ದೇವನಹಳ್ಳಿ ರೈತ ಹೋರಾಟ | ಅನಿರ್ದಿಷ್ಟಾವಧಿ ಧರಣಿ ಬೆಂಗಳೂರಿಗೆ ಸ್ಥಳಾಂತರ; 'ಕೃಷಿ ಭೂಮಿ ಕಸಿದುಕೊಳ್ಳುವವರು ನಿಜವಾದ ದೇಶದ್ರೋಹಿಗಳು'

  • ಚನ್ನರಾಯಪಟ್ಟಣದ ಅನಿರ್ದಿಷ್ಟಾವಧಿ ಪ್ರತಿಭಟನೆ ಬೆಂಗಳೂರಿಗೆ ಸ್ಥಳಾಂತರ 
  • ಸದನದಲ್ಲಿ ದೇವನಹಳ್ಳಿ ರೈತರ ಹೋರಾಟಕ್ಕೆ ನ್ಯಾಯ ಒದಗಿಸುವಂತೆ ಆಗ್ರಹ

ಭಾರತೀಯ ಜನತಾ ಪಕ್ಷ ದೇಶದ್ರೋಹ ಎಂಬ ಪದವನ್ನು ವ್ಯಾಪಕವಾಗಿ ಬಳಕೆ ಮಾಡುತ್ತಿದೆ. ಆದರೆ, ರೈತರ ಕೃಷಿ ಭೂಮಿ ಕಸಿಯುವವರು ನಿಜವಾದ ದೇಶದ್ರೋಹಿಗಳು ಎಂದು ಚಿಂತಕ ಡಾ ಕೆ ಮರಳುಸಿದ್ದಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ, ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ನೋಟಿಸ್ ವಿರುದ್ಧ ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ವಿರೋಧಿಸಿ ಕಳೆದ 163 ದಿನಗಳಿಂದ ಜಿಲ್ಲೆಯ 13 ಹಳ್ಳಿಗಳ ರೈತರು ನಡೆಸುತ್ತಿರುವ ಹೋರಾಟ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ. 

"ರಾಜ್ಯದಲ್ಲಿ  ಕೃಷಿ ಯೋಗ್ಯವಲ್ಲದ ಸಾವಿರಾರು ಎಕರೆ ಭೂಮಿ ಇದ್ದು, ಅದನ್ನು ಕೈಗಾರಿಕೆ ಉದ್ದೇಶಗಳಿಗೆ ಬಳಸಬಹುದು. ಆದರೆ, ಶೇ.80 ರಷ್ಟಿರುವ ಕೃಷಿಕರನ್ನು 20% ಇಳಿಸುವುದು ಇಂದಿನ ಬಂಡವಾಳಶಾಹಿಗಳ ಕುತಂತ್ರವಾಗಿದೆ. ಅದಕ್ಕೆ ಪೂರಕವಾಗಿ ಆಳುವ ಸರ್ಕಾರ ಕೂಡ ರೈತರ ಭೂಮಿ ಕಸಿಯುವ ಮೂರ್ಖತನ ಪ್ರದರ್ಶನ ಮಾಡುತ್ತಿದೆ" ಎಂದು ಮರಳುಸಿದ್ದಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.

"ಇಡೀ ದೇಶ ಇಂದು ಓಟಿನ ಲೆಕ್ಕಾಚಾರದ ಮೇಲೆ ನಿಂತಿದ್ದು, ಹೇಡಿಯ ಕೈಯಲ್ಲಿ ದೇಶದ ಭವಿಷ್ಯ ಸಿಲುಕಿದೆ. ರೈತರ ಕೃಷಿ ಭೂಮಿ ಕಸಿದುಕೊಂಡು, ಅನ್ನ ಹಾಕಿದವನಿಗೆ ವಿಶ್ವಾಸ ದ್ರೋಹ ಮಾಡುವ ಮೂಲಕ ಗುಲಾಮಗಿರಿಗೆ ತಳ್ಳುವ ಹುನ್ನಾರ ಮಾಡಲಾಗಿದೆ. ರೈತರು ಇದನ್ನು ಅರ್ಥಮಾಡಿಕೊಂಡು ಓಟೆಂಬ ಬ್ರಹ್ಮಾಸ್ತ್ರದಿಂದಲೇ ಬುದ್ಧಿ ಕಲಿಸಬೇಕಿದೆ" ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಜಿ ಸಿ ಬೈಯ್ಯಾರೆಡ್ಡಿ ಅವರು ಮಾತನಾಡಿ, "ದೇವನಹಳ್ಳಿ ರೈತರ 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡು ರೈತರನ್ನು ಬೀದಿಗೆ ತಳ್ಳಿ ಕೈಗಾರಿಕೋದ್ಯಮಿಗಳ ಹಿತ ಕಾಯುವ ರಾಜ್ಯ ಸರ್ಕಾರದ ನಡೆ ಖಂಡನೀಯ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ಸಂಘಟಿಸಲಾಗುವುದು" ಎಂದು ಎಚ್ಚರಿಕೆ ನೀಡಿದರು.

"ಮಾಜಿ ಮುಖ್ಯಮಂತ್ರಿಗಳಾದ ಎಚ್‌ ಡಿ ಕುಮಾರಸ್ವಾಮಿ ಹಾಗೂ ಸಿದ್ಧರಾಮಯ್ಯ ರೈತರ ಕೃಷಿ ಭೂಮಿ ಸ್ವಾಧೀನ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಸದನದಲ್ಲಿ ದೇವನಹಳ್ಳಿ ರೈತರ ಸಮಸ್ಯೆ ಕುರಿತು ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರ ಸದನದಲ್ಲಿ ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಬೇಕು, ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕೈಬಿಬಿಡುವುದಾಗಿ ಘೋಷಿಸಬೇಕು" ಎಂದು ಅವರು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಅವರು ಮಾತನಾಡಿ, "ಇಡೀ ಬೆಂಗಳೂರಿನ ಜನರಿಗೆ ಅನ್ನ ಹಾಕುತ್ತಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು. ಅವರ ಕೃಷಿ ಭೂಮಿಯನ್ನು ಕೈಗಾರಿಕೆಗಳ ಅಭಿವೃದ್ಧಿಗಾಗಿ ಎಂದು ಸುಳ್ಳು ಹೇಳಿ ವಶಕ್ಕೆ ಪಡೆದು ಬಿಜೆಪಿಯವರ ಚಾಣಕ್ಯ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನೀಡಿದ್ದು, ಈಗ ಮಾಜಿ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಸರಿನ ಟ್ರಸ್ಟ್‌ಗೆ ಭೂಮಿ ನೀಡುವ ಸಂಚು ರೂಪಿಸಿದೆ. ಅದಕ್ಕೆಲ್ಲ ತುಮಕೂರು, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಕ್ಟೇರ್‌ಗಟ್ಟಲೆ ಬಂಜರು ಭೂಮಿ ನೀಡಲಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ರೈತರ ಕೃಷಿ ಭೂಮಿಯನ್ನು ಕಸಿದು ದಿವಾಳಿ ಮಾಡಲು ಸರ್ಕಾರ ಮುಂದಾಗಿದೆ. ಇದು ಮುಂದೆ ರಾಜ್ಯದಲ್ಲಿ ಆಹಾರ ಮುಗ್ಗಟ್ಟನ್ನು ಸೃಷ್ಟಿಸಲಿದೆ ಎಂದು ಎ ಟಿ ರಾಮಸ್ವಾಮಿ ವರದಿ ಪ್ರಸ್ತಾಪಿಸಿದ ಮಾವಳ್ಳಿ ಶಂಕರ್‌ ಅವರು, "ದೇವನಹಳ್ಳಿ ರೈತರು ಹೋರಾಟ ಆರಂಭಿಸಿ 163 ದಿನಗಳ ಕಳೆದಿವೆ. ಆದರೂ ಒಮ್ಮೆಯೂ ರೈತರ ಸಮಸ್ಯೆ ವಿಚಾರಿಸಲು ಬಂದಿಲ್ಲ. ಅವರಿಗೆ ಕೃಷಿ ಬಗ್ಗೆ ಎಳ್ಳಷ್ಟೂ ಜ್ಞಾನ ಇಲ್ಲ. ತೀರಾ ಅವಿವೇಕಿ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ" ಎಂದು ಸಚಿವ ಬಿ ಸಿ ಪಾಟೀಲ್‌ ವಿರುದ್ಧ ಹರಿಹಾಯ್ದರು.

ಈ ಸುದ್ದಿ ಓದಿದ್ದೀರಾ? ಅನ್ನ ಕಸಿದ ಅತಿವೃಷ್ಟಿ-4| ಕೃಷಿ ಸಚಿವರು ಕ್ಷೇತ್ರಕ್ಕಷ್ಟೇ ಸೀಮಿತ, ಉಸ್ತುವಾರಿ ಸಚಿವರು ನಾಪತ್ತೆ; ಬೆಳೆ ಪರಿಹಾರ ಕನಸಿನ ಮಾತು..

ರೈತರ ಹಕ್ಕೊತ್ತಾಯಗಳು ಹೀಗಿವೆ..

  • ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಭೂಮಿ, ಐಟಿಐಆರ್‌ಗಾಗಿ ಯೋಜಿಸಿರುವ ಕುಂದಾಣ ಹೋಬಳಿಯ ನಾಲ್ಕು ಹಳ್ಳಿಗಳ 867 ಎಕರೆ ಹಾಗೂ ದೊಡ್ಡಬಳ್ಳಾಪುರ ಕಸಬಾ ಹೋಬಳಿಯ ನಾಲ್ಕು ಹಳ್ಳಿಗಳ 1,031 ಎಕರೆ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ರದ್ದು ಮಾಡಬೇಕು.
  • 2022ರ ಆಗಸ್ಟ್ 15 ರಂದು 75ರ ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಧರಣಿ ನಿರತ ರೈತರ ಮೇಲೆ ನಡೆದ ಪೋಲಿಸ್ ದೌರ್ಜನ್ಯ ಅಮಾನವೀಯವಾಗಿದ್ದು, ಅದರ ನೈತಿಕ ಹೊಣೆ ಹೊತ್ತು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ ಸುಧಾಕರ್ ರಾಜೀನಾಮೆ ನೀಡಬೇಕು.
  • ಅನ್ನದಾತರ ಮೇಲೆ ದೌರ್ಜನ್ಯವೆಸಗಿದ ಪೊಲೀಸರು ಮತ್ತು ಸರ್ಕಾರ ಬಹಿರಂಗವಾಗಿ ರೈತರನ್ನು ಕ್ಷಮೆಯಾಚಿಸಬೇಕು. ಅಂದು 71 ಜನ ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡಬೇಕು.
  • ಕೆಐಎಡಿಬಿ ಸಂಸ್ಥೆಯನ್ನು ರಿಯಲ್ ಎಸ್ಟೇಟ್ ಸಂಸ್ಥೆಯನ್ನಾಗಿ ಮಾರ್ಪಡಿಸಿ ರೈತರಿಗೆ ದ್ರೋಹ ಮಾಡುತ್ತಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯನ್ನು ಮಂತ್ರಿಮಂಡಲದಿಂದ ಕೈ ಬಿಡಬೇಕು.
  • ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂಸ್ವಾಧೀನ ಮಾಡಿರುವ ಭೂಮಿಯ ಬಳಕೆ, ಕೈಗಾರಿಕೆಗಳ ಸ್ಥಾಪನೆ, ಉದ್ಯೋಗಗಳ ನೀಡಿಕೆ ಇತ್ಯಾದಿ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಅಲ್ಲಿಯವರೆಗೆ ರಾಜ್ಯದಲ್ಲಿ ಯಾವುದೇ ಸ್ವಾಧೀನ ಪ್ರಕ್ರಿಯೆಗೆ ಕೈ ಹಾಕಬಾರದು.
  • ರೈತರ ಮೇಲೆ ದೌರ್ಜನ್ಯ ನಡೆಸಿದ ಚನ್ನರಾಯಪಟ್ಟಣ ಮತ್ತು ದೇವನಹಳ್ಳಿ ಪೋಲಿಸರನ್ನು ಅಮಾನತ್ತುಗೊಳಿಸಬೇಕು.

ಮೇಲಿನ ಎಲ್ಲ ಒತ್ತಾಯಗಳನ್ನು ಕೂಡಲೇ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಇತ್ಯರ್ಥ ಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ರೈತ, ದಲಿತ, ಕಾರ್ಮಿಕ, ಕನ್ನಡ, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಮತ್ತು ಎಲ್ಲ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ರೈತರ ಈ ಸ್ವಾಭಿಮಾನಿ ಹೋರಾಟಕ್ಕೆ ಜೊತೆಯಾಗಬೇಕೆಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಮೂಲಕ ಬೆಂಗಳೂರು ಗ್ರಾಮಾಂತರ ರೈತರು ವಿನಂತಿಸಿದರು. 

ಪ್ರತಿಭಟನೆಯಲ್ಲಿ, ಕರ್ನಾಟಕ ಪ್ರಾಂತ ರೈತ ಸಂಘದ ಚಂದ್ರತೇಜಸ್ವಿ, ನಂಜಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಚಂದ್ರಶೇಖರ್‌, ಮಣಿಪಾಲ್ ರಾಜಪ್ಪ, ಬೀದರ್‌, ಬಳ್ಳಾರಿ, ಕಲಬುರಗಿ ಜಿಲ್ಲೆಗಳ ರೈತ ಸಂಘದ ಮುಖಂಡರುಗಳು, ನೈತಿಕ ಬೆಂಬಲ ಸೂಚಿಸಿದ ಇತರೆ ಪ್ರಗತಿಪರ ಸಂಘಟನೆಯ ನಾಯಕರು, ಚನ್ನರಾಯಪಟ್ಟಣ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ರೈತರು ಭಾಗವಹಿಸಿದ್ದರು.                                                                                 

ನಿಮಗೆ ಏನು ಅನ್ನಿಸ್ತು?
0 ವೋಟ್