ಧಾರವಾಡ| ಕೃಷಿಕ ಮಹಿಳೆಯರ ತ್ವಚೆ ರಕ್ಷಣೆ ಮಾಡುವ  ಏಪ್ರಾನ್ ದಿರಿಸು ಅಭಿವೃದ್ದಿ

apron
  • ಅತಿ ನೇರಳೆ ಕಿರಣಗಳು, ರಾಸಾಯನಿಕದಿಂದ ತ್ವಚೆಗೆ ಹಾನಿ
  • ಶರ್ಟ್‌ ಮಾದರಿಯಲ್ಲಿ ಏಪ್ರಾನ್‌ ತಯಾರಿಕೆ

ಕೃಷಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ದಿನವಿಡೀ ಬಿಸಿಲು ಮಳೆ ಎನ್ನದೆ ಪುರುಷರಿಗೆ ಸಮಾನವಾಗಿ ಕೃಷಿ ಕೆಲಸದಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮಹಿಳೆಯರ ತ್ವಚೆ ಅತಿ ಸೂಕ್ಷ್ಮವಾಗಿದ್ದು, ಕೃಷಿಕ ಮಹಿಳೆಯರ ತ್ವಚೆಗೆ  ಸೂರ್ಯನ ಅತಿ ನೇರಳೆ ಕಿರಣಗಳು (ಯುವಿ ರೇಸ್) ಹಾನಿ ಮಾಡುತ್ತವೆ. ಇದರಿಂದ ಅನೇಕ ಚರ್ಮ ಸಂಬಂಧಿತ ಕಾಯಿಲೆಗಳು ಬರುತ್ತವೆ. ಇದನ್ನು ಮನಗಂಡ ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಕಾಲೇಜಿನ ಜವಳಿ ಹಾಗೂ ವಸ್ತ್ರ ವಿಭಾಗದ ಸಂಶೋಧಕರು ತ್ವಚೆಯನ್ನು ರಕ್ಷಣೆ ಮಾಡುವ ಏಪ್ರಾನ್‌ನನ್ನು ಸಿದ್ದಪಡಿಸಿದ್ದಾರೆ.

ದಿನವಿಡೀ ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರು ಬಿಸಿಲಿಗೆ ಹೆಚ್ಚಾಗಿ ಮೈ ಒಡ್ಡಿಕೊಳ್ಳುತ್ತಾರೆ. ಸೂರ್ಯನ ಅತಿ ನೇರಳೆ ಕಿರಣಗಳು ಮತ್ತು ಕೃಷಿಗೆ ಸಿಂಪಡಿಸುವ ರಾಸಾಯನಿಕಗಳು ಮಹಿಳೆಯರ ತ್ವಚೆಗೆ ತಾಕುವುದರಿಂದ ಹಲವು ಅಪಾಯಕಾರಿ ಕಾಯಿಲೆಗಳು ಉಂಟಾಗುತ್ತವೆ. ಹೀಗಾಗಿ ಮಹಿಳೆಯರ ತ್ವಚೆಗೆ ಶಾಶ್ವತ ರಕ್ಷಣೆ ನೀಡುವ ಉದ್ದೇಶದಿಂದ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆಯ ಭಾಗವಾಗಿ ಕೃಷಿ ನಿರತ ಮಹಿಳೆ ಯೋಜನೆಯ ಮುಖ್ಯಸ್ಥೆ ಡಾ.ಕೆ.ಜೆ ಸಣ್ಣಪಾಪಮ್ಮ ಅವರ ನೇತೃತ್ವದಲ್ಲಿ ವಿಶೇಷ ಏಪ್ರಾನ್‌ನನ್ನು ಸಿದ್ಧಪಡಿಸಲಾಗಿದೆ.

ಹತ್ತಿ ಮತ್ತು ಕೆಲವೊಂದು ನಿಸರ್ಗದತ್ತವಾಗಿ ಲಭ್ಯವಿರುವ ದ್ರಾವಣಗಳನ್ನು ಸಿಂಪಡಿಸಿ ಅತಿ ನೇರಳೆ ಮತ್ತು ರಾಸಾಯನಿಕಗಳಿಂದ ರಕ್ಷಣೆ ಮಾಡುವ ಹಾಗೆ ಏಪ್ರಾನ್‌ನನ್ನು ಅಭಿವೃದ್ದಿಪಡಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ಧಾರವಾಡ | ಕಾಮಗಾರಿ ಮುಗಿದು ಎರಡು ವರ್ಷವಾದರೂ ಉದ್ಘಾಟನೆ ಭಾಗ್ಯ ಕಾಣದ ಪಶು ಆರೋಗ್ಯ ಕೇಂದ್ರ

“ಕೃಷಿ ಪ್ರಧಾನ ಕುಟುಂಬದಲ್ಲಿ ದೀರ್ಘ ಕಾಲದವರೆಗೆ ಬಿಸಿಲಿನಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಮಹಿಳೆಗಿದೆ. ಧೂಳು , ರಾಸಾಯನಿಕ ಹೀಗೆ ಎಲ್ಲವೂ ಮಹಿಳೆಯ ಆರೋಗ್ಯವನ್ನು ಹಾಳು ಮಾಡುತ್ತದೆ. ಕೃಷಿ ಕೆಲಸ ಮಾಡುವ ಮಹಿಳೆಯರ ಚರ್ಮ ಕಾಲಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತವೆ. ಚರ್ಮದ ಕ್ಯಾನ್ಸರ್‍‌ಗೆ ತುತ್ತಾಗುವ ಅಪಾಯವು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಏಪ್ರಾನ್‌ನನ್ನು ಅಭಿವೃದ್ದಿಪಡಿಸಿದ್ದು, ಫಲ ನೀಡಿದೆ” ಎಂದು ಡಾ.ಕೆ.ಜೆ ಸಣ್ಣಪಾಪಮ್ಮ ತಿಳಿಸಿದ್ದಾರೆ.

“ಮಹಿಳೆಯರು ಕೃಷಿ ಕೆಲಸ ಮಾಡುವಾಗ  ಪುರುಷರ ಧರಿಸುವ ಶರ್ಟ್‌ಗಳನ್ನು ಬಳಸುತ್ತಿದ್ದಾರೆ. ಆದ್ದರಿಂದ ಈ ಏಪ್ರಾನ್‌ಗಳನ್ನು ಅದೇ ಶರ್ಟ್ ಮಾದರಿಯಲ್ಲಿ ಸಿದ್ದಪಡಿಸಲಾಗಿದೆ. ಈ ಏಪ್ರಾನ್‌ ದೇಹವನ್ನು ಮಾತ್ರವಲ್ಲದೆ  ಅತಿ ನೇರಳೆ ಕಿರಣದಿಂದ ಕೂದಲನ್ನು ಸಹ ರಕ್ಷಿಸಲು ಸಹಾಯವಾಗುತ್ತದೆ” ಎಂದು ಹೇಳಿದ್ದಾರೆ.

“ಸುಮಾರು 50 ಒಗೆತದ ನಂತರವೂ ಈ ಏಪ್ರಾನ್ ತನ್ನ ರಕ್ಷಣಾ ಗುಣವನ್ನು ಕಳೆದುಕೊಂಡಿಲ್ಲ ಎನ್ನುವುದು ಸಂಶೋಧನಾ ಹಂತದಲ್ಲಿ ತಿಳಿದು ಬಂದಿದೆ. ಒಂದು ಏಪ್ರಾನ್‌ಗೆ ಸುಮಾರು ₹ 300ರಿಂದ  400 ವರೆಗೂ ದರ ನಿಗದಿಪಡಿಸುವ ಬಗ್ಗೆ ಚರ್ಚಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ  ಪ್ರಾಯೋಗಿಕ ಜಮೀನಿನುಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ  ಈ ಏಪ್ರಾನ್‌ಗಳನ್ನು ನೀಡಿ ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿಲಾಗುತ್ತಿದೆ ಎಂದು ಸಣ್ಣಪಾಪಮ್ಮ ಹೇಳಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್