
- ಜಿಲ್ಲೆಯಲ್ಲಿ ಎಲ್ಲಿಯೂ ಭೂ ಸ್ವಾಧೀನ ನಡೆಸದಂತೆ ರೈತರ ಆಗ್ರಹ
- ಫಲವತ್ತಾದ 1,777 ಎಕರೆಗೂ ಹೆಚ್ಚಿನ ಭೂಮಿ ಸ್ವಾಧೀನಕ್ಕೆ ವಿರೋಧ
ಭೂ ಸ್ವಾಧೀನದ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟವನ್ನು ತೀವ್ರಗೊಳಿಸಲು ರೈತರು ತೀರ್ಮಾನಿಸಿದ್ದು, ಡಿ.9ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿಯಲು ಸಜ್ಜಾಗಿದ್ದಾರೆ.
ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೈಗಾರಿಗಾ ಸ್ಥಾಪನಾ ಉದ್ದೇಶದಿಂದ, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರ ಫಲವತ್ತಾದ 1,777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನೀಡಿದ್ದ ನೋಟಿಸ್ ವಿರುದ್ಧ ʼಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿʼ ನೇತೃತ್ವದಲ್ಲಿ ರೈತರು ಕಳೆದ 133 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ.
ಆದರೆ, "ಈ ಭೂ ಸ್ವಾಧೀನ ಪ್ರಕ್ರಿಯೆ ಚನ್ನರಾಯಪಟ್ಟಣ ಹೋಬಳಿಗೆ ಸೀಮಿತವಾಗದೆ ಜಿಲ್ಲೆಯ ಮೂರು ಭಾಗಗಳಲ್ಲಿ ರೈತರ ಭೂಮಿ ಕಿತ್ತುಕೊಳ್ಳಲು ಕೆಐಎಡಿಬಿ ಮುಂದಾಗಿದೆ. ಒಮ್ಮೆ ಭೂಮಿ ಕಳೆದುಕೊಂಡರೆ ಜಿಲ್ಲೆಯ ರೈತರ ಬದುಕು ಬೀದಿಗೆ ಬೀಳಲಿದೆ, ಕೃಷಿ ಚಟುವಟಿಕೆ ನಾಶವಾಗಿ ಆಹಾರ ಕೊರತೆ ಉಂಟಾಗಲಿದೆ" ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
"ದೊಡ್ಡಬಳ್ಳಾಪುರ ಕಸಬಾ ಹೋಬಳಿ, ಕುಂದಾಣ ಹೋಬಳಿ ಹಾಗೂ ಚನ್ನರಾಯಪಟ್ಟಣ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಬಹುತೇಕ ಗ್ರಾಮಗಳ ರೈತರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಜೀವನದ ಮೂಲಾಧಾರವಾಗಿರುವ ಜಮೀನನ್ನು ಕಳೆದಕೊಂಡರೆ ಮತ್ತೆಂದೂ ಕೃಷಿ ಯೋಗ್ಯ ಭೂಮಿ ಸಂಪಾದಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನಾವು ಪ್ರಾಣ ಕಳೆದುಕೊಂಡರೂ ಸರಿಯೇ ನಮ್ಮ ಭೂಮಿಯನ್ನು ಉಳಿಸಿಕೊಳ್ಳುತ್ತೇವೆ" ಎಂದು ಹೋರಾಟ ಸಮಿತಿ ಮುಖಂಡ ಕಲ್ಲಳ್ಳಿ ಶ್ರೀನಿವಾಸ್ ದಿಟ್ಟ ನಿಲುವನ್ನು ಪ್ರಕಟಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ 6.96 ಮಿಲಿಯನ್ ಹೆಕ್ಟೇರ್ ಭೂಮಿ ಮರಳುಗಾಡಾಗುವ ಹಂತದಲ್ಲಿದೆ: ಇಸ್ರೋ ವರದಿ
ಈ ಬಗ್ಗೆ ದೇವನಹಳ್ಲಿ ರೈತ ಹೋರಾಟದಲ್ಲಿರುವ ಯುವ ರೈತ ರಮೇಶ್ ಚೀಮಾಚನಹಳ್ಳಿ, ಈ ದಿನ.ಕಾಮ್ಗೆ ಪ್ರತಿಕ್ರಿಯಿಸಿ, "ಡಿ.9ಕ್ಕೆ ನಮ್ಮ ಹೋರಾಟ ಆರಂಭವಾಗಿ 250 ದಿನಗಳಾಗುತ್ತದೆ. ಆದರೆ ಇದುವರೆಗೂ ರಾಜ್ಯ ಸರ್ಕಾರ, ಕೃಷಿ, ಉಸ್ತುವಾರಿ ಹಾಗೂ ಕೈಗಾರಿಕಾ ಮಂತ್ರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬದಲಾಗಿ ರೈತರನ್ನು ಹೋರಾಟದಿಂದ ಹಿಂದೆ ಸರಿಯಲು ಯತ್ನಿಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯ ಮೂರು ಭಾಗಗಳಲ್ಲಿ ನಡೆಯುತ್ತಿರುವ ಭೂ ಸ್ವಾಧೀನವನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕುತ್ತಿದ್ದೇವೆ" ಎಂದರು.