
- ರೈಟ್ ಟು ಲಿವ್ ಮತ್ತು ಯಂಗ್ ಲೈವ್ಸ್ ಫೌಂಡೇಶನ್ನಿಂದ ವಿದ್ಯಾರ್ಥಿವೇತನ ವಿತರಣೆ
- ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತ ಸ್ಥಾನಕ್ಕೆ ಬೆಳೆಯಬೇಕು
ಎಸೆಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ವಿವಿಧ ಸರ್ಕಾರಿ ಪ್ರೌಢಶಾಲೆಯ 56 ವಿದ್ಯಾರ್ಥಿಗಳಿಗೆ ರೈಟ್ ಟು ಲಿವ್ ಮತ್ತು ಯಂಗ್ ಲೈವ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನ ನೀಡಿ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಷನಲ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೋ. ಎನ್ ಸೋಮಶೇಖರ್, “ಗಡಿ ಭಾಗದ ಬಡ ವಿದ್ಯಾರ್ಥಿಗಳಿಗೆ ರೈಟ್ ಟು ಲಿವ್ ಸಂಸ್ಥೆಯು ವಿದ್ಯಾರ್ಥಿವೇತನ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಮುಂದಿನ ಭವಿಷ್ಯಕ್ಕೆ ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾದಾನ ಶ್ರೇಷ್ಠದಾನ. ಈ ಭಾಗಕ್ಕೆ ಡಾ. ಎಚ್ ನರಸಿಂಹಯ್ಯರವರು ನ್ಯಾಷನಲ್ ಕಾಲೇಜನ್ನು ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ. ಇದರಿಂದ ಸುಮಾರು ಬಡಕುಟುಂಬಗಳಿಗೆ ಉಪಯೋಗ ಆಗಿದೆ” ಎಂದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವೆಂಕಟರಾಮ್ ಮಾತನಾಡಿ, "ರೈಟ್ ಟು ಲಿವ್ ಸಂಸ್ಥೆ ಬಾಗೇಪಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ನೂರಾರು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ. ವಿದ್ಯಾರ್ಥಿಗಳಿಗಾಗಿ ಶೌಚಾಲಯ, ವಿದ್ಯಾರ್ಥಿವೇತನ, ಸ್ಮಾರ್ಟ್ ತರಗತಿಗಳು, ಶಾಲಾ ಬ್ಯಾಗ್, ಟ್ಯಾಬ್ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ“ ಎಂದು ಪ್ರಶಂಸಿದರು.
ರೈಟ್ ಟು ಲಿವ್ನ ಪ್ರೋಗ್ರಾಂ ಕೋ-ಆರ್ಡಿನೇಟರ್ ವೈ.ಎನ್ ಹರೀಶ್ ಮಾತನಾಡಿ, “ನಮ್ಮ ಭಾಗದ ವಿದ್ಯಾರ್ಥಿಗಳು ನಿತ್ಯವೂ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸವಾಲುಗಳನ್ನು ಕೊಂಚ ಮಟ್ಟಿಗಾದರೂ ನಿವಾರಿಸಿಕೊಳ್ಳಲು ಹಲವು ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತ ಸ್ಥಾನಕ್ಕೆ ಬೆಳೆಬೇಕು“ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಯಂಗ್ ಲೈವ್ಸ್ ಫೌಂಡೇಶನ್ನ ನಿರ್ದೇಶಕ ಎಂ.ಎಲ್ ನರಸಿಂಹಮೂರ್ತಿ, ನ್ಯಾಷನಲ್ ಕಾಲೇಜಿನ ಭೌತಶಾಸ್ತ್ರದ ಉಪನ್ಯಾಸಕ ಬಿ.ವೆಂಕಟಶಿವಾರೆಡ್ಡಿ, ಮುಖ್ಯ ಶಿಕ್ಷಕ ಕೆ.ವಿ.ಆದಿನಾರಾಯಣ, ಶಿಕ್ಷಕರಾದ ಪಕ್ರುದ್ದೀನ್, ಮನೋಹರ, ಯಂಗ್ ಲೈವ್ಸ್ ಫೌಂಡೇಶನ್ ನ ಮದಕರಿ ಸುರೇಶ್, ಸುನಿಲ್, ವೇಣುಗೋಪಾಲ, ಕಲ್ಯಾಣ್ ಕುಮಾರ್ ಸೇರಿ ಮತ್ತಿತರರು ಭಾಗವಹಿಸಿದ್ದರು.