ಹಿರಿಯ ಸಾಹಿತಿ ಟಿ ಜಿ ಮುಡೂರು ಇನ್ನಿಲ್ಲ

  • ಸಾಹಿತ್ಯ ಕ್ಷೇತ್ರದಿಂದ ಕಳಚಿದ ಮತ್ತೊಂದು ಕೊಂಡಿ
  • ಕವಿ, ಸಾಹಿತಿ, ವಿದ್ವಾಂಸ ಟಿ ಜಿ ಮುಡೂರು ನಿಧನ

ಸುಳ್ಯದ ಹಿರಿಯ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್ ಟಿ ಜಿ ಮುಡೂರು ಅವರು ನಿಧನರಾಗಿದ್ದಾರೆ. 

95ರ ವಯಸ್ಸಿನಲ್ಲೂ ಲವಲವಿಕೆಯಿಂದಿದ್ದ ಮುಡೂರು ಅವರು ಏಪ್ರೀಲ್‌ 20ರಂದು ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. 

ತಮ್ಮಯ್ಯಗೌಡ ಮುಡೂರು ಎಂಬುದು ಅವರ ಪೂರ್ಣ ಹೆಸರು. ಅವರು ಕೇರಳದ ಕಾಸರಗೋಡು ಜಿಲ್ಲೆಯ ಅಡೂರು ಸಮೀಪದ ಮುಡೂರು ಎಂಬಲ್ಲಿ ಜನಿಸಿದರು. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿದ್ಯಾನ್, ಮೈಸೂರು ವಿವಿಯಲ್ಲಿ ಎಂ.ಎ ಹಾಗೂ ಬಿಎಡ್ ಶಿಕ್ಷಣ ಪಡೆದಿದ್ದರು. ಅವರು ಕಲ್ಲಡ್ಕ, ಸುಬ್ರಹ್ಮಣ್ಯ, ಅಜ್ಜಾವರಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ, ಬೆಳ್ತಂಗಡಿ, ಪೂಂಜಾಲಕಟ್ಟೆ, ಪಂಜ ಪದವಿ ಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಶೈಕ್ಷಣಿಕ ಸೇವೆಯಲ್ಲದೆ - ಕೃಷಿಕ, ಕವಿ, ಸಾಹಿತಿ ಹಾಗೂ ವಿದ್ವಾಂಸರಾಗಿಯೂ ಮುಡೂರು ಅವರು ಗುರುತಿಸಿಕೊಂಡಿದ್ದರು. 

ಇದನ್ನು ಓದಿದ್ದೀರಾ? ಪಿಎಸ್‌ಐ ನೇಮಕಾತಿ ಹಗರಣ | ಆರೋಪಿಗಳಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ

ಮುಡೂರು ಅವರ ಸಾಹಿತ್ಯ ಕೃಷಿ:

ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಮುಡೂರು ಅವರು ʼಹೃದಯರೂಪಕ' ಎಂಬ ಆಂಗ್ಲ ನಾಟಕದ ಅನುವಾದ ಕೃತಿಯನ್ನೂ ಬರೆದಿದ್ದರು.

ಕಾಡ ಮಲ್ಲಿಗೆ, ಹೊಸತು ಕಟ್ಟು, ಕುಡಿಮಿಂಚು, ಪ್ರಗತಿಗೆ ಕರೆ ಹಾಗೂ ಬೆಳ್ಳಿಬೆಳಕು ಎಂಬ ಕಲವನ ಸಂಕಲನಗಳು, ಅಬ್ಬಿಯ ಮಡಿಲು, ಕಣ್ ಕನಸು ತೆರೆದಾಗ ಸೇರಿದಂತೆ ಹಲವು ಕಾದಂಬರಿಗಳು ಮತ್ತು ಕಥಾ ಸಂಕಲನಗಳನ್ನು ರಚಿಸಿದ್ದಾರೆ.

ಪ್ರಬಂಧ ಲೇಖನ, ಜಾನಪದ ಗೀತಾರೂಪಕ, ಖಂಡಕಾವ್ಯಗಳು ಹಾಗೂ ಯಕ್ಷಗಾನ ಪ್ರಸಂಗಗಳ ರಚನೆಯಲ್ಲಿಯೂ ಸಿದ್ದಹಸ್ತರು. ನಂದಾದೀಪ, ಶ್ರೀಮತಿ, ಶಿವಕುಮಾರಿ, ಕೇರಳ ಕುಮಾರಿ, ಸಖು, ಅಚ್ಚರಿಯ ಅರಳಲೆ ಮಧ್ಯಮಾ ಎಂಬ ನಾಟಕಗಳನ್ನು ಕೂಡ ಮುಡೂರು ಅವರು ರಚಿಸಿದ್ದರು.

30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ, ಅರೆಭಾಷೆ ಅಕಾಡೆಮಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.

ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮುಡೂರು ಅವರು ಅರಂತೋಡುವಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್