ದೇವನಹಳ್ಳಿ | ಪ್ರತಿಭಟನಾನಿರತ ರೈತರ ಮೇಲೆ ಪೊಲೀಸ್ ದೌರ್ಜನ್ಯ; 'ಅನ್ನದಾತ'ರನ್ನು ಸಂತೈಸದ ಸರ್ಕಾರ!

  • ಪ್ರತಿಭಟನಾನಿರತ ರೈತರ ಮೇಲೆ ಏಕಾಏಕಿ ಬಲಪ್ರಯೋಗ ಮಾಡಿದ ಪೊಲೀಸರು 
  • ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ರೈತರ ಹೋರಾಟ ಹತ್ತಿಕ್ಕುತ್ತಿರುವ ಪೊಲೀಸರು

ಕೈಗಾರಿಕೆ ಸ್ಥಾಪನೆ ಉದ್ದೇಶಕ್ಕಾಗಿ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ 1,777 ಎಕರೆ ಭೂಸಾಧೀನ ಮಾಡಿರುವುದನ್ನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ.

"ಪ್ರತಿಭಟನಾನಿರತರಿಗೆ ಸರ್ಕಾರ ಸಾಂತ್ವನ ಹೇಳದೆ ನಿರ್ಲಕ್ಷಿಸಿದೆ. ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಪೊಲೀಸರು ಏಕಾಏಕಿ ಬಲಪ್ರಯೋಗ ಮಾಡಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ" ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ. ವೆಂಕಟೇಶ್‌ ಆರೋಪಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಧರಣಿ ಮಾಡುತ್ತಿದ್ದ ರೈತರ ಮೇಲೆ ರಾತ್ರೋರಾತ್ರಿ ಪೊಲೀಸರು ದಾಳಿ ನಡೆಸಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ” ಎಂದು ಆರೋಪಿಸಿದರು.

“ಪ್ರತಿಭಟನಾ ನಿರತರಾಗಿರುವ ರೈತರನ್ನು ಅಧಿಕಾರಶಾಹಿಗಳು ಎಡೆಬಿಡದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಕೂಡಲೇ ಗೃಹ ಸಚಿವರು ರಾಜೀನಾಮೆ ನೀಡಬೇಕು. ಪೊಲೀಸರೇ ಶಾಂತಿ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಸಾಂತ್ವನ ಹೇಳಲು ಮನಸ್ಸಿಲ್ಲದ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಿಗೆ ಸೂಕ್ತ ಉತ್ತರ ನೀಡಲಾಗುವುದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಚನ್ನರಾಯಪಟ್ಟಣ ರೈತರ ಮೌನ ಪ್ರತಿಭಟನೆ ಹತ್ತಿಕ್ಕಿದ ಪೊಲೀಸರು | ‘ಭೂಸ್ವಾಧೀನ ಹೋರಾಟ ಸಮಿತಿ’ ಮುಖಂಡರ ಬಂಧನ

“ಪೋಲನಹಳ್ಳಿಯ ರೈತ ಪ್ರಮೋದ್‌ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದೆ. ಅವರ ಕಣ್ಣಿಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವರ ಭಾಷಣಕ್ಕೆ ಅಡ್ಡಿಪಡಿಸುತ್ತಾರೆಂದು ಮನ ಬಂದಂತೆ ಥಳಿಸಿದ್ದು, 73 ರೈತರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿರುವುದು ಖಂಡನೀಯ” ಎಂದರು.

“ಸರ್ಕಾರ ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ರೈತರಿಂದ ಕಸಿದುಕೊಂಡಿರುವ ವಸ್ತುಗಳನ್ನು ಮರಳಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ತಿಮ್ಮರಾಯಪ್ಪ, ಪೂಜಪ್ಪ, ದ್ಯಾವಪ್ಪ, ಮಂಜುನಾಥ್, ಜಗದೀಶ್, ಮನೋಜ್‌ ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್