ಸ್ವಾತಂತ್ರ್ಯದ ಅಮೃತ ಮಹೋತ್ಸವ| ವಿಧಾನಸೌಧ ಆವರಣದ ಮಹಾತ್ಮಾ ಗಾಂಧಿ ಬೃಹತ್‌ ಪ್ರತಿಮೆಗೆ ಅಗೌರವ

mahatma gandhi
  • ಕೋಟಿಗಟ್ಟಲೇ ಖರ್ಚು ಮಾಡುವ ಸರ್ಕಾರ ಗಾಂಧಿ ಪ್ರತಿಮೆಗೆ ಸಣ್ಣ ಹೂವಿನ ಹಾರ ಹಾಕಿಲ್ಲ
  • ಅದು ನಮ್ಮ ಕೆಲಸವಲ್ಲ ಎಂದ ವಿಧಾನಸಭೆ, ವಿಧಾನ ಪರಿಷತ್‌ ಸಚಿವಾಲಯದ ಕಾರ್ಯದರ್ಶಿಗಳು

ವಿಧಾನಸೌಧ ಆವರಣದಲ್ಲಿನ ಬೃಹತ್‌ ಮಹಾತ್ಮಾ ಗಾಂಧಿ ಪ್ರತಿಮೆಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನದಂದು ರಾಜ್ಯ ಸರ್ಕಾರವು ಅಗೌರವ ತೋರಿದ ಘಟನೆ ನಡೆದಿದೆ.

ಸಾರ್ವಜನಿಕ ತೆರಿಗೆಯ ಕೋಟಿಗಟ್ಟಲೇ ಹಣವನ್ನು ತನ್ನ ಪ್ರಚಾರಕ್ಕಾಗಿ ಖರ್ಚು ಮಾಡುವ ರಾಜ್ಯ ಸರ್ಕಾರವು ಶಕ್ತಿಸೌಧ ಆವರಣದಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆಗೆ ಒಂದು ಹೂವಿನ ಹಾರ ಕೂಡ ಹಾಕದಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಕುರಿತ ಜಾಹೀರಾತಿನಲ್ಲೂ ಉದ್ದೇಶ ಪೂರ್ವಕವಾಗಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮೊದಲ ಪ್ರಧಾನಿ ಪಂಡಿತ ಜವಹರಲಾಲ್‌ ನೆಹರೂ ಭಾವಚಿತ್ರ ಕೈಬಿಟ್ಟು ಸರ್ಕಾರ ಯಡವಟ್ಟು ಮಾಡಿಕೊಂಡ ಬೆನ್ನಲ್ಲೇ ಈ ಘಟನೆಯೂ ನಡೆದಿದೆ.

ವಿಕಾಸಸೌಧ ಮತ್ತು ವಿಧಾನಸೌಧ ಮಧ್ಯಭಾಗದಲ್ಲಿರುವ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಆದ ಅಗೌರವ ಕುರಿತು ಬಾಲಕಿಯೊಬ್ಬರು ಮಾತನಾಡಿರುವ ವಿಡಿಯೋ ಈಗ ಎಲ್ಲಡೆ ವೈರಲ್‌ ಆಗುತ್ತಿದೆ. ಆ ವಿಡಿಯೋದಲ್ಲಿ ಬಾಲಕಿ ಮಾತನಾಡಿ, “ನಮಸ್ತೆ ಮಾನ್ಯ ಮುಖ್ಯಮಂತ್ರಿಗಳೇ, ಇವತ್ತು ನಮಗೆ ಸ್ವಾತಂತ್ರ್ಯ ದಿನಾಚರಣೆ. ಕರ್ನಾಟಕದ ರಾಜನಾಗಿ ವಿಧಾನಸೌಧದ ಪಕ್ಕವೇ ಇರುವ ಮಹಾತ್ಮಾ ಗಾಂಧೀಜಿಯ ಪ್ರತಿಮೆಗೆ ಏಕೆ ಹೂವಿನ ಹಾರ ಹಾಕಿಲ್ಲ” ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, “ಯಾಕೆ ಮಹಾತ್ಮಾ ಗಾಂಧಿಯ ಪ್ರತಿಮೆ ನಿಮಗೆ ನೆನಪಾಗಲಿಲ್ಲವೇ? ಈ ಬಗ್ಗೆ ನಮ್ಮ ತಂದೆಯನ್ನು ಕೇಳಿದೆ. ಅವರಿಂದ ಯಾವ ಉತ್ತರವೂ ಬಂದಿಲ್ಲ. ಯಾವ ಕಾರಣಕ್ಕಾಗಿ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕಿಲ್ಲ ಎಂಬುದರ ಬಗ್ಗೆ ಉತ್ತರ ಕೊಡಲೇಬೇಕು” ಎಂದು ಬಾಲಕಿ ಒತ್ತಾಯಿಸಿದ್ದಾರೆ.

ಈ ಕುರಿತು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ ಕೆ ವಿಶಾಲಕ್ಷಿ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ಇದು ಸರ್ಕಾರದ ಸಚಿವಾಲಯದ ಕೆಲಸ. ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಪ್ರತಿವರ್ಷ ವಿಧಾನಸೌಧ ಆವರಣದ ಮಹಾತ್ಮಾ ಗಾಂಧಿ ಪ್ರತಿಮೆಗೆ ಹಾರ ಹಾಕುತ್ತಿದ್ದರೋ ಇಲ್ಲವೋ ಎಂಬುದು ನಮಗೆ ಮಾಹಿತಿ ಇಲ್ಲ. ಡಿಪಿಎಆರ್‌ ಮತ್ತು ಪಿಡಬ್ಲ್ಯೂಡಿ ಅವರು ಈ ಕೆಲಸ ಮಾಡಬೇಕಿತ್ತು. ಅವರು ಮರೆತಂತೆ ಕಾಣುತ್ತಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಗಾಂಧೀಜಿ ಹತ್ಯೆ ಮಾಡಿದವರಿಂದಲೇ ರಾಷ್ಟ್ರ ವಿಭಜನೆ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

ಹಾಗೆಯೇ ವಿಧಾನ ಪರಿಷತ್‌ ಸಚಿವಾಲಯದ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ಈ ಬಗ್ಗೆ ಈ ದಿನ.ಕಾಮ್‌ ಜೊತೆ ಮಾತನಾಡಿ, “ವಿಧಾನಸೌಧದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್‌ ಎರಡು ಮಂಡಲಗಳು ನಡೆಸುತ್ತವೆ. ಹೋದ ವರ್ಷ ವಿಧಾನಸಭೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಜವಾಬ್ದಾರಿ ನಿರ್ವಹಿಸಿತ್ತು. ಈ ಬಾರಿ ನಾವು (ವಿಧಾನ ಪರಿಷತ್) ನಿಭಾಯಿಸಿದ್ದೇವೆ. ಆದರೆ, ವಿಧಾನಸೌಧ ಆವರಣದಲ್ಲಿ ಯಾವುದೇ ಪ್ರತಿಮೆಗೆ ಹೂವಿನ ಹಾರ ಹಾಕುವ ಜವಾಬ್ದಾರಿ ಡಿಪಿಎಆರ್‌ ಮತ್ತು ಪಿಡಬ್ಲ್ಯೂಡಿ ಅವರಿಗೆ ಸಂಬಂಧಿಸಿರುತ್ತದೆ” ಎಂದು ವಿವರಿಸಿದರು.

ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಪ್ರಧಾನಿ ಮೋದಿ ಅವರು ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಬೇಕು ಎನ್ನುವ ಉದ್ದೇಶದಿಂದ ʼಹರ್‌ ಘರ್‌ ತಿರಂಗಾʼ ಅಭಿಯಾನ ಘೋಷಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಕೂಡ ಸ್ವಾತಂತ್ರ್ಯ ದಿನಾಚರಣಗೆ ಕೋಟಿಗಟ್ಟಲೇ ಖರ್ಚು ಮಾಡಿದೆ. ಶಕ್ತಿಸೌಧದೊಳಗಿನ ಮಹಾತ್ಮಾ ಗಾಂಧಿ ಪ್ರತಿಮೆಗೆ ಸಣ್ಣ ಹೂವಿನ ಹಾರ ಹಾಕದೇ ಇರುವುದು ರಾಜ್ಯ ಸರ್ಕಾರದ ಬೇಜವಾಬ್ದಾರಿ ಎತ್ತಿ ತೋರಿಸಿದೆ.     

ನಿಮಗೆ ಏನು ಅನ್ನಿಸ್ತು?
2 ವೋಟ್