- ನಾಲ್ಕು ಕಥೆಗಳಿಗೂ ತಲಾ 5 ಸಾವಿರ ಬಹುಮಾನ
- ಜನವರಿ ವಿಶೇಷಾಂಕದಲ್ಲಿ ಕಥೆಗಳು ಪ್ರಕಟ
ಅಕ್ಷರ ಸಂಗಾತ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆಯೋಜಿಸಿದ್ದ ‘ಯುವ ಕಥಾ ಸ್ಪರ್ಧೆ’ಯಲ್ಲಿ ನಾಲ್ವರು ಯುವ ಸಾಹಿತಿಗಳು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಥಾ ಬಹುಮಾನವನ್ನು ಇಬ್ಬರು ಸಮಾನವಾಗಿ ಹಂಚಿಕೊಂಡಿದ್ದು, ಧಾರವಾಡದ ಸಂಜೋತಾ ಪುರೋಹಿತ ಅವರ 'ಬೆಲಾಜಿಯೋದ ಗರ್ಭದೊಳಗೆ' ಮತ್ತು ತುಮಕೂರು ಜಿಲ್ಲೆಯ ಗುಬ್ಬಿ -ತಾಲ್ಲೂಕಿನ ಕಲ್ಲೂರಿನ ಗೋವಿಂದರಾಜು ಎಂ.ಕಲ್ಲೂರು ಅವರ 'ಮಡಿಲೊಳಗಣ ಕಳೇಬರವು' ಕಥಾ ಬಹುಮಾನ ಪಡೆದುಕೊಂಡಿವೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದ ಸಿದ್ದು ಸತ್ಯಣ್ಣವರ ಅವರ 'ಮಂಜಪ್ಪ ಎಂಬ ಗೃಹಿಣಿಯೂ' ಹಾಗೂ ರೋಣ ತಾಲ್ಲೂಕಿನ ಡ.ಸ. ಹಡಗಲಿಯ ಅಂದಯ್ಯ ಅರವಟಗಿಮಠ ಅವರ 'ಧರ್ಮಕೂ ಕರ್ಮಕೂ ಜಗಳ ನಡೆದೈತಿ' ಕಥೆಗಳು ಒಪ್ಪಿತ ಕಥೆಗಳಾಗಿ ಆಯ್ಕೆಯಾಗಿವೆ.
ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ಗೆ ಆಯ್ಕೆಯಾದ ಗ್ರಾಮೀಣ ಪ್ರತಿಭೆ ನವೀನ್ ಕಾಂಬ್ಲೆ
ಹಿರಿಯ ಕಥೆಗಾರರಾದ ಕೆ ಸತ್ಯನಾರಾಯಣ ಹಾಗೂ ಅನುಪಮಾ ಅವರು ತೀರ್ಪುಗಾರರಾಗಿದ್ದರು. ಬಹುಮಾನಕ್ಕೆ ಆಯ್ಕೆಯಾದ ನಾಲ್ಕೂ ಕಥೆಗಳಿಗೂ ತಲಾ 5 ಸಾವಿರ ನಗದು ಬಹುಮಾನ ನೀಡಲಿದ್ದು, ಅಕ್ಷರ ಸಂಗಾತದ ಜನವರಿ ವಿಶೇಷಾಂಕದಲ್ಲಿ ಈ ಕಥೆಗಳು ಪ್ರಕಟಗೊಳ್ಳಲಿವೆ ಎಂದು ಪತ್ರಿಕೆಯ ಸಂಪಾದಕ ಟಿ.ಎಸ್.ಗೊರವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023ರ ಜನವರಿಯಲ್ಲಿ ಧಾರವಾಡದಲ್ಲಿ ನಡೆಯುವ ಪತ್ರಿಕೆಯ 5ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.