ಮೈಸೂರು | ರಸ್ತೆಗುಂಡಿ ದುರಸ್ತಿಯಾಗದೇ ದೀಪಾಲಂಕಾರ: ಅಧಿಕಾರಿಗಳ ವಿರುದ್ದ ನಿವಾಸಿಗಳ ಕಿಡಿ

Mysore
  • ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಅಧಿಕಾರಿಗಳ ಸಿದ್ದ ಉತ್ತರ
  • ದಸರಾದ ಪ್ರಮುಖ ಆಕರ್ಷಣೆಗಳಲ್ಲೊಂದಾದ ದೀಪಾಲಂಕಾರ

ಪ್ರತಿವರ್ಷ ದಸರಾ ವೇಳೆ ರಸ್ತೆ ಕಾಮಗಾರಿ ಮಾಡುತ್ತಾರೆ. ಅವು ಒಂದು ವರ್ಷದಲ್ಲಿಯೇ ಕಿತ್ತು ಹೋಗುತ್ತವೆ. ನಂತರದ ವರ್ಷದಲ್ಲಿ ಮತ್ತೆ ಕಾಮಗಾರಿ ನಡೆಯುತ್ತಿವೆ. ಅಂದರೆ, ದಸರಾ ವೇಳೆ ನಡೆಯುವ ಕಾಮಗಾರಿಗಳು ಅಷ್ಟೊಂದು ಕಳಪೆ ಗುಣಮಟ್ಟದ್ದವೇ? ಯಾವ ಕರ್ಮಕ್ಕೆ ಈ ಕಾಮಗಾರಿ? ಸರ್ಕಾರ ದಸರಾ ಪ್ಯಾಕೇಜ್ ಹೆಸರಿನಲ್ಲಿ ಬಿಡುಗಡೆ ಮಾಡುವ ಅನುದಾನ ಎಲ್ಲಿಗೆ ಹೋಗುತ್ತದೆ? ಎಂಬುದು ಮೈಸೂರಿನ ಸ್ಥಳೀಯ ನಿವಾಸಿ ಸ್ವರ್ಣ ಅವರ ಪ್ರಶ್ನೆ. 

ನಾಡಹಬ್ಬ ದಸರಾಕ್ಕೆ ಮೈಸೂರು ಅರಮನೆಯಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ. ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ 'ದೀಪಾಲಂಕಾರ'ಕ್ಕೆ ಮೈಸೂರು ರಸ್ತೆಗಳು ಸಿದ್ದವಾಗಿವೆ. ಆದರೆ, ಮಹಾನಗರ ಪಾಲಿಕೆ ರಸ್ತೆ ಗುಂಡಿಗಳನ್ನು ಮುಚ್ಚದೆ ‘ದೀಪಾಲಂಕಾರ’ಕ್ಕೆ ಸಿದ್ದವಾಗಿರುವುದು ಅಲ್ಲಿನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ದೀಪಾಲಂಕಾರದ ನಡುವೆ ಖುಷಿಯಿಂದ ವಾಹನ ಚಲಾಯಿಸುವ ಭರದಲ್ಲಿ ರಸ್ತೆ ಗುಂಡಿಗಳಿಗೆ ಬೀಳುವ ಸಾಧ್ಯತೆಗಳೂ ಇವೆ ಎನ್ನುತ್ತಾರೆ ಸ್ವರ್ಣ.

“ರಾಮಸ್ವಾಮಿ ವೃತ್ತದಿಂದ ಮೆಟ್ರೋಪೋಲ್ ಸರ್ಕಲ್‌ವರೆಗೂ ದೀಪಾಲಂಕಾರ ಮಾಡಲಾಗುತ್ತದೆ. ಈ ದೀಪಾಲಂಕಾರದ ವೈಭವವನ್ನು ನೋಡಲು ಸ್ಥಳೀಯರು, ಯುವಕರು, ಪ್ರವಾಸಿಗರು ಬರುತ್ತಾರೆ. ಆದರೆ ಈ ರಸ್ತೆಯು ತೀರಾ ಹದಗೆಟ್ಟಿದೆ. ದೀಪಾಲಂಕಾರ ನೋಡಲು ಬರುವವರು ರಸ್ತೆಗೆ ಗುಂಡಿಗೆ ಬಿದ್ದು ಕೈ-ಕಾಲು ಮುರಿದು ಕೊಂಡರೆ ಯಾರು ಗತಿ? ಪಾಲಿಕೆ ಈ ಬಗ್ಗೆ ಗಮನ ಹರಿಸದೆ ಇರುವುದು ಬೇಸರ ತಂದಿದೆ” ಎಂದು ಸ್ವರ್ಣ ಈದಿನ.ಕಾಮ್ ಜೊತೆ ತಮ್ಮ ಬೇಸರ ಹಂಚಿಕೊಂಡಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಮಂಗಳೂರು ದಸರಾಗೆ ಕೆಎಸ್ಆರ್‍‌ಟಿಸಿ 'ಟೂರ್ ಪ್ಯಾಕೇಜ್'; 9 ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆ ಅವಕಾಶ

“ಯೋಗನರಸಿಂಹ ಸ್ವಾಮಿ ದೇವಸ್ಥಾನದಿಂದ ಹೆಬ್ಬಾಳದ ಎರಡನೇ ಹಂತದ ಕೃಷ್ಣ ದೇವರಾಜ ಪ್ರತಿಮೆಯವರೆಗೂ ಇರುವ ರಸ್ತೆ, ಗುಂಡಿ ಬಿದ್ದಿದೆ. ಯೋಗನರಸಿಂಹ ಸ್ವಾಮಿ ದೇವಸ್ಥಾನಕ್ಕೆ ದಸರಾ ವೇಳೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ನಾಡಹಬ್ಬ ದಸರಾ ವೇಳೆ ಪಾರಂಪರಿಕ ನಗರದ ರಸ್ತೆಗಳು ಅಧೋಗತಿಗೆ ತಿರಿಗಿರುವುದು ಮೈಸೂರಿನ ಭವ್ಯ ಪರಂಪರೆಗೆ ನಾಚಿಕೆಗೇಡು” ಎಂದರು.

ಈದಿನ.ಕಾಮ್ ಜೊತೆ ಮಾತನಾಡಿದ ರಾಮಸ್ವಾಮಿ ಸರ್ಕಲ್‌ ಬಳಿಯ ನಿವಾಸಿ ಸುರೇಶ್, ”ದಸರಾದ ಮುಖ್ಯ ಆಕರ್ಷಣೆಯೇ ದೀಪಾಲಂಕಾರ. ದೀಪಾಲಂಕಾರ ನೋಡಲು ರಸ್ತೆಯ ಮೇಲೆಯೇ ಓಡಾಡಬೇಕು ಎನ್ನುವುದನ್ನು ಮರೆಯಬಾರದು. ಸಂತೆಪೇಟೆ ರಸ್ತೆಯಲ್ಲಿ ಅಂಡರ್‍‌ ಗ್ರೌಂಡ್‌ ಪೈಪ್ ಲೈನ್ ತೆಗೆದಿದ್ದಾರೆ. ರಸ್ತೆಯನ್ನು ಅಗೆದು ಒಂದೂವರೆ ತಿಂಗಳಾದರು ಇನ್ನೂ ಮುಚ್ಚಿಲ್ಲ. ಆ ರಸ್ತೆಯಲ್ಲಿ ಪತಿದಿನ ಸುಮಾರು ಐದಾರು ಭಾರಿ ವಾಹನಗಳು ಚಲಿಸುತ್ತವೆ. ದಸರಾ 10 ದಿನ ಬಾಕಿಯಿರುವಾಗ ಈ ರಸ್ತೆಗೆ ಕಲ್ಲು ಮಣ್ಣು ಹಾಕಿ ತೇಪೆ ಹಾಕಿದ್ದಾರೆ” ಎಂದು ಹೇಳಿದರು.

“ದೇವರಾಜ ಅರಸು ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ತಿರುಗುತ್ತವೆ. ಅಲ್ಲಿಯೂ ಅಂಡರ್ ಗ್ರೌಂಡ್ ಪೈಪ್‌ಲೈನ್‌ಗಾಗಿ ರಸ್ತೆ ಅಗೆಯಲಾಗಿದೆ. ಮುಚ್ಚುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲಿಯೂ ದೀಪಾಲಂಕಾರ ಮಾಡುತ್ತಾರೆ. ಯಾವ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡತ್ತಿಲ್ಲ” ಎಂದು ಆರೋಪಿಸಿದ್ದಾರೆ.

"ಮೇಯರ್ ಏನೋ ಪ್ಯಾಕೇಜ್ ಘೋಷಣೆ ಮಾಡುತ್ತಾರೆ. ಆದರೆ, ಸರ್ಕಾರ ಹಣ ಬಿಡುಗಡೆ ಮಾಡಿದರೆ ತಾನೇ ಅವರು ಮುಂದಿನ ಕೆಲಸ ನಿರ್ವಹಿಸಲು ಸಾಧ್ಯ. ಒಂದು ವೇಳೆ ಹಣ ಬಿಡುಗಡೆ ಮಾಡಿದರೂ ಕೆಲವೇ ಕೆಲವು ಅಧಿಕಾರಿಗಳು ಆಸಕ್ತಿ ವಹಿಸಿ ಮಾಡುತ್ತಾರೆ. ಹೀಗೆ ಮಾಡುವುದರಿಂದ ಏನು ಪ್ರಯೋಜನ” ಎಂದು ಕೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
1 ವೋಟ್