
- ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಶಂಕೆ
- ಆರೋಪಿಗಳಿಗಾಗಿ ಶೋಧ ನಡೆಸಿರುವ ರೈಲ್ವೆ ಪೊಲೀಸರು
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಸಿದ್ಧಾರೂಢ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ಗುಂಟಗಲ್-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನ ಬೋಗಿಯೊಂದರಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಮೃತಪಟ್ಟವರನ್ನು ಅಂದಾಜು 45 ವರ್ಷದವರೆಂದು ಹೇಳಲಾಗಿದ್ದು, ಮಾರಕಾಸ್ತ್ರಗಳಿಂದ ಅವರನ್ನು ಕೊಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ತಡರಾತ್ರಿ 1.10ರ ವೇಳೆಗೆ ಗುಂಟಕಲ್ನಿಂದ ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ರೈಲು ಬಂದಿದೆ. ಕೆಲ ಸಮಯದ ನಂತರ 1.30ರ ವೇಳೆಯಲ್ಲಿ ಸ್ವಚ್ಛತಾ ಕಾರ್ಮಿಕರು ಎಲ್ಲ ಬೋಗಿಯನ್ನು ಸ್ವಚ್ಛಗೊಳಿಸಲು ತೆರಳಿದಾಗ ಮೃತದೇಹ ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ?: ಉತ್ತರ ಪ್ರದೇಶ | ಐಎಎಸ್ ಕನಸು ಹೊತ್ತಿದ್ದ ದಲಿತ ಯುವತಿಯ ಅತ್ಯಾಚಾರಗೈದು ಕೊಲೆ
ರೈಲು ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರು ಇಳಿದು ಹೋದ ಮೇಲೆ, ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಶ್ವಾನದಳ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.
“ಪ್ಲಾಟ್ ಫಾರ್ಮ್ 4ರಲ್ಲಿ ಅಳವಡಿಸಿದ ಹಾಗೂ ಸುತ್ತಮುತ್ತಲಿನ ಸಿಸಿಟಿಟಿವಿ ಕ್ಯಾಮೆರಾವನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಹುಬ್ಬಳ್ಳಿಗೆ ಬರುವ ಹಿಂದಿನ ನಿಲ್ದಾಣಗಳಲ್ಲಿ ಟಿಕೆಟ್ ಪಡೆದವರ ಮಾಹಿತಿ ಮತ್ತು ಅಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸಂಗ್ರಹಿಸಲಾಗುತ್ತಿದೆ” ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.