ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ನಿಮಗೆ ಚುಚ್ಚಿದ್ದಕ್ಕೆ ನೋವಾಯ್ತಾ?: ಸಿದ್ದರಾಮಯ್ಯ ಕುಹಕ

Pay CM
  • ʼ#PayCMʼ ಮತ್ತು ʼ#40PercentSarkaraʼ ಹ್ಯಾಷ್‌ಟ್ಯಾಗ್‌ನಡಿ ಸರಣಿ ಟ್ವೀಟ್‌
  • ʼಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದವರ ಬಗ್ಗೆ ಹೇಳಿದರೆ ಅಪರಾಧʼ

ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ. ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ʼ#PayCMʼ ಮತ್ತು ʼ#40PercentSarkaraʼ ಹ್ಯಾಷ್‌ಟ್ಯಾಗ್‌ನಡಿ ಸರಣಿ ಟ್ವೀಟ್‌ ಮಾಡಿ, “ಪೊಲೀಸರ ಮೂಲಕ ಎಷ್ಟು ಜನರ ಬಾಯಿ ಮುಚ್ಚಿಸುತ್ತೀರಿ ಬಿಜೆಪಿಯವರೇ? ಎಷ್ಟು ಮಂದಿಯನ್ನು ಜೈಲಿಗೆ ಹಾಕ್ತೀರಿ? ರಾಜ್ಯದ ತುಂಬಾ ಜೈಲು ಕಟ್ಟಿಸ್ತಿರಾ? ಜನ ಬಂಡೆದಿದ್ದಾರೆ, ಎಚ್ಚರ! ಎಂದು ಹೇಳಿದ್ದಾರೆ.

“ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪ-ಪ್ರತ್ಯಾರೋಪ ಸಹಜ ವಿದ್ಯಮಾನವಾದರೂ ಇದನ್ನು ಇಷ್ಟೊಂದು ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ಯಾರೋ ನಿಮಗೆ ಚುಚ್ಚಿದ್ದಕ್ಕೆ ನೋವಾಯ್ತಾ?” ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯ ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿಯೇ ನನ್ನ ವಿರುದ್ಧದ ಕುತ್ಸಿತ ಹೇಳಿಕೆಗಳು, ವಿರೂಪಗೊಳಿಸಿದ ಫೋಟೊಗಳ ವಿವರ ಕೊಡುತ್ತೇನೆ, ಅವರನ್ನೂ ಬಂಧಿಸಿ. ನಾನು ಅಧಿಕಾರದಲ್ಲಿದ್ದಾಗಲೇ ಇಂಥವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿಲ್ಲ. ಇದು ನಾನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಟ್ಟ ಗೌರವ” ಎಂದಿದ್ದಾರೆ.

 ಈ ಸುದ್ದಿ ಓದಿದ್ದೀರಾ? ಮಳೆಗಾಲ ಅಧಿವೇಶನ | ವಿಧಾನ ಪರಿಷತ್ತಿನಲ್ಲಿ ಗದ್ದಲ ಸೃಷ್ಟಿಸಿದ ‘ಪೇ ಸಿಎಂ’ ಪೋಸ್ಟರ್ ವಿವಾದ: ಸದನ ಮುಂದೂಡಿಕೆ

“ಬಿಜೆಪಿ ಗೆಲುವಿನ ಸೂತ್ರವೇ ಸುಳ್ಳು ಮಾಹಿತಿಗಳ ಅಪಪ್ರಚಾರ, ವಿರೋಧಿಗಳ ಚಾರಿತ್ರ್ಯಹನನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಸಾಮಾಜಿಕ ಮಾಧ್ಯಮವೂ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಬಿಜೆಪಿಯವರಷ್ಟು ದುರುಪಯೋಗ ಪಡಿಸಿಕೊಂಡ ರಾಜಕೀಯ ಪಕ್ಷ ಜಗತ್ತಿನಲ್ಲಿ ಇನ್ನೊಂದಿಲ್ಲ” ಎಂದು ಕಿಡಿಕಾರಿದರು.

ರಾಜ್ಯ ಬಿಜೆಪಿಯ ಲಂಚುಗುಳಿತನದ ಬಗ್ಗೆ ಪಕ್ಷದ ಕಾರ್ಯಕರ್ತರ ಜೊತೆ ನಾನೇ ಪೋಸ್ಟರ್ ಅಂಟಿಸುತ್ತೇನೆ, ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ. ನನ್ನ ಮತ್ತು ಡಿ ಕೆ ಶಿವಕುಮಾರ್‌ ಬಗ್ಗೆ ಪೋಸ್ಟರ್ ಅಂಟಿಸಿದ್ದರಲ್ಲಾ, ಅದರ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಯಾಕೆ ಮೌನವಾಗಿದ್ದಾರೆ? ಪೊಲೀಸರ ಕಣ್ಣು ಯಾಕೆ  ಕುರುಡಾಗಿದೆಯಾ?” ಎಂದು ಕಿಡಿಕಾರಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180