ಈ ಬೆಳವಣಿಗೆಗಳಿಂದ ಬ್ಯ್ರಾಂಡ್ ಮಂಗಳೂರಿಗೆ ಏನಾಗುತ್ತದೆಂಬ ಅರಿವಿದೆಯೇ?

ಪದೇ ಪದೇ ಹಿಂಸೆ ನಡೆಯುವ ನಗರಗಳಿಗೆ ಹೊರಗಿನ ಜನ ಬರಲು ಬಯಸುವುದಿಲ್ಲ. ಅದು ಇಲ್ಲಿನ ವ್ಯಾಪಾರಿಗಳಿಗೆ ಹೊಡೆತ ಕೊಡುತ್ತದೆ. ಹೊಟೇಲ್ ಪ್ರವಾಸೋದ್ಯಮ, ಸಂಪೂರ್ಣ ನಾಶವಾಗುತ್ತದೆ. ಈ ಊರಿನಲ್ಲಿ ನೆಲೆಸಬೇಕೆಂಬ ಬಯಕೆಯುಳ್ಳ ಹೊರ ಊರಿನ ಜನ ಇತ್ತ ತಲೆ ಹಾಕುವುದಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಹೊರ ರಾಜ್ಯದ ವಿದೇಶದ ವಿದ್ಯಾರ್ಥಿಗಳು ಬರುವುದಿಲ್ಲ.
Mangaluru

ದಕ್ಷಿಣಕನ್ನಡ ಜಿಲ್ಲೆ, ಮಂಗಳೂರು ಅಂದರೆ, ದೇಶ- ವಿದೇಶದ ವಿದ್ಯಾರ್ಥಿಗಳನ್ನು ಆಕರ್ಷಿಸಿದ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ಪ್ರವಾಸಿಗರನ್ನು ಸೆಳೆಯುವ ಹಲವು ಧಾರ್ಮಿಕ ಮತ್ತು ಪ್ರವಾಸೋದ್ಯಮ ತಾಣಗಳ ಕೇಂದ್ರ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಭಾರೀ ಪ್ರಮಾಣದಲ್ಲಿ ಮತ್ಯೋದ್ಯಮದಲ್ಲಿ ತೊಡಗಿಕೊಂಡಿರುವ ಸ್ಥಳ.

ಭೂತಾರಾಧನೆ, ದೈವಾರಾಧನೆಯಲ್ಲಿ ದಲಿತರು, ಹಿಂದುಳಿದವರು, ಮೇಲ್ವರ್ಗದವರು ಮಾತ್ರವಲ್ಲ, ಕೆಲವು ಕಡೆ ಮುಸ್ಲಿಂ, ಕ್ರೈಸ್ತರನ್ನೂ ಸೇರಿಸಿಕೊಂಡು ಅಪ್ಪಟ ಜಾತ್ಯತೀತ ನೆಲೆಗಟ್ಟಿನ ನೆಲ.

Eedina App

ಹಿಂದೂ, ಮುಸ್ಲಿಂ, ಕ್ರಿಸ್ತ ಮತ್ತು ಜೈನ್ ಎಲ್ಲರೂ ಇರುವ 'ಕಾಸ್ಮೊಪಾಲಿಟನ್' ನಗರ. ದೂರದ ದುಬೈ, ಹತ್ತಿರದ ಮುಂಬೈಗಳಿಗೆ ದುಡಿಯಲು ಹೋದ ಜನರಿಂದಾಗಿ ಜಗತ್ತಿನ ಸಂಪರ್ಕವನ್ನು ಹತ್ತಿರ ಮಾಡಿಕೊಂಡ ಮನಸ್ಸುಗಳು.

ಇಂಥಹ ನಗರ 'ಕೋಮು ಹಿಂಸೆಯ ನಗರ'ವೆಂಬ ಹಣೆಪಟ್ಟಿ ಕಟ್ಟಿಕೊಂಡದ್ದು ನಮ್ಮೆಲ್ಲರ ದುರಂತ. 1990ರ ತನಕ ಎಲ್ಲ ನಗರಗಳಲ್ಲಿದ್ದಂತೆ 'ಅಂಡರ್ ವರ್ಲ್ಡ್ ಗ್ಯಾಂಗ್' ಇಲ್ಲೂ ಇತ್ತು. ಜಿಲ್ಲೆಯಾದ್ಯಂತ ಅನೇಕ ಗ್ಯಾಂಗ್ ಗಳಿತ್ತು. ಆದರೆ, ಅದು ಮತೀಯ ದ್ವೇಷವನ್ನು ಹೊಂದಿರದೇ, ಕೆಲವು ಗ್ಯಾಂಗ್‌ಗಳಲ್ಲಿ ಎಲ್ಲ ಮತದ ಹುಡುಗರೂ ಸೇರಿಕೊಂಡು ಇರುತ್ತಿತ್ತು.

AV Eye Hospital ad

ಹಿಂದೂ ಯುವ ಸೇನೆ ಗುಣಕರ ಶೆಟ್ಟಿ ಹತ್ಯೆ ಕಾರಣವನ್ನು ಇಟ್ಟುಕೊಂಡು, ಪೋಲಿಸರ ಕಠಿಣ ಕ್ರಮಗಳಿಂದಾಗಿ ಈ 'ಗ್ಯಾಂಗ್ ವಾರ್' ಸಂಪೂರ್ಣ ನಿಂತು ಹೋಯಿತು.

ಆಗ ಅಯೋಧ್ಯೆ ಮಂದಿರದ ಹೋರಾಟ ಪ್ರಾರಂಭವಾಗಿ, ಅಲ್ಲಿಂದ ಮತೀಯ ಸಂಘಟನೆ ಮತ್ತು ಹೊಡೆದಾಟ ಶುರುವಾಯಿತು. 1990ರ ತನಕ ತೀವ್ರವಾದಿ ಹಿಂದೂ ಸಂಘಟನೆಗಳು ಇದ್ದರೂ ಮುಸ್ಲಿಂ ತೀವ್ರವಾದಿ ಸಂಘಟನೆಗಳು ಇರಲಿಲ್ಲ. ಹಿಂದೂ ಸಂಘಟನೆಗಳು ಯಾತ್ರೆ, ಹೋರಾಟ, ಘೋಷಣೆಗಳು ಹೆಚ್ಚಾದಂತೆ ನಂತರದ ವರ್ಷಗಳಲ್ಲಿ ಮುಸ್ಲಿಂ ಸಂಘಟನೆಗಳೂ ಹುಟ್ಟಿಕೊಂಡವು.

ಮೊದಲು ಸರಾಸರಿ 8 ರಿಂದ 10 ವರ್ಷಗಳಿಗೆ ಒಮ್ಮೆ ಕೋಮು ಗಲಭೆ ಆಗುತ್ತಿತ್ತು. ಆದರೆ 2006ರ ಕೋಮು ಗಲಭೆ ನಂತರ ಯಾವುದೇ ದೊಡ್ಡ ಮಟ್ಟದ ಕೋಮು ಗಲಭೆಯಾಗಿಲ್ಲ. ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರನ್ನು ಪರಸ್ಪರ ಕೊಲ್ಲುವ ಘಟನೆಗಳು ನಡೆಯುತ್ತಲೇ ಇದೆ. ಅದೂ ಚುನಾವಣೆ ಹತ್ತಿರವಿರುವಾಗಲೇ ಆಗುತ್ತದೆ ಅನ್ನುವುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಿದೆ.

ನಗರ ಎಲ್ಲ ಜಾತಿ ವರ್ಗಗಳಿಂದ ಕೂಡಿದ್ದರೂ, ಜಿಲ್ಲೆಯ ಲಕ್ಷಾಂತರ ಜನರ ದೇಶ-ವಿದೇಶಗಳಲ್ಲಿ ದುಡಿಯುತ್ತಿದ್ದರೂ, ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಹೆಸರಾಗಿದ್ದರೂ ಅದೆಲ್ಲವನ್ನೂ ಮೀರಿ, ಕೋಮು ಹಿಂಸೆಗೆ, ಎರಡು (mindset) ಮನಸ್ಥಿತಿಯ, ಎರಡು (outfit) ಭಿನ್ನ ಗುಂಪುಗಳು ಕೋಮು ದ್ವೇಷ ಹಂಚುವ, ಜೀವಂತವಾಗಿರಿಸುವ ಕೆಲಸ ಮುಂದುವರಿಸುತ್ತಿರುವುದೇ ಕಾರಣವಾಗಿದೆ.

ಈ ಮತೀಯವಾದಕ್ಕೆ ರಾಜಕಾರಣವೂ ಸೇರಿಕೊಂಡ ಪರಿಣಾಮ, ಅದು ಪೂರ್ಣ ಸಮಾಜವನ್ನು ಪ್ರಭಾವಗೊಳಿಸುತ್ತಿದೆ ಮತ್ತು ಕೆಲವು ಹಿಂದೂಗಳಿಗೆ ಮುಸಲ್ಮಾನರ ಬಗ್ಗೆ ಇರುವ ಭಯ, ಅಪನಂಬಿಕೆ, ಕೆಲವು ಮುಸಲ್ಮಾನರಿಗೆ ಹಿಂದೂಗಳ ಬಗ್ಗೆ ಇರುವ ಅಪನಂಬಿಕೆ, ಭಯದಿಂದಾಗಿ ಪರಸ್ಪರ ದ್ವೇಷ ವಾತಾವರಣ. ಇನ್ನೊಂದು ಕಡೆ, ರಾಜಕೀಯ ಸಂಗತಿಯಾದದ್ದು ಮತ್ತು ಬಹುಸಂಖ್ಯಾತ ಜನರು ಇದನ್ನು ನೋಡಿಕೊಂಡು ಸುಮ್ಮನಿರುವುದು ಒಟ್ಟೂ ಸಮಸ್ಯೆಯನ್ನು ಗೋಜಲುಗೊಳಿಸಿದೆ.

ಇಲ್ಲಿನ ಜನರ ವ್ಯಾಪಾರ ವಹಿವಾಟು ನಾಶಗೊಳಿಸುವುದರ ಜೊತೆಗೆ, ವಿದೇಶಗಳಲ್ಲಿನ ನಮ್ಮ ಜನರ ಉದ್ಯೋಗಕ್ಕೆ ಮತ್ತು ರಫ್ತು ವ್ಯಾಪರಕ್ಕೂ ಹೊಡೆತ ಕೊಡತೊಡಗಿದೆ. ಅಮಾಯಕ ಬಡ ಮಕ್ಕಳು ಸಾಯುವುದು, ಜೈಲು ಸೇರುವುದು ಸಾಮಾಜಿಕ ತಲ್ಲಣಗಳನ್ನು ಸೃಷ್ಟಿಸುತ್ತಿದೆ.

ಒಂದು ನಗರ ಪ್ರದೇಶ ಅಭಿವೃದ್ಧಿಯಾಗುವುದಕ್ಕೆ, ಆ ನಗರ ಪ್ರಶಾಂತವಾಗಿರಬೇಕು. ಶಾಂತ ವಾತಾವರಣ ಹೊಂದಿರಬೇಕು.

ಪದೇ ಪದೇ ಹಿಂಸೆ ನಡೆಯುವ ನಗರಗಳಿಗೆ ಹೊರಗಿನ  ಜನ ಬರಲು ಬಯಸುವುದಿಲ್ಲ. ಅದು ಇಲ್ಲಿನ ವ್ಯಾಪಾರಿಗಳಿಗೆ ಹೊಡೆತ ಕೊಡುತ್ತದೆ. ಹೊಟೇಲ್, ಪ್ರವಾಸೋದ್ಯಮ ಸಂಪೂರ್ಣ ನಾಶವಾಗುತ್ತದೆ. ಈ ಊರಿನಲ್ಲಿ ನೆಲೆಸಬೇಕೆಂಬ ಬಯಕೆಯುಳ್ಳ ಹೊರ ಊರಿನ ಜನ ಇತ್ತ ತಲೆ ಹಾಕುವುದಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಹೊರ ರಾಜ್ಯದ ವಿದೇಶದ ವಿದ್ಯಾರ್ಥಿಗಳು ಬರುವುದಿಲ್ಲ. 

ಜೊತೆಗೆ, ಪದೇ ಪದೇ ಬಂದ್ ಕರ್ಫ್ಯೂ ಜಾರಿಯಾದರೆ ಸ್ಥಳೀಯ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇಡೀ ಜಗತ್ತು ನಮ್ಮನ್ನು ನೋಡುತ್ತಿರುತ್ತದೆ. ಒಂದು ಪ್ರಸಿದ್ಧ ನಗರ ಮಂಗಳೂರನ್ನು ಜಗತ್ತಿನ ವಿವಿಧ ದೇಶಗಳು ಸೂಕ್ಷ್ಮವಾಗಿ ಗಮನಿಸುತ್ತವೆ. ಅದು ವ್ಯತಿರಿಕ್ತ ಆದಂತೆ ವಿವಿಧ ಸಂಬಂಧ ವಹಿವಾಟು, ಖಾಸಗೀ ಹೂಡಿಕೆ ಹೀಗೆ ಎಲ್ಲದಕ್ಕೂ ಕತ್ತರಿ ಬೀಳುತ್ತದೆ. 

ಬಾಂಬ್ ಹಾಕಿದಾಗ ನಗರವೊಂದು ಭೌತಿಕವಾಗಿ ನಾಶವಾಗುತ್ತದೆ. ಆದರೆ, ಕೋಮು ವಿಜೃಂಭಣೆಯಿಂದ ನಗರ ಜೀವಂತ ಶವವಾಗುತ್ತದೆ. ಸದಾ ಗಲಾಟೆ ಮಾಡುವ ವ್ಯಕ್ತಿಯಿಂದ ಜನ ದೂರವಿರಲು ಬಯಸುತ್ತಾರೆ. ಅದೇ ರೀತಿ ಸದಾ ಗಲಾಟೆಯಿರುವ ಸ್ಥಳವನ್ನೂ ತಿರಸ್ಕರಿಸುತ್ತಾರೆ. ಮತ್ತೆಂದೂ ಮರಳಿ ಗಳಿಸಲು ಅಸಾಧ್ಯವಾದುದನ್ನು ನಾವು ಕಳೆದುಕೊಳ್ಳುತ್ತೇವೇ. ಆ ಮೊದಲು ನಾವು ಎಚ್ಚರಗೊಳ್ಳಬೇಕಿದೆ.

ಪ್ರಸ್ತುತ ಜನಸಾಮಾನ್ಯರಲ್ಲಿ ವ್ಯಾಪಕ ಜನಜಾಗೃತಿಯ ಮೂಲಕವೇ ಇದನ್ನು ಸರಿಪಡಿಸಬೇಕೇ ಹೊರತು ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರಿಂದ ಇದು ಸಾಧ್ಯವಾಗಲಿಕ್ಕಿಲ್ಲ.

ಲೇಖಕರು, ದಕ್ಷಿಣ ಕನ್ನಡ ಜಿಲ್ಲೆಯವರು. ಚಿಂತಕರು, ಸಾಮಾಜಿಕ ಹೋರಾಟಗಾರರು.
ನಿಮಗೆ ಏನು ಅನ್ನಿಸ್ತು?
0 ವೋಟ್
eedina app