
- ನವೆಂಬರ್ 2, 3 ಹಾಗೂ 4ರಂದು ಬೆಂಗಳೂರಿನಲ್ಲಿ ಜಿಮ್ ಸಮಾವೇಶ
- ಜಿಮ್ ಖಂಡಿಸಿ 2,000 ಜನ ರೈತ, ಕಾರ್ಮಿಕ, ಯುವಜನರಿಂದ ಸಮಾವೇಶ
ಉದ್ಯೋಗ ಸೃಷ್ಠಿಯ ನೆಪ ಹೇಳಿ ರಾಜ್ಯದ ರೈತರ ಫಲವತ್ತಾದ ಕೃಷಿಭೂಮಿಯನ್ನು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಜಿಮ್) ಹೆಸರಿನಲ್ಲಿ ಕಸಿದುಕೊಳ್ಳುವ ಸರ್ಕಾರದ ನಡೆಯನ್ನು ಒಪ್ಪುವುದಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ಹೇಳಿದ್ದಾರೆ.
ಸತತ 205 ದಿನಗಳನ್ನು ಪೂರೈಸಿರುವ ದೇವನಹಳ್ಳಿ ರೈತ ಹೋರಾಟ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ಕೆಐಎಡಿಬಿ) ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ 1,777 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಲು ನೀಡಿದ್ದ ನೋಟಿಸ್ ವಿರುದ್ಧ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ.
"ಕೆಐಎಡಿಬಿ ಎಂಬ ಸರ್ಕಾರಿ ಸಂಸ್ಥೆಯ ಮೂಲಕ ರೈತರ ಫಲವತ್ತಾದ ಭೂಮಿಯನ್ನು ಬಂಡವಾಳದಾರರ ಕೈವಶ ಮಾಡುವಲ್ಲಿ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಇಡೀ ಸರ್ಕಾರವೇ ಹುನ್ನಾರ ನಡೆಸಿದೆ. ಅದರ ಮುಂದುವರಿದ ಭಾಗವಾಗಿ ನವೆಂಬರ್ 2, 3 ಹಾಗೂ 4ರಂದು ಬೆಂಗಳೂರಿನಲ್ಲಿ ಜಿಮ್ ಸಮಾವೇಶ ನಡೆಸಲಾಗುತ್ತಿದೆ" ಎಂದು ಬಯ್ಯಾರೆಡ್ಡಿ ಆರೋಪಿಸಿದರು.
"ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ವಿರೋಧಿಸಿ ಫ್ರೀಡಂಪಾರ್ಕ್ನಲ್ಲಿ ಸುಮಾರು 2,000 ಜನ ರೈತರು, ಕಾರ್ಮಿಕರು, ಯುವಜನರು, ದಲಿತರು ಹಾಗೂ ಸಮಾನ ಮನಸ್ಕ ಸಂಘಟನೆಗಳೆಲ್ಲ ಸೇರಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಭೂಸ್ವಾಧೀನಕ್ಕೆ ಒಳಗಾಗುತ್ತಿರುವ ಹಳ್ಳಿಗಳ ರೈತರೆಲ್ಲ ಭಾಗವಹಿಸಲಿದ್ದಾರೆ" ಎಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚರ್ಮಗಂಟು ರೋಗ | ನಿಮ್ಮ ಜಾನುವಾರು ಜೀವರಕ್ಷಣೆಗೆ ನೀವೇನು ಮಾಡಬೇಕು? ಇಲ್ಲಿದೆ ಮಾಹಿತಿ
ವಿದ್ಯುತ್ ಮಸೂದೆ ವಿರೋಧಿಸಿ ರಾಜ್ಯ ಮಟ್ಟದ ಸಮಾವೇಶ
"ಮುಂಬರುವ ಚಳಗಾಲದ ಅಧಿವೇಶನದಲ್ಲಿ ವಿದ್ಯುತ್ ತಿದ್ದುಪಡಿ ಮಸೂದೆ-2022 ಕಾಯ್ದೆ ಜಾರಿಯಾಗುವ ಸಾಧ್ಯತೆಯಿದೆ. ಹಾಗೂ ವಿದ್ಯುತ್ ಖಾಸಗೀಕರಣ ಮತ್ತು ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ವಿರೋಧಿಸಿ ನವೆಂಬರ್ 22 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ರೈತರ ಸಮಾವೇಶ ನಡೆಸಲಾಗುತ್ತದೆ" ಎಂದು ಬಯ್ಯಾರೆಡ್ಡಿ ಮಾಹಿತಿ ನೀಡಿದರು.