ದೇಶಭಕ್ತಿ ಮತ್ತು ರಾಷ್ಟ್ರಧ್ವಜವನ್ನು ಮಾರಾಟದ ಸರಕನ್ನಾಗಿ ಮಾಡಿಕೊಂಡಿರುವ ಬಿಜೆಪಿ: ಕಾಂಗ್ರೆಸ್ ಮುಖಂಡರ ಟೀಕೆ

  • ಧ್ವಜಸಂಹಿತೆ ಉಲ್ಲಂಘನೆಯಾದರೂ ಈವರೆಗೆ ಒಂದು ಕೇಸ್ ಹಾಕಿಲ್ಲ
  • ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಫೋಟೋಗಳು ವೈರಲ್, ವ್ಯಾಪಕ ಟೀಕೆ

ಭಾರತಕ್ಕೆ ಸ್ವಾಂತಂತ್ರ್ಯ ಬಂದು 75 ವರ್ಷಗಳು ಉರುಳಿವೆ. 'ಆಜಾದಿ ಕಾ ಅಮೃತ್ ಮಹೋತ್ಸವ'ದ ಸಂಭ್ರಮದಲ್ಲಿ ಭಾರತ ಮಿಂದೇಳುತ್ತಿದೆ. 

75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮವನ್ನು ಇಮ್ಮಡಿಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ “ಹರ್ ಘರ್ ತಿರಂಗಾ” (ಮನೆ ಮನೆಯಲ್ಲಿ ತ್ರಿವರ್ಣ ಧ್ವಜ) ಹಾರಿಸುವ ಅಭಿಯಾನಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು, ಬಿಜೆಪಿ ಕಾರ್ಯಕರ್ತರು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲು ಗುರಿ ನಿಗದಿ ಮಾಡಿದೆ.

ಮನೆ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಅಭಿಯಾನದ ಉದ್ದೇಶದಿಂದಲೇ ಭಾರತ ರಾಷ್ಟ್ರಧ್ವಜ ಸಂಹಿತೆ 2006ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದೆ. ಇದರಿಂದ ಪಾಲಿಸ್ಟರ್ ಬಟ್ಟೆಗಳ ರಾಷ್ಟ್ರಧ್ವಜ, ಯಂತ್ರಗಳಿಂದ ತಯಾರಿಸಿದ ಧ್ವಜಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಸೂರ್ಯೋದಯ ಮತ್ತು ಸೂರ್ಯಸ್ತದ ಅವಧಿಯಲ್ಲಿ ಮಾತ್ರವೇ ಧ್ವಜಾರೋಹಣಕ್ಕೆ ಅವಕಾಶ ಇದ್ದಿದ್ದನ್ನು ತಿದ್ದುಪಡಿ ಮಾಡಿ, ಸಮಯದ ನಿರ್ಬಂಧವನ್ನು ತೆರವು ಮಾಡಲಾಗಿದೆ.

ಆಗಸ್ಟ್ 13 ರಿಂದ 15ರವರಗೆ “ಹರ್ ಘರ್ ತಿರಂಗಾ” ಅಭಿಯಾನ ನಡೆಯುತ್ತಿದ್ದು, ಎಲ್ಲೆಡೆ ರಾಷ್ಟ್ರಧ್ವಜಗಳ ಮಾರಾಟ ಬಿರುಸಾಗಿದೆ. ಈ ನಡುವೆಯೇ ರಾಷ್ಟ್ರಧ್ವಜಕ್ಕೆ ಅಗೌರವ ಉಂಟುಮಾಡುವಂತಹ ಸಾಕಷ್ಟು ಯಡವಟ್ಟುಗಳು ಬೆಳಕಿಗೆ ಬರುತ್ತಿವೆ. 

Image

ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಭಗವಾ ಧ್ವಜವನ್ನು ಹಿಡಿದು ಪ್ರದರ್ಶನ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹಾಗೆಯೇ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಅವರು ರಾಷ್ಟ್ರಧ್ವಜವನ್ನು ತಮ್ಮ ಟೇಬಲ್ ಮೇಲೆ ಹಾಕಿ ಅಗೌರವ ತೋರಿದ್ದಾರೆ ಎನ್ನುವ ಆರೋಪವಿದೆ. ಅದರ ಜತೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರು ರಾಷ್ಟ್ರಧ್ವಜಗಳನ್ನು ರಾಶಿ ರಾಶಿ ಹಾಕಿರುವ, ತಾವು ಕುರ್ಚಿಯ ಮೇಲೆ ಕುಳಿತು ತಮ್ಮ ಕಾಲಿನ ಪಕ್ಕದಲ್ಲಿ ಧ್ವಜಗಳನ್ನು ಇರಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಚಿವ ಭೈರತಿ ಬಸವರಾಜ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟಿಲ್ ರಾಷ್ಟ್ರಧ್ವಜದ ಬ್ಯಾಡ್ಜ್ ತಲೆಕೆಳಗಾಗಿ ಧರಿಸಿರುವ ಫೋಟೋ ಬಗ್ಗೆ ಕೂಡ ಟೀಕೆಗಳು ವ್ಯಕ್ತವಾಗಿವೆ. 

ಧ್ವಜಸಂಹಿತೆಯ ಸ್ಪಷ್ಟ ಉಲ್ಲಂಘನೆ: ಬಿ ಕೆ ಹರಿಪ್ರಸಾದ್ 

ಈ ಎಲ್ಲದರ ಕುರಿತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ವ್ಯಾಪಾರಿ ಮನಸ್ಥಿತಿ ಹೊಂದಿರುವ ಬಿಜೆಪಿಗರು ರಾಷ್ಟ್ರಧ್ವಜವನ್ನೂ ಮಾರಾಟ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ರಾಷ್ಟ್ರ ಧ್ವಜಗಳು ಸರಿಯಾದ ಅಳತೆ ಇಲ್ಲದೆ, ಬಣ್ಣ ಇಲ್ಲದೆ, ಸರಿಯಾದ ಆಕಾರ ಇಲ್ಲದೆ ದೋಷಪೂರಿತವಾಗಿ ಮುದ್ರಣವಾಗಿರುವುದು ಕಂಡುಬರುತ್ತಿದೆ. ಹೆಚ್ಚು ಧ್ವಜಗಳನ್ನು ಉತ್ಪಾದನೆ ಮಾಡಬೇಕು ಎಂಬ ಅವಸರದಲ್ಲಿ ಬೇಕಾಬಿಟ್ಟಿಯಾಗಿ ಧ್ವಜಗಳನ್ನು ಮುದ್ರಿಸಲಾಗುತ್ತಿದೆ. ಇಷ್ಟು ರಾಷ್ಟ್ರಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಅಂತಹವರ ವಿರುದ್ಧ ಸರ್ಕಾರ ಈವರೆಗೆ ಎಷ್ಟು ಕೇಸುಗಳನ್ನು ದಾಖಲಿಸಿದೆ” ಎಂದು ಪ್ರಶ್ನಿಸಿದರು.

Image

ಬಿಜೆಪಿಗರ ವಿರುದ್ಧವೇ ಮೊದಲು ಕೇಸು ಹಾಕಲಿ: ಪ್ರಿಯಾಂಕ್ ಖರ್ಗೆ

ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿ, “ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಬಿಜೆಪಿ ಮಾರಾಟದ ಸರಕು ಮಾಡಿಕೊಂಡಿದೆ. ರಾಷ್ಟ್ರಧ್ವಜದ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದೇ ಬಿಜೆಪಿಗರಿಗೆ ಗೊತ್ತಿಲ್ಲವಾಗಿದೆ. ಸಚಿವ ಸುನಿಲ್ ಕುಮಾರ್ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಭಗವಾ ಧ್ವಜವನ್ನು ಸೂಕ್ತ ಜಾಗದಲ್ಲಿ ಕಟ್ಟಿದ್ದು, ರಾಷ್ಟ್ರಧ್ವಜವನ್ನು ಮಾತ್ರ ಮಳೆಯ ನೀರು ಬೀಳುವ ಪೈಪ್‌ಗೆ ಕಟ್ಟಿ ಅಗೌರವ ಉಂಟುಮಾಡಿದ್ದಾರೆ. ಜತೆಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್, ನಳಿನ್ ಕುಮಾರ್ ಕಟೀಲ್, ಭೈರತಿ ಬಸವರಾಜ್ ರಾಷ್ಟ್ರಧ್ವಜಕ್ಕೆ ಅಗೌರವ ತಂದಿದ್ದಾರೆ” ಎಂದು ದೂರಿದರು.

“ಧ್ವಜಸಂಹಿತೆಗೆ ತಿದ್ದುಪಡಿ ತಂದು, ಚೀನಾ ಧ್ವಜಗಳನ್ನು ತಡೆಯುವ ಉದ್ದೇಶದಿಂದ ಹಾಗೂ ಅಂಬಾನಿ ಕಂಪನಿಗೆ ಲಾಭ ಮಾಡಿಕೊಡುವ ದೃಷ್ಟಿಯಲ್ಲಿ ಮನಬಂದಂತೆ ದೋಷಪೂರಿತವಾಗಿ ರಾಷ್ಟ್ರಧ್ವಜಗಳನ್ನು ಮುದ್ರಿಸಲಾಗುತ್ತಿದೆ. ಬಹುತೇಕ ಕಡೆ ಸರಿಯಾದ ಬಣ್ಣ ಇಲ್ಲ, ಅಶೋಕ ಚಕ್ರ ಮೊಟ್ಟೆ ಆಕಾರದಲ್ಲಿದೆ. ಇದು ಕೂಡ ಧ್ವಜಸಂಹಿತೆಯ ಉಲ್ಲಂಘನೆ. ಇಷ್ಟೆಲ್ಲ ಆದರೂ ಒಂದೇ ಒಂದು ಕೇಸು ದಾಖಲಿಸಿಲ್ಲ. ಅಧಿಕಾರಿಗಳನ್ನು ಸರ್ಕಾರ ಸೇಲ್ಸ್‌ಮನ್‌ಗಳನ್ನಾಗಿ ಮಾಡಿದೆ” ಎಂದು ಕಿಡಿ ಕಾರಿದರು.

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯದ ಅಮೃತ ಮಹೋತ್ಸವ | ಭಾರತದ ಧ್ವಜಸಂಹಿತೆಗೆ ಕೇಂದ್ರ ಸರ್ಕಾರ ತಂದ ತಿದ್ದುಪಡಿಗಳು ಯಾವುವು?

“ಕೇಂದ್ರ ಸರ್ಕಾರ ಕೂಡಲೇ ಧ್ವಜಸಂಹಿತೆಯನ್ನು ಹಿಂಪಡೆಯಬೇಕು. ಗೌರವಯುತವಾಗಿ ಧ್ವಜಗಳನ್ನು ಮುದ್ರಿಸುತ್ತಿದ್ದ ಖಾದಿ ಭಂಡಾರದವರಿಗೆ ಧ್ವಜ ತಯಾರಿಸಲು ಅನುವು ಮಾಡಿಕೊಡಬೇಕು. “ಹರ್ ಘರ್ ತಿರಂಗಾ” ಹೆಸರಿನಲ್ಲಿ ರಾಷ್ಟ್ರದ್ವಜಕ್ಕೆ ಅವಮಾನ ಮಾಡಿದ ಬಿಜೆಪಿಗರ ವಿರುದ್ಧವೇ ಮೊದಲು ಕೇಸ್‌ಗಳನ್ನು ಹಾಕಬೇಕು” ಎಂದು ಅವರು ಆಗ್ರಹಿಸಿದರು.

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಆಗಸ್ಟ್‌ 15ರ ಬಳಿಕ ಜನರು ಎಲ್ಲೆಂದರಲ್ಲಿ ರಾಷ್ಟ್ರ ಧ್ವಜಗಳನ್ನು ಎಸೆಯದೆ ಗೌರವಯುತವಾಗಿ ವರ್ತಿಸಬೇಕು ಎಂಬುದು ನಿಜವಾದ ದೇಶಪ್ರೇಮಿಗಳ ಒತ್ತಾಯವಾಗಿದೆ.     

ನಿಮಗೆ ಏನು ಅನ್ನಿಸ್ತು?
0 ವೋಟ್