಮಾಡುವ ದೊಡ್ಡ ಪ್ರಯತ್ನವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಾ ಬಂದಿವೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?: ಹಿಂದಿ ದಿವಸ | ರಾಜ್ಯ ಸರ್ಕಾರ ಮೊದಲು ತುಳು, ಹವ್ಯಕ, ಕೊಡವ ಭಾಷೆಗಳ ದಿನ ಆಚರಿಸಲಿ - ಕೆ. ಮರುಳಸಿದ್ದಪ್ಪ ಆಗ್ರಹ
“ತಮಿಳುನಾಡಿನಲ್ಲಿ ಡಿಎಂಕೆ ಮುಖಂಡರು ಪ್ರಬಲವಾಗಿ ವಿರೋಧ ಮಾಡಿದ್ದಾರೆ. ತೆಲಂಗಾಣದಲ್ಲಿ ಕೆ ಸಿ ಚಂದ್ರಶೇಖರ್ ರಾವ್ ವಿರೋಧ ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯವರು ಕನ್ನಡ ಭಾಷೆಯನ್ನು ತಬ್ಬಲಿ ಮಾಡಲು ಹೊರಟಿದ್ದಾರೆ. ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲು ಮುಂದಾದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ನವೆಂಬರ್ ಒಂದನೇ ತಾರೀಕಿನಿಂದ ಕನ್ನಡ ಪರ ಸಂಘಟನೆಗಳನ್ನು ಕರೆದು, ರೂಪುರೇಷೆ ಸಿದ್ಧಪಡಿಸುತ್ತೇವೆ” ಎಂದು ಇಬ್ರಾಹಿಂ ಹೇಳಿದರು.
ಆರ್ಎಸ್ಎಸ್ ಮತ್ತು ಬಿಜೆಪಿಗೆ ಕನ್ನಡ ಮತ್ತು ಕನ್ನಡಿಗರು ಬೇಕಾಗಿಲ್ಲ: ವಾಟಾಳ್
ಮತ್ತೋರ್ವ ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, “ಹಿಂದಿ ದಿವಸ್ ಯಾರಿಗೆ ಬೇಕಾಗಿದೆ? ಯಾಕೆ ಆಚರಿಸಬೇಕು? ಕರ್ನಾಟಕಕ್ಕೂ ಹಿಂದಿ ಭಾಷೆಗೂ ಸಂಬಂಧ ಏನಿದೆ? ಹಿಂದಿ ನಮಗೆ ಬೇಡ. ಕನ್ನಡವೇ ಸಂಪೂರ್ಣ ಶಕ್ತಿ. ಕನ್ನಡಕ್ಕೆ ಎಲ್ಲ ರೀತಿಯ ಗೌರವ ಕೊಡಬೇಕು. ಯಾವುದೇ ಕಾರಣಕ್ಕೂ ಹಿಂದಿ ಬರಬಾರದು” ಎಂದು ಒತ್ತಾಯಿಸಿದರು.
“ಕೇಂದ್ರ ಸರ್ಕಾರ, ಅದರಲ್ಲೂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹಿಂದಿ ಹೇರುವುದಕ್ಕೆ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವುದು ಆರ್ಎಸ್ಎಸ್ ಮತ್ತು ಬಿಜೆಪಿ, ಅವರಿಗೆ ಕನ್ನಡ ಮತ್ತು ಕನ್ನಡಿಗರು ಬೇಕಾಗಿಲ್ಲ. ಅವರಿಗೆ ಹಿಂದಿ ಮತ್ತು ಹಿಂದಿಯವರು ಬೇಕು” ಎಂದು ಕಿಡಿಕಾರಿದರು.
“ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಭಾರೀ ಪ್ರತಿಭಟನೆ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಹಿಂದಿ ಬೇಡ. ನಾಳೆಯಿಂದ ಆರಂಭವಾಗುವ ಹಿಂದಿ ವಿರೋಧಿ ಚಳವಳಿಯನ್ನು, ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ಆರಂಭ ಮಾಡುತ್ತೇವೆ” ಎಂದು ವಾಟಾಳ್ ಎಚ್ಚರಿಕೆ ನೀಡಿದರು.
ಹಿಂದಿ ದಿವಸ ಆಚರಣೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವಿರೋಧ
"ಹಿಂದಿ ದಿವಸ್ ಬದಲಿಗೆ ‘ದೇಶಭಾಷಾ ದಿನ’, ‘ನಾಡನುಡಿ ದಿನ’, ‘ನಾಡಭಾಷೆ ದಿನ" ಎಂದು ಆಚರಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್ಎಸ್) ಆಗ್ರಹಿಸಿದೆ.
ಈ ಬಗ್ಗೆ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, “ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತೀಯರು ಬ್ರಿಟಿಷರಿಗೆ ಎಲ್ಲ ಹಂತಗಳಲ್ಲಿಯೂ ಅಸಹಕಾರ ತೋರಬೇಕು. ಬ್ರಿಟೀಷ್ ಸರ್ಕಾರದ ನೌಕರಿಗಳನ್ನು ತೊರೆಯಬೇಕು, ಹಾಗೆಯೇ ಬ್ರಿಟೀಷರ ಭಾಷೆಯಾದ ಇಂಗ್ಲಿಷ್ ಬದಲಿಗೆ ಅಂದು ಭಾರತದ ಅತಿ ಹೆಚ್ಚು ಜನ ಮಾತನಾಡುವ ಭಾಷೆಯಾಗಿದ್ದ ಹಿಂದಿ ಭಾಷೆಗೆ ಪ್ರಾಮುಖ್ಯತೆ ಕೊಟ್ಟು ರಾಷ್ಟ್ರವಾದ ಬೆಳೆಸಬೇಕು ಎನ್ನುವ ಹಿನ್ನೆಲೆಯಲ್ಲಿ ಅಂದಿನ ಚಾರಿತ್ರಿಕ ಸಂದರ್ಭದ ತುರ್ತು ಮತ್ತು ಉದಾತ್ತ ಧೋರಣೆಯಿಂದ ಮಹಾತ್ಮ ಗಾಂಧಿಯವರು ಹಿಂದಿ ಭಾಷೆಗೆ ಪ್ರಾಮುಖ್ಯತೆ ಕೊಟ್ಟಿದ್ದರು. ಅದೇ ಸಮಯದಲ್ಲಿ ಮಹಾತ್ಮ ಗಾಂಧಿಯವರು ಮಾತೃಭಾಷೆಯ ಉಗ್ರ ಪ್ರತಿಪಾದಕರೂ ಆಗಿದ್ದರು” ಎಂದು ಹೇಳಿದ್ದಾರೆ.
“ಭಾರತದ ಒಕ್ಕೂಟ ಸರ್ಕಾರವು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೆಪ್ಟೆಂಬರ್ 14ರಂದು ಬಹಳ ಉಮೇದಿನಿಂದ ನಡೆಸುವ ಸರ್ಕಾರಿ ಪ್ರಾಯೋಜಿತ "ಹಿಂದಿ ದಿವಸ್" ಆಚರಣೆಯನ್ನು ಈ ಕೂಡಲೇ ನಿಲ್ಲಿಸಬೇಕು. ಕನ್ನಡಿಗರಿಗಂತೂ ಇದು ಒಪ್ಪಿತವಲ್ಲದ ವಿಚಾರ. ವೈಯಕ್ತಿಕ ಇಚ್ಚೆಯಿಂದ ಯಾರು ಯಾವುದನ್ನು ಬೇಕಾದರೂ ಕಲಿಯಬಹುದು. ಆದರೆ, ಕೃತಕ ಅನಿವಾರ್ಯತೆಯನ್ನು ಸೃಷ್ಟಿಸಿ ಬಲವಂತವಾಗಿ ಹೇರಿಕೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆ. ಜೊತೆಗೆ ಜನರ ತೆರಿಗೆ ಹಣದ ದುರ್ಬಳಕೆ” ಎಂದು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ?: 'ಹಿಂದಿ ದಿವಸ್' ಎಂಬ ಸಾಂಸ್ಕೃತಿಕ ಅಪಮಾನದ ವಾರ್ಷಿಕ ಆಚರಣೆ
“ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ "ಹಿಂದಿ ದಿವಸ್" ಅನ್ನು ಸಂಪೂರ್ಣವಾಗಿ ತಿರಸ್ಕರಿಸಿ. ಅದಕ್ಕೆ ಪರ್ಯಾಯವಾಗಿ "ನಾಡಭಾಷೆ ದಿನ" ಆಚರಿಸಬೇಕು ಮತ್ತು ಸರ್ಕಾರದ ಜೊತೆ ನಡೆಸುವ ಎಲ್ಲ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿಯೇ ಮಾಡಲು ಮುಂದಾಗಬೇಕು” ಎಂದು ರಾಜ್ಯದ ಜನತೆಗೆ ರವಿಕೃಷ್ಣಾ ರೆಡ್ಡಿ ಕರೆ ಕೊಟ್ಟಿದ್ದಾರೆ.
‘ಹಿಂದಿ ದಿವಸ’ ಪ್ರಾರಂಭಿಸಿದ್ದು ನಾವಲ್ಲ: ಸಿ ಟಿ ರವಿ
“ಹಿಂದಿ ದಿವಸ ಪ್ರಾರಂಭ ಮಾಡಿದ್ದು ನಾವಲ್ಲ, ಬೇರೆ ಪಕ್ಷದವರು" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಇದು ಹಿಂದಿ ಹೇರುವ ಪ್ರಶ್ನೆ ಅಲ್ಲ, ಭಾರತದ ಎಲ್ಲ ಭಾಷೆಗಳು ಸಹ ಭಾರತದ ಆತ್ಮ. ಮಾತೃ ಭಾಷೆಯಲ್ಲೇ ವ್ಯವಹರಿಸಿ, ಮಾತನಾಡಲು ಹೆಮ್ಮೆ ಪಡಿ. ಸ್ವತಂತ್ರ ಪೂರ್ವದಲ್ಲಿ ಭಾಷೆ ಬಗ್ಗೆ ಕೀಳರಿಮೆ ತರುವ ಪ್ರಯತ್ನವನ್ನು ಬ್ರಿಟೀಷರು ಮಾಡಿದ್ದರು. ಈಗ ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಯಾವ ಪಕ್ಷದ ಬೆಂಬಲದಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರೋ ಆ ಪಕ್ಷದವರೇ ಹಿಂದಿ ಏರಿಕೆ ಮಾಡಿರೋದು. ಏಕ್ ಭಾರತ್ ಶ್ರೇಷ್ಠ ಭಾರತ್ ಅಂತ ನಮ್ಮ ಪಕ್ಷ ಹೊಸ ಯೋಜನೆ ಜಾರಿ ಮಾಡಿದೆ. ಬೇರೆ ಬೇರೆ ರಾಜ್ಯಗಳ ಉತ್ಸವಗಳನ್ನ ಬೇರೆ ಬೇರೆ ರಾಜ್ಯಗಳಲ್ಲಿ ಮಾಡಬೇಕು. ಭಾಷೆ ಬಾಂಧವ್ಯದ ಸಂಕೇತ ಎಂದು ನಾನು ಭಾವಿಸುತ್ತೇನೆ. ಆದರೆ, ಕೆಲವರು ಅದನ್ನ ಬೆಂಕಿ ಹಚ್ಚೋಕೆ ಬಳಸುತ್ತಾರೆ” ಎಂದು ಹೇಳಿದರು.