ರಾಜ್ಯ ರಾಜಕೀಯ ಆಟದಲ್ಲಿ ಇನ್ನೂ ನಾನಿದ್ದೇನೆ ಎಂಬುದನ್ನು ಬಿಜೆಪಿಗೆ ಎಚ್ಚರಿಸಿದರೇ ಯಡಿಯೂರಪ್ಪ?

ರಾಜಕೀಯವಾಗಿ ತಮ್ಮನ್ನು ಹೈಜಾಕ್‌ ಮಾಡಲು ಯತ್ನಿಸುವ ಯಾವುದೇ ನಾಯಕರ ನಡೆಯನ್ನು ಯಡಿಯೂರಪ್ಪ ನೋಡಿಕೊಂಡು ಸುಮ್ಮನೇ ಕುಳಿತುಕೊಳ್ಳುವ ಸ್ವಭಾವದವರಲ್ಲ. ಹೀಗಾಗಿಯೇ “ಬಿಜೆಪಿ ಕೆಲವೇ ದಿನದಲ್ಲಿ ಸಾಮೂಹಿಕ ನೇತೃತ್ವದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದೆ” ಎಂದು ಯಾರಿಗೆ ಸಂದೇಶ ರವಾನಿಸಬೇಕೋ ಅವರಿಗೆ ತಲುಪಿಸಿದ್ದಾರೆ.
b s yediyurappa

ಸಾಮೂಹಿಕ ನಾಯಕತ್ವದಲ್ಲೇ ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಸ್ವಾತಂತ್ರ್ಯ ದಿನದಂದು ಘೋಷಿಸುವ ಮೂಲಕ ರಾಜ್ಯ ರಾಜಕೀಯ ಆಟದಲ್ಲಿ ಮತ್ತೆ ನಾನಿರುವೆ ಎಂಬುದನ್ನು ಬಹಿರಂಗವಾಗಿಯೇ ಬಿಜೆಪಿಗೆ ಸಂದೇಶ ರವಾನಿಸಿದ್ದಾರೆಯೇ ಎನ್ನುವ ಚರ್ಚೆ ಈಗ ಹುಟ್ಟಿಕೊಂಡಿದೆ. 

ಯಡಿಯೂರಪ್ಪ ಅವರು ಸಾಮೂಹಿಕ ನಾಯಕತ್ವದ ಜಪ ಮಾಡಲು ಬಿಜೆಪಿಯ ಕರ್ನಾಟಕ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಹೇಳಿಕೆಯೇ ಮುಖ್ಯ ಕಾರಣ ಎನ್ನಲಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾಗುತ್ತಾರೆ ಎನ್ನುವ ಮಾತುಗಳು ಪಕ್ಷದೊಳಗೆ ಸಂಚಲನ ಮೂಡಿಸಿದ್ದವು. ಕೂಡಲೇ ಅರುಣ್‌ ಸಿಂಗ್‌ ದೆಹಲಿಯಲ್ಲಿ ಸುದ್ದಿಗೋಷ್ಠಿ ಕರೆದು, “ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆ ಎದುರಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದರು. 

ಅರುಣ್‌ ಸಿಂಗ್‌ ಹೇಳಿಕೆ ನೀಡಿದ ಬೆನ್ನಲ್ಲೇ ಸೋಮವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬಿಜೆಪಿ ಆಯೋಜಿಸಿದ್ದ ‘ಅಮೃತ ಭಾರತಿಗೆ ಕರುನಾಡ ಜಾತ್ರೆ’ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಗಿಯಾಗಿ, ರಾಜ್ಯ ಬಿಜೆಪಿ ನಾಯಕರ ಸಮ್ಮುಖದಲ್ಲೇ “ಸಾಮೂಹಿಕ ನಾಯಕತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲಾಗುವುದು” ಎಂಬ ಸಂದೇಶ ಕಳುಹಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಆಡುವ ಪ್ರತಿ ಮಾತಿನ ಹಿಂದೆ ಒಳಾರ್ಥ ಇದ್ದೇ ಇರುತ್ತದೆ ಎಂಬುದು ರಾಜಕಾರಣದಲ್ಲಿ ಅವರನ್ನು ಬಲ್ಲ ಬೊಮ್ಮಾಯಿ ಆದಿಯಾಗಿ ಎಲ್ಲರಿಗೂ ತಿಳಿದ ಸಂಗತಿ. ಯಾವುದೇ ಕಾರಣಕ್ಕೂ ಯಡಿಯೂರಪ್ಪರನ್ನು ಮೀರಿ ರಾಜ್ಯ ಬಿಜೆಪಿ ಮತ್ತೊಮ್ಮೆ ನಡೆದುಕೊಳ್ಳುತ್ತದೆ ಎಂಬುದು ಸದ್ಯಕ್ಕೆ ಕಷ್ಟ. ಏಕೆಂದರೆ ಬಿಜೆಪಿ ಪಾಲಿಗೆ ಯಡಿಯೂರಪ್ಪ ಎಷ್ಟರ ಮಟ್ಟಿಗೆ ಅನಿವಾರ್ಯ ಎಂಬುದನ್ನು 2013ರ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರತ್ಯಕ್ಷವಾಗಿಯೇ ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ.

ಮುಖ್ಯಮಂತ್ರಿ ಗಾದಿಯಿಂದ ಯಡಿಯೂರಪ್ಪರನ್ನು ಬಿಜೆಪಿ ಸದ್ಯಕ್ಕೆ ಕೆಳಗಿಳಿಸಿರಬಹುದೇ ಹೊರತು ರಾಜಕಾರಣದಿಂದಲ್ಲ! ಹಾಗೆಯೇ ಬೊಮ್ಮಾಯಿ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿದ್ದು ಇದೇ ಯಡಿಯೂರಪ್ಪ. ಕಾರಣ ಯಡಿಯೂರಪ್ಪರ ಬಲಗೈ ಬಂಟ ಎಂದೇ ಬೊಮ್ಮಾಯಿ ಗುರುತಿಸಿಕೊಂಡಿದ್ದರು. ಜೊತೆಗೆ ಸ್ವಜಾತಿ ಪ್ರೇಮವೂ ಅದರಲ್ಲಿ ಬೆರೆತಿತ್ತು. ಆದರೆ, ಈಗ ತಮ್ಮ ಮುಂದೆಯೇ ಬೊಮ್ಮಯಿ ಅವರನ್ನು ಎತ್ತಿ ಕಟ್ಟಿ ಮಾತನಾಡಲು ಹೊರಟರೆ ಯಡಿಯೂರಪ್ಪನವರಿಗೆ ಹೇಗಾಗಿರಬೇಡ? ಅಲ್ಲದೇ ರಾಜಕೀಯವಾಗಿ ತಮ್ಮನ್ನು ಹೈಜಾಕ್‌ ಮಾಡಲು ಯತ್ನಿಸುವ ಯಾವುದೇ ನಾಯಕರ ನಡೆಯನ್ನು ಯಡಿಯೂರಪ್ಪ ನೋಡಿಕೊಂಡು ಸುಮ್ಮನೇ ಕುಳಿತುಕೊಳ್ಳುವ ಸ್ವಭಾವದವರಲ್ಲ. ಹೀಗಾಗಿಯೇ “ಬಿಜೆಪಿ ಕೆಲವೇ ದಿನದಲ್ಲಿ ಸಾಮೂಹಿಕ ನೇತೃತ್ವದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿದೆ” ಎಂದು ಯಾರಿಗೆ ಸಂದೇಶ ರವಾನಿಸಬೇಕೋ ಅವರಿಗೆ ತಲುಪಿಸಿದ್ದಾರೆ.

ಕಾಂಗ್ರೆಸ್‌ ಹಾದಿಯಲ್ಲೇ ಬಿಜೆಪಿ!

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾಂಗ್ರೆಸ್ಸಿಗೆ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಲಾಭವಾಗಿಯೇ ಪರಿಣಮಿಸಿದೆ. ಸಿದ್ದರಾಮೋತ್ಸವ ಮೂಲಕ ಕಾಂಗ್ರೆಸ್‌ ನಾಯಕರು ಚುನಾವಣೆ ರಣಕಹಳೆಯನ್ನು ಈಗಾಗಲೇ ಮೊಳಗಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಒಳಗೊಳಗೆ ಮುಸುಕಿನ ಗುದ್ದಾಟದಲ್ಲಿದ್ದ ಡಿ ಕೆ ಶಿವಕುಮಾರ್‌ ಅವರು ವೇದಿಕೆ ಮೇಲೆಯೇ ಸಿದ್ದರಾಮಯ್ಯ ಅವರನ್ನು ಅಪ್ಪಿಕೊಳ್ಳುವ ಮೂಲಕ ಸದ್ಯಕ್ಕೆ ನಾವು ಒಂದಾಗಿದ್ದೇವೆ ಎಂಬುದನ್ನು ಸಾರಿದರು. ಇದರ ತಂತ್ರಗಾರಿಕೆ ರಾಹುಲ್‌ ಗಾಂಧಿ ಅವರದ್ದು ಎಂಬುದನ್ನು ಬೇರೆ ಹೇಳಬೇಕಿಲ್ಲ.

ವ್ಯಕ್ತಿಕೇಂದ್ರಿತ ರಾಜಕಾರಣಕ್ಕೆ ಕರ್ನಾಟಕದಲ್ಲಿ ಅವಕಾಶ ಮಾಡಿಕೊಡದೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸೋಣ ಎಂದು ರಾಹುಲ್‌ ಗಾಂಧಿ ಸಂದೇಶ ಸಾರಿದರು. ಆ ಮೂಲಕ ಕರ್ನಾಟಕ ರಾಜಕಾರಣ ಭಿನ್ನ ಎಂಬುದು ಮತ್ತೆ ಸಾಬೀತಾಗಿದೆ. ಏಕೆಂದರೆ ಕಳೆದ ಪಂಚರಾಜ್ಯಗಳ ಚುನಾವಣೆ ಗಮನಿಸಿದರೆ ಮುಖ್ಯಮಂತ್ರಿ ಅಭ್ಯರ್ಥಿಯ ಮುಖವಿಟ್ಟುಕೊಂಡು ಹೋದ ಕಾಂಗ್ರೆಸ್‌ ಪಂಜಾಬಿನಲ್ಲಿ ನೆಲ ಕಚ್ಚಿದ್ದು ಇನ್ನೂ ಮಾಸಿಲ್ಲ. 

ಈ ಸುದ್ದಿ ಓದಿದ್ದೀರಾ? ‘ಸರ್ಕಾರ ನಡೀತಾ ಇಲ್ಲ..’ ಎಂಬ ಹೇಳಿಕೆ ಹಿಂದಿನ ಮರ್ಮವೇನು? ಮಾಧುಸ್ವಾಮಿ ಮೇಲೆ ಯಡಿಯೂರಪ್ಪ ಬಣ ಮುಗಿಬಿದ್ದಿದ್ಯಾಕೆ?

ಈ ಎಲ್ಲ ಕಾರಣಕ್ಕಾಗಿಯೇ ರಾಹುಲ್‌ ಗಾಂಧಿ ಅವರು ಕರ್ನಾಟಕದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗೋಣ ಎನ್ನುವ ಮೂಲಕ ಬಿಜೆಪಿ ರಾಜಕೀಯ ತಂತ್ರಗಾರಿಕೆಯ ಹಾದಿಯನ್ನು ಒಂದು ರೀತಿಯಲ್ಲಿ ಸುಗಮಗೊಳಿಸಿದ್ದಾರೆ. ಏಕೆಂದರೆ ಕಾಂಗ್ರೆಸ್‌ ಅಧಿಕೃತವಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದರೆ ಬಿಜೆಪಿ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಿಸುವುದು ಅನಿವಾರ್ಯವಾಗುತಿತ್ತು. ಅಂತಹ ಸವಾಲನ್ನು ರಾಹುಲ್‌ ಗಾಂಧಿ ಸೃಷ್ಟಿಸದೇ ರಾಜಕೀಯ ಚದುರಂಗದಾಟದ ಕುತೂಹಲ ಹೆಚ್ಚಿಸಿ ಹೋಗಿದ್ದಾರೆ.

ಕಾಂಗ್ರೆಸ್ಸಿನಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದನ್ನೇ ಕಾಯ್ದು ಕುಳಿತಿದ್ದ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ನಿರಾಸೆ ಮೂಡಿದ್ದು ಸುಳ್ಳಲ್ಲ. ಕಾಂಗ್ರೆಸ್ಸಿಗೆ ಕೌಂಟರ್‌ ಆಗಿ ಯಾವ ನಾಯಕತ್ವವನ್ನು ಮುಂದುಮಾಡಿಕೊಂಡು ಚುನಾವಣೆಗೆ ಹೋಗಬೇಕು ಎನ್ನುವ ಗೊಂದಲ ಪಕ್ಷದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಮೇಲ್ನೋಟಕ್ಕೆ ಬೊಮ್ಮಾಯಿಯೇ ತಮ್ಮ ನಾಯಕ ಎಂದು ಹೇಳಿಕೊಳ್ಳುತ್ತಿದ್ದರೂ ವಿವಾದಗಳ ಸುಳಿಯಲ್ಲಿ ಬೊಮ್ಮಾಯಿ ಕಳಾಹೀನರಾಗಿದ್ದಾರೆ. ಹೀಗಾಗಿ ಮತ್ತೊಮ್ಮೆ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಗೆ ಅನಿವಾರ್ಯವಾಗುತ್ತಾರಾ? ಈ ಪ್ರಶ್ನೆಗೆ ಬರುವ ದಿನಗಳು ಉತ್ತರಿಸಲಿವೆ.

ನಿಮಗೆ ಏನು ಅನ್ನಿಸ್ತು?
2 ವೋಟ್