ಧಾರವಾಡ | ಹರ್ ಘರ್ ತಿರಂಗಾ ಅಭಿಯಾನವನ್ನು ಬಹಿಷ್ಕರಿಸಿದ ಗರಗ ಗ್ರಾಮ

  • ಕೇಂದ್ರ ಸರ್ಕಾರದ ‘ಧ್ವಜ ಸಂಹಿತೆ’ ತಿದ್ದುಪಡಿ ವಿರುದ್ದ ಆಕ್ರೋಶ
  • ಪಾಲಿಸ್ಟರ್‌ ಧ್ವಜವನ್ನು ಬಳಸದಿರುವ ಗ್ರಾಮಸ್ಥರ ತೀರ್ಮಾನ

ಭಾರತವು ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಕ್ಕೆ ಭಾರೀ ಸಿದ್ದತೆ ನಡೆಯುತ್ತಿದೆ. ಕೇಂದ್ರ ಸರ್ಕಾರವು ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಆರಂಭಿಸಿದೆ. ಆದರೆ, ಧಾರವಾಡ ಜಿಲ್ಲೆಯ ಗ್ರಾಮವೊಂದು ಅಭಿಯಾನವನ್ನು ಬಹಿಷ್ಕರಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರವು ‘ಧ್ವಜ ಸಂಹಿತೆ’ಗೆ ತಿದ್ದುಪಡಿ ಮಾಡಿ, ಖಾದಿ ಧ್ವಜದ ಬದಲಾಗಿ, ಪಾಲಿಸ್ಟಾರ್‌ ಧ್ವಜಗಳನ್ನು ಬಳಸಲು ಅನುಮತಿ ನೀಡಿದೆ. ಸರ್ಕಾರದ ತಿದ್ದುಪಡಿಯನ್ನು ವಿರೋಧಿಸಿರುವ ಧಾರವಾಡ ಜಿಲ್ಲೆಯ ಗರಗ ಗ್ರಾಮದ ಗ್ರಾಮಸ್ಥರು, ಹರ್‌ ಘರ್‌ ತಿರಂಗಾ ಅಭಿಯಾನವನ್ನು ಬಹಿಷ್ಕರಿಸಿದ್ದಾರೆ. "ನಾವು ಯಾವುದೇ ಕಾರಣಕ್ಕೂ, ಪಾಲಿಸ್ಟರ್ ಧ್ವಜಗಳನ್ನು ಬಳಸುವುದಿಲ್ಲ. ಖಾದಿ ಧ್ವಜಗಳನ್ನು ಮಾತ್ರ ನಮ್ಮ ಮನೆಗಳ ಮೇಲೆ ಹಾರಿಸುತ್ತೇವೆ" ಎಂದು ಪಟ್ಟುಹಿಡಿದ್ದಿದ್ದಾರೆ.

ಗರಗ ಗ್ರಾಮದ ಹೆಸರು ಕೇಳಿದಾಕ್ಷಣ ಎಲ್ಲರಿಗೂ ನೆನಪಾಗುವುದು ಇಲ್ಲಿ ತಯಾರಾಗುವ ರಾಷ್ಟ್ರಧ್ವಜಗಳು. ಆದರೆ, ಕೇಂದ್ರ ಸರ್ಕಾರವು ಈ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಗ್ರಾಮದಲ್ಲಿ ತಯಾರಾಗುವ ಧ್ವಜಗಳನ್ನು ಖರೀದಿಸಿಲ್ಲ. ಇದರಿಂದ ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. 

"ಹಲವು ದಶಕಗಳಿಂದ ಇಡೀ ದೇಶಕ್ಕೆ ಖಾದಿ ಧ್ವಜವನ್ನು ಪೂರೈಕೆ ಮಾಡುತ್ತಿರುವ ನಾವುಗಳು, ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದ ಪಾಲಿಸ್ಟರ್‌ ಬಟ್ಟೆಯ ಧ್ವಜವನ್ನು ಬಳಸಲು ಸಾಧ್ಯವಿಲ್ಲ" ಎಂದು ಗ್ರಾಮಸ್ಥರು ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ? : ಕೇಂದ್ರ ಸರ್ಕಾರದ ನೂತನ ಧ್ವಜ ಸಂಹಿತೆ ಜಾರಿ ಎಫೆಕ್ಟ್ : ಮುಚ್ಚಿ ಹೋಗುವ ಆತಂಕದಲ್ಲಿ ಕರ್ನಾಟಕದ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರ

ಗರಗ ಗ್ರಾಮದಲ್ಲಿ ಖಾದಿ ಬಟ್ಟೆ ತಯಾರಿಸುವ ಹಿರಿಯ ಕಾರ್ಮಿಕರೊಬ್ಬರು ಮಾತನಾಡಿ, “ಕೇಂದ್ರ ಸರ್ಕಾರವು ಖಾದಿ ಧ್ವಜವನ್ನು ತಯಾರಿಸಲು ನಮಗೆ ಹೇಳಿದ್ದರೆ, ಇಷ್ಟೊತ್ತಿಗೆ ಇಡೀ ದೇಶಕ್ಕೆ ಸಾಕಾಗುವಷ್ಟು ಧ್ವಜ ತಯಾರಿಸುತ್ತಿದ್ದೆವು. ಆದರೆ, ಸರ್ಕಾರವು ನಮ್ಮ ಊರಿನ ಖಾದಿ ಭಂಡಾರಕ್ಕೆ ಅವಕಾಶವನ್ನು ಮಾಡಿಕೊಟ್ಟಿಲ್ಲ. ಹಾಗಾಗಿ, ನಾವು ನಮ್ಮ ಗ್ರಾಮದಲ್ಲಿ ಹರ್ ಘರ್ ತಿರಂಗಾ ಆಚರಣೆ ಮಾಡಲ್ಲ” ಎಂದಿದ್ದಾರೆ. 

ಗರಗ ಖಾದಿ ಬಂಡಾರದ ವ್ಯವಸ್ಥಾಪರು ಮಾತನಾಡಿ, “ಕೇಂದ್ರ ಸರ್ಕಾರವು ಕಳೆದ ವರ್ಷ ಮುಂಗಡವಾಗಿ 10 ಸಾವಿರ ಧ್ವಜ ತಯಾರಿಸಿ ಕೊಡಬೇಕೆಂದು ಹೇಳಿತ್ತು. ಇದರಂತೆ ನಾವು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದೆವು. ಆದರೆ, ಅದನ್ನು ಪಡೆಯಲು ಸರ್ಕಾರ ಬರಲೇ ಇಲ್ಲ. ಈ ವರ್ಷ ಕೂಡ ಧ್ವಜ ತಯಾರಿಸಲು ನಮಗೆ ಹೇಳಿದ್ದರೇ, ನಾವೇ ತಯಾರಿಸಿ ಕೊಡುತ್ತಿದ್ದೆವು. ನಮ್ಮಲ್ಲಿ ಇಡೀ ದೇಶಕ್ಕೆ ಧ್ವಜ ಪೂರೈಸುವಷ್ಟು ಸಾಮರ್ಥ್ಯವಿತ್ತು” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್