ಧಾರವಾಡ | ಜಿಲ್ಲಾಡಳಿತದ ತಾರತಮ್ಯ: ಪ್ರಸಿದ್ದ ಕೋಟೆಗಿಲ್ಲ ದೀಪಾಲಂಕಾರ

  • ಜಿಲ್ಲಾಡಳಿತದ ವಿರುದ್ದ ಸಾರ್ವಜನಿಕರಿಂದ ಆಕ್ರೋಶ
  •  ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದ ಜಿಲ್ಲಾಧಿಕಾರಿ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ, ದೇಶದ ಎಲ್ಲ ಐತಿಹಾಸಿಕ ಪ್ರದೇಶಗಳು ದೀಪಾಲಂಕಾರದಿಂದ ಸಿಂಗಾರಗೊಂಡಿವೆ. ಆದರೆ, ಧಾರವಾಡ ಜಿಲ್ಲಾಡಳಿತದ ತಾರತಮ್ಯ ನೀತಿಯಿಂದಾಗಿ ಐತಿಹಾಸಿಕ ಕೋಟೆಯು ಕತ್ತಲಲ್ಲಿ ಮುಳುಗುವಂತಾಗಿದೆ ಎಂದು ಧಾರವಾಡದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇದನ್ನು ಚಾಲುಕ್ಯರು, ಬಹುಮನಿ ಸುಲ್ತಾನರು, ವಿಜಯನಗರದ ಅರಸರು, ಬಿಜಾಪುರದ ಸುಲ್ತಾನರು ಹಾಗೂ ಆದಿಲ್‌ ಶಾಹಿ ಮನೆತನದ ಅರಸರು ಆಳ್ವಿಕೆ ನಡೆಸಿದ್ದಾರೆಂದು ಇತಿಹಾಸದಲ್ಲಿ ಹೇಳಲಾಗಿದೆ.

ಆದಿಲ್‌ಶಾಹಿಗಳ ಆಳ್ವಿಕೆಯ ಅವಧಿಯಲ್ಲಿ ಮನ್ನ ಕಿಲ್ಲಾದಲ್ಲಿ ಸುಂದರವಾದ ಕೋಟೆಯು ನಿರ್ಮಾಣವಾಗಿದ್ದು, ಇದನ್ನು ಮೊಘಲರು, ಮರಾಠರು, ಮೈಸೂರಿನ ಹೈದರಾಲಿ ಒಳಗೊಂಡಂತೆ ಬ್ರಿಟಿಷರು ಕೂಡ ಕೋಟೆಯನ್ನು ವಶಪಡಿಸಿಕೊಂಡು ಆಳ್ವಿಕೆ ನಡೆಸಿದ್ದರು. 

"ಸದ್ಯ ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಈ ಕೋಟೆಯು, ಸ್ವಾತಂತ್ರ್ಯ ಪಡೆದ ನಂತರ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೋಟೆಯನ್ನು ಪ್ರವಾಸಿ ಕ್ಷೇತ್ರವನ್ನಾಗಿ ಮಾಡದೇ, ಕಡೆಗಣಿಸಲಾಗಿದೆ" ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

"ಧಾರವಾಡ ಜಿಲ್ಲಾಡಳಿತವು ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲೂ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು, ಮುಖ್ಯ ರಸ್ತೆ, ಸರ್ಕಾರಿ ಕಟ್ಟಡ ಹಾಗೂ ಐತಿಹಾಸಿಕ ಪ್ರವಾಸಿ ತಾಣಗಳಿಗೆ ತ್ರಿವರ್ಣ ಧ್ವಜ ಹೋಲುವ ಬೆಳಕಿನ ದೀಪಗಳಿಂದ ಅಲಂಕರಿಸಿದ್ದು, ಮನ್ನ ಕಿಲ್ಲಾದ ಕೋಟೆಯನ್ನು ಸಿಂಗರಿಸದೇ ಹಾಗೆಯೇ ಬಿಟ್ಟು, ತಾರತಮ್ಯವನ್ನು ಮಾಡಿದೆ" ಎಂದು ಆಕ್ರೋಶ ವ್ಯಕ್ತವಾಗಿದೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಸ್ವಾತಂತ್ರ್ಯ ದಿನಾಚರಣೆ: ಈದ್ಗಾ ಮೈದಾನದಲ್ಲಿ ಪೊಲೀಸರಿಂದ ಬಿಗಿ ಭದ್ರತೆ

ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ವಿರುದ್ಧ ಕಿಡಿಕಾರಿರುವ ಸಾಮಾಜಿಕ ಹೋರಾಟಗಾರ ಪಿ.ಹೆಚ್‌ ನೀರಲಕೇರಿ, “ಕಿಲ್ಲಾ ಕೊಟೆಯನ್ನು ಸುಮಾರು ವರ್ಷದಿಂದ ಜಿಲ್ಲಾಡಳಿತವು ಕಡೆಗಣಿಸುತ್ತಾ ಬಂದಿದ್ದು, ಇದರ ವಿರುದ್ಧ ಸಾಕಷ್ಟು ಬಾರಿ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದಿದ್ದಾರೆ.

“ಕಿಲ್ಲ ಕೋಟೆಯನ್ನು ಮಾತ್ರವಲ್ಲದೇ ಐತಿಹಾಸಿಕ ಮಹತ್ವವಿರುವ ದುರ್ಗಾದೇವಿಯ ಗುಡಿಯನ್ನು ಕೂಡ ಜಿಲ್ಲಾಡಳಿತವು ನಿರ್ಲಕ್ಷಿಸಿದೆ. ಸರ್ಕಾರವು ಐತಿಹಾಸಿಕ ದಿನಗಳ ಸಮಯದಲ್ಲಿ ಇಂತಹ ಸ್ಥಳಗಳ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವಂತಹ ಕೆಲಸವನ್ನು ಮಾಡಬೇಕು. ಆದರೆ, ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಗರ ವ್ಯಾಪ್ತಿಯಲ್ಲಿರುವ ಸ್ಥಳಗಳಿಗೆ ಪಾಲಿಕೆ ವತಿಯಿಂದ ದೀಪಾಲಂಕಾರ ಮಾಡಲಾಗಿದ್ದು, ಕಿಲ್ಲ ಕೋಟೆಗೆ ಸಿಂಗಾರ ಮಾಡದಿರುವ ಬಗ್ಗೆ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು” ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್