ದೇವನಹಳ್ಳಿ ರೈತ ಹೋರಾಟ | 170ನೇ ದಿನಕ್ಕೆ ಕಾಲಿಟ್ಟ ಧರಣಿ; ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ

ಸರ್ಕಾರದ ಪಾಲಿಗೆ, ದಲ್ಲಾಳಿಗಳ ಪಾಲಿಗೆ ಅದು ಚಿನ್ನದ ಮೊಟ್ಟೆ ಇಡುವ ಕೋಳಿ. ಆದರೆ, ರೈತರ ಪಾಲಿಗೆ ಅದು ಅನ್ನ ಬೆಳೆಯುವ ಭೂಮಿ. ಅವರ ಜೀವಕ್ಕೆ ಸಮನಾದ ಜಮೀನು. ಅದರ ಮೌಲ್ಯ, ಮಹತ್ವ ಗೊತ್ತಿಲ್ಲದ ಸರ್ಕಾರ ರೈತರಿಂದ 1777 ಎಕರೆ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದೆ; ಅಡ್ಡ ಬಂದ ರೈತರ ಮೇಲೆ ಸುಳ್ಳು ಕೇಸು ಹಾಕಿದೆ. ರೈತರ ಮೇಲೆ ಪೊಲೀಸರನ್ನು ಬಿಟ್ಟು ಹೊಡೆಸಲಾಗಿದೆ. ಆದರೆ, ರೈತರು ಇಟ್ಟ ಹೆಜ್ಜೆ ಹಿಂದಿಟ್ಟಿಲ್ಲ. ದೇವನಹಳ್ಳಿಯ ಚನ್ನರಾಯಪಟ್ಟಣದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಸ್ಥಳಾಂತರಗೊಂಡಿರುವ ರೈತರ ಭೂಸ್ವಾಧೀನ ಹೋರಾಟಕ್ಕೆ ಇವತ್ತಿಗೆ 170 ದಿನ ತುಂಬಿದೆ. ರೈತ ಮಹಿಳೆಯರೆಲ್ಲ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬಲವಂತವಾಗಿ ರೈತರ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ರೈತರು ನಡೆಸುತ್ತಿರುವ ಹೋರಾಟ 170 ದಿನಗಳನ್ನು ಪೂರೈಸಿದೆ. 

ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಕಳೆದ ವಾರವಷ್ಟೇ (ಸೆ.13) ಚನ್ನರಾಯಪಟ್ಟಣದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗಿದೆ.

ಹೋರಾಟಕ್ಕೆ ಬೆಂಬಲ ಸೂಚಿಸಿ ರೈತರೊಂದಿಗಿರುವ ಬಹುಜನ ಸಮಾಜವಾದಿ ಪಕ್ಷ ಬೆ.ಗ್ರಾಂ. ಜಿಲ್ಲಾಧ್ಯಕ್ಷ ತಿಮ್ಮರಾಯಪ್ಪ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "ಅಧಿವೇಶನದಲ್ಲಿ ರಾಜ್ಯ ಸರ್ಕಾರ ನಮ್ಮ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿಲ್ಲವಾದಲ್ಲಿ ರೈತರು ಈ ಹೋರಾಟವನ್ನು ಉಗ್ರ ಸ್ವರೂಪದಲ್ಲಿ ಸಂಘಟಿಸುತ್ತಾರೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕುತ್ತೇವೆ" ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದರು.

"ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಅರುನಹಳ್ಳಿ, ಗೊಲ್ಲಹಳ್ಳಿ, ಚನ್ನರಾಯಪಟ್ಟಣ ಹೋಬಳಿಯ ನಲ್ಲಪನಹಳ್ಳಿ, ಚನ್ನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಎರಡು ಹಳ್ಳಿಗಳು ಸೇರಿ ಒಟ್ಟು 13 ಗ್ರಾಮಗಳ ರೈತರು ಫಲವತ್ತಾದ ಕೃಷಿ ಭೂಮಿಯ ಅಕ್ರಮ ಭೂ ಸ್ವಾಧೀನ ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಮಹಿಳೆಯರು ದಿಟ್ಟತನದಿಂದ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸುತ್ತಿದ್ದು, ಭೂಮಿ ಉಳಿಸಿಕೊಳ್ಳದ ಹೊರತು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರೆಲ್ಲ ಒಗ್ಗಟ್ಟಿನ ತೀರ್ಮಾನ ಮಾಡಿದ್ದಾರೆ. ಹೋರಾಟ ಹತ್ತಿಕ್ಕುವ ಪ್ರಯತ್ನಗಳು, ನಮ್ಮನ್ನು ನಿರ್ಲಕ್ಷ್ಯ ಮಾಡುವ ಯಾವುದೇ ಹುನ್ನಾರಕ್ಕೆ ರೈತರು ಹೆದರುವುದಿಲ್ಲ" ಎಂದು ಸ್ಪಷ್ಟನೆ ನೀಡಿದರು.

"ನಾಲ್ಕು ಎಕರೆ ಭೂಮಿ ಇದೆ. ಅದನ್ನೂ ಕಸಿದ್ಕೊಳ್ತಾ ಇದಾರೆ. ಎಷ್ಟು ದಿನದಿಂದ ಹೋರಾಟ ಮಾಡ್ತಿದ್ದೀವಿ, ಯಾರಾರ ಕೇಳ್ತಾವ್ರಾ.. ನಮ್ಮ ಹಿರಿಯರು ಸಂಪಾದನೆ ಮಾಡಿದ ಜಾಗ, ನಾವು ಅದ್ರಲ್ಲೇ ದುಡಿದು ತಿಂದು ಮಕ್ಳು ಮರಿ ಸಾಕಿದ್ದೀವಿ. ನಮ್ಗೆ 70-75 ವರ್ಷ ಆಯ್ತು, ನಮ್ಮ್‌ ಜೀವ್ನಾನೂ ಮುಗೀತು, ನಾವ್‌ ಸಾಯ್ತಿವಿ. ಆದ್ರೆ, ನಮ್ಮ ಮಕ್ಕಳಿಗೆ ಭೂಮಿ ಉಳಿಸಿಕೊಡ್ಬೇಕು. ಆಗ ಅವ್ರ್‌ ಜೀವ್ನ ಚೆನ್ನಾಗಿರ್ತದೆ. ಅದಿಕ್ಕೆ ಚನ್ನರಾಪಟ್ಟಣ, ನಲ್ಲಪನಹಳ್ಳಿಯಿಂದ ಬೆಂಗಳೂರಿಗೆ ಬಂದು ಹೋರಾಟಕ್ಕೆ ಕೂತೀವಿ" ಎನ್ನುತ್ತಾರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೃದ್ಧ ರೈತ ಮಹಿಳೆಯರಾದ ಮುನಿನಂಜಮ್ಮ ಮತ್ತು ನಾರಾಯಣಮ್ಮ. 

Image
ಅಹೋರಾತ್ರಿ ಧರಣಿ ನಿರತರಾಗಿರುವ ಮುನಿನಂಜಮ್ಮ, ನಾರಾಯಣ್ಣಮ್ಮ ಹಾಗೂ ಇತರೆ ರೈತ ಮಹಿಳೆಯರು

ಹೋರಾಟದ ಹಿನ್ನೆಲೆ 

ಬೆಂಗಳೂರು ಗ್ರಾಮಾಂತ ಜಿಲ್ಲೆ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಫಲವತ್ತಾದ 1,777 ಎಕರೆ ಕೃಷಿ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡು ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಕೆಐಎಡಿಬಿ ರೈತರಿಗೆ ನೋಟೀಸ್‌ ನೀಡಿತ್ತು. ಅದನ್ನು ವಿರೋಧಿಸಿ ರೈತರೆಲ್ಲ ಒಟ್ಟಾಗಿ ತಮ್ಮ ಭೂಮಿ ಉಳಿಸಿಕೊಳ್ಳಲು ನಿರಂತರ ಹೋರಾಟ ಮಾಡುತ್ತಿದ್ದಾರೆ.

ಹೋರಾಟದ ಹಾದಿ ತಪ್ಪಿಸುವ ಉದ್ದೇಶದಿಂದ ನಕಲಿ ರೈತರನ್ನು ಕರೆಸಿ ಕೆಐಎಡಿಬಿಗೆ ಭೂಮಿ ಕೊಡಲು ನಾವು ಒಪ್ಪಿದ್ದೇವೆ ಎಂದು ಹೇಳಿಸುವ ಹುನ್ನಾರವನ್ನು ಸ್ವತಃ ಬೃಹತ್‌ ಕೈಗಾರಿಕಾ ಸಚಿವರೇ ನಡೆಸಿದ್ದರು. ಆದರೆ, ಈ ದಿನ.ಕಾಮ್‌ ಮಾಧ್ಯಮ ನಡೆಸಿದ ರಹಸ್ಯ ಚಿತ್ರೀಕರಣದಲ್ಲಿ ಅದು ಬಟಾಬಯಲಾಗಿತ್ತು.

ಹೋರಾಟ ನಿರತ ರೈತರ ಮೇಲೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಲ್ಲದೆ, ಸುಳ್ಳು ಪ್ರಕರಣಗಲನ್ನು ದಾಖಲಿದ್ದರು. ಘಟನೆಯಲ್ಲಿ ಒಬ್ಬ ರೈತ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಅದಾಗ್ಯೂ ರೈತರು ಜೀವ ಬಿಟ್ಟೇವೇ ಹೊರತು ಭೂಮಿ ಬಿಡಲಾರೆವು ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಕೃಷಿ ಸಚಿವ ಬಿ ಸಿ ಪಾಟೀಲ್‌, ಉಸ್ತುವಾರಿ ಸಚಿವ ಕೆ ಸುಧಾಕರ್‌, ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Image
ಪ್ರತಿಭಟನಾ ಸ್ಥಳದಲ್ಲೇ ಅಡುಗೆ ತಯಾರಿಸಲು ನಿರತರಾಗಿರುವ ರೈತ ಮಹಿಳೆಯರು

ಒಬ್ಬರು ಭೂಮಿ ಕಳೆದುಕೊಂಡರೇನೇ ಮತ್ತೊಬ್ಬರಿಗೆ ಲಾಭ!

ಫಲವತ್ತಾದ ನಮ್ಮ ಕೃಷಿ ಭೂಮಿ ಸ್ವಾಧೀನಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ರೈತರ ತಂಡ ಈ ಹಿಂದೆ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ಅವರು, "ಒಬ್ಬರು ಭೂಮಿ ಕಳೆದುಕೊಂಡರೇನೇ ಮತ್ತೊಬ್ಬರಿಗೆ ಲಾಭವಾಗುವುದು. ಅಣೆಕಟ್ಟೆ ನಿರ್ಮಾಣಕ್ಕಾಗಿ ನಾವು ಕೂಡ ಭೂಮಿ ಕಳೆದುಕೊಂಡಿದ್ದೇವೆ. ನಿಮ್ಮ ರೀತಿ ಇತರೆ ರೈತರು ಭೂಮಿ ಕೊಡಲ್ಲ ಎಂದು ಹೇಳಿದ್ದರೆ ಇಂದು ರಾಜ್ಯದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ ನಮಗೆ ಅಗತ್ಯ ವಸ್ತುಗಳೇ ಸಿಗುತ್ತಿರಲಿಲ್ಲ” ಎಂದು ರೈತರ ಬಗ್ಗೆ ಅಸೂಕ್ಷ್ಮತೆಯಿಂದ ಮಾತನಾಡಿದ್ದನ್ನು ರೈತರು ಸ್ಮರಿಸಿಕೊಂಡು ಹಿಡಿಶಾಪ ಹಾಕಿದರು.

ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ | ಅನಿರ್ದಿಷ್ಟಾವಧಿ ಧರಣಿ ಬೆಂಗಳೂರಿಗೆ ಸ್ಥಳಾಂತರ; 'ಕೃಷಿ ಭೂಮಿ ಕಸಿದುಕೊಳ್ಳುವವರು ನಿಜವಾದ ದೇಶದ್ರೋಹಿಗಳು'

ಅನಿರ್ದಿಷ್ಟಾವಧಿ ಧರಣಿ ನಿರತ ರೈತರ ಹಕ್ಕೊತ್ತಾಯಗಳು:

  • ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಭೂಮಿ, ಐಟಿಐಆರ್‌ಗಾಗಿ ಯೋಜಿಸಿರುವ ಕುಂದಾಣ ಹೋಬಳಿಯ ನಾಲ್ಕು ಹಳ್ಳಿಗಳ 867 ಎಕರೆ ಹಾಗೂ ದೊಡ್ಡಬಳ್ಳಾಪುರ ಕಸಬಾ ಹೋಬಳಿಯ ನಾಲ್ಕು ಹಳ್ಳಿಗಳ 1,031 ಎಕರೆ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ರದ್ದು ಮಾಡಬೇಕು.
  • 2022ರ ಆಗಸ್ಟ್ 15 ರಂದು 75ರ ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಧರಣಿ ನಿರತ ರೈತರ ಮೇಲೆ ನಡೆದ ಪೋಲಿಸ್ ದೌರ್ಜನ್ಯ ಅಮಾನವೀಯವಾಗಿದ್ದು, ಅದರ ನೈತಿಕ ಹೊಣೆ ಹೊತ್ತು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ ಸುಧಾಕರ್ ರಾಜೀನಾಮೆ ನೀಡಬೇಕು.
  • ಅನ್ನದಾತರ ಮೇಲೆ ದೌರ್ಜನ್ಯವೆಸಗಿದ ಪೊಲೀಸರು ಮತ್ತು ಸರ್ಕಾರ ಬಹಿರಂಗವಾಗಿ ರೈತರ ಕ್ಷಮೆ ಯಾಚಿಸಬೇಕು. ಅಂದು 71 ಜನ ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡಬೇಕು.
  • ಕೆಐಎಡಿಬಿ ಸಂಸ್ಥೆಯನ್ನು ರಿಯಲ್ ಎಸ್ಟೇಟ್ ಸಂಸ್ಥೆಯನ್ನಾಗಿ ಮಾರ್ಪಡಿಸಿ ರೈತರಿಗೆ ದ್ರೋಹ ಮಾಡುತ್ತಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯನ್ನು ಮಂತ್ರಿ ಮಂಡಲದಿಂದ ಕೈ ಬಿಡಬೇಕು.
  • ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂಸ್ವಾಧೀನ ಮಾಡಿರುವ ಭೂಮಿಯ ಬಳಕೆ, ಕೈಗಾರಿಕೆಗಳ ಸ್ಥಾಪನೆ, ಉದ್ಯೋಗಗಳ ನೀಡಿಕೆ ಇತ್ಯಾದಿ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಅಲ್ಲಿಯವರೆಗೆ ರಾಜ್ಯದಲ್ಲಿ ಯಾವುದೇ ಸ್ವಾಧೀನ ಪ್ರಕ್ರಿಯೆಗೆ ಕೈ ಹಾಕಬಾರದು.
  • ರೈತರ ಮೇಲೆ ದೌರ್ಜನ್ಯ ನಡೆಸಿದ ಚನ್ನರಾಯಪಟ್ಟಣ ಮತ್ತು ದೇವನಹಳ್ಳಿ ಪೋಲಿಸರನ್ನು ಅಮಾನತುಗೊಳಿಸಬೇಕು.

ಮಳೆಗಾಲದ ಅಧಿವೇಶನದಲ್ಲಿ ದೇವನಹಳ್ಳಿ ರೈತ ಭೂಮಿ ಉಳಿವಿಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಮಳೆಗಾಲದ ಅಧಿವೇಶನದಲ್ಲಿ ಚರ್ಚಿಸಿ, ಭೂಸ್ವಾಧೀನವನ್ನು ಕೈಬಿಡುವುದಾಗಿ ಸರ್ಕಾರ ಹೇಳಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಸದನದಲ್ಲಿ ಪ್ರಸ್ತಾಪವೇ ಆಗಿಲ್ಲದಿರುವುದು ವಿಷಾದನೀಯ.

ನಿಮಗೆ ಏನು ಅನ್ನಿಸ್ತು?
0 ವೋಟ್