
- ಶ್ವಾನ ನಿಷ್ಠೆಯನ್ನು ಕೊಂಡಾಡಿದ ಸೂಡೂರು ಗ್ರಾಮಸ್ಥರು
- ಕಾಡಿಗೆ ಕಟ್ಟಿಗೆ ತರಲು ಹೋಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಶೇಖರಪ್ಪ
ಕಾಡಿನಲ್ಲಿ ಕುಸಿದು ಬಿದಿದ್ದ ತನ್ನ ಮಾಲೀಕನನ್ನು ಹೆಣ್ಣು ನಾಯಿಯೊಂದು ಪತ್ತೆ ಮಾಡಿ ಪ್ರಾಣ ಉಳಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಸೂಡೂರು ಗ್ರಾಮದಲ್ಲಿ ನಡೆದಿದೆ. ನಾಯಿಯ ನಿಷ್ಠೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಯನೂರು ಪಟ್ಟಣಕ್ಕೆ ಖಾಸಗಿ ಕ್ಯಾಂಟೀನ್ ಕೆಲಸಕ್ಕೆಂದು ಪ್ರತಿದಿನ ಹೂಗುವು ಶೇಖರಪ್ಪ (55) ಅವರು ನಿತ್ಯ ಬೆಳಿಗ್ಗೆ ಏಳು ಗಂಟೆಗೆ ಕಾಡಿಗೆ ತೆರಳಿ ಒಣ ಕಟ್ಟಿಗೆಗಳನ್ನು ಸಂಗ್ರಹಿಸಿ, 10 ಹತ್ತು ಗಂಟೆಯೊಳಗೆ ಮನೆ ಸೇರುವುದು ದೈನಂದಿನ ಕಾಯಕ. ಬಳಿಕ ತಿಂಡಿ ತಿಂದು ಕ್ಯಾಂಟೀನ್ ಕೆಲಸಕ್ಕೆ ತೆರಳುತ್ತಿದ್ದರು.
ಶೇಖರಪ್ಪ ಶನಿವಾರ ಬೆಳಿಗ್ಗೆ 6 ಗಂಟೆಗೆ ಕಾಡಿಗೆ ಕಟ್ಟಿಗೆ ತರಲು ಹೋಗಿದ್ದು, 12 ಗಂಟೆ ಕಳೆದರೂ ಮನೆಗೆ ಮರಳಲಿಲ್ಲ. ಮನೆಯಲ್ಲಿ ಇದ್ದ ಅವರ ಪತ್ನಿ ಮತ್ತು ಮಗಳು ಮಧ್ಯಾಹ್ನದವರೆಗೆ ಕಾದಿದ್ದಾರೆ. ಯಾವತ್ತೂ ತಡವಾಗಿ ಬಾರದ ಶೇಖರಪ್ಪ ಅಂದು ಬಾರದೇ ಇದ್ದಿದ್ದರಿಂದ ಮಗಳು ನೆರೆಹೊರೆಯವರು, ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಶೇಖರಪ್ಪ ಜೊತೆಗಿದ್ದ ಕೀಪ್ಯಾಡ್ ಮೊಬೈಲ್ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಇದು ಮತ್ತಷ್ಟು ಗಾಬರಿ ಮೂಡಿಸಿದೆ.
ಶೇಖರಪ್ಪರನ್ನು ಮಧ್ಯಾಹ್ನದೊಳಗೆ ಹುಡುಕಿ ತರುವುದಾಗಿ ಗ್ರಾಮದ ಜನರು ಕಾಡಿನೊಳಗೆ ಹೋಗಿದ್ದಾರೆ. ಪ್ರತಿ ಬಾರಿ ಅವರು ಕಾಡಿಗೆ ಹೋಗುವ ದಾರಿ, ಕಟ್ಟಿಗೆ ಹುಡುಕುವ ಸ್ಥಳ ಎಲ್ಲವನ್ನು ತಡಕಾಟ ನಡೆಸಿದ್ದಾರೆ. ಕಾಡಿನಲ್ಲಿ ಶೇಖರಪ್ಪ ಹೆಸರು ಕೂಗಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಏನೋ ಅವಘಡ ಸಂಭವಿಸಿದೆ ಎಂದು ಗಾಬರಿಯಾಗಿದ್ದಾರೆ. ಜನರ ಜೊತೆ ಹೆಜ್ಜೆ ಹಾಕಿದ್ದ ಶೇಖರಪ್ಪನವರ ಮನೆಯ ಹೆಣ್ಣು ನಾಯಿ ಮಾತ್ರ ಜನರಿಂದ ಬೇರೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸಕ್ರೆ ಬೈಲು ಆನೆ ಬಿಡಾರದ 'ಗಣೇಶ' ಅನಾರೋಗ್ಯದಿಂದ ಸಾವು
ಸಂಜೆ 4 ಗಂಟೆಯ ಸುಮಾರಿಗೆ ನಾಯಿಯು ಕಾಣೆಯಾಗಿದ್ದ ಶೇಖರಪ್ಪನನ್ನು ಪತ್ತೆ ಹಚ್ಚಿ ಕೂಗಿದೆ. ಯಾವುದೋ ಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದ ಜನರು ನಾಯಿ ಕೂಗಿನತ್ತ ಧಾವಿಸಿದಾಗ ಒಂದು ಮರದ ಕೆಳಗೆ ಶೇಖರಪ್ಪ ಪ್ರಜ್ಞೆತಪ್ಪಿ ಬಿದ್ದಿದ್ದರು. ತಕ್ಷಣವೇ ಗ್ರಾಮಸ್ಥರು ಶೇಖರಪ್ಪನನ್ನು ರಿಪ್ಪನ್ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶೇಖರಪ್ಪ ಸದ್ಯ ಚೇತರಿಸಿಕೊಂಡಿದ್ದು ಇಡೀ ಸೂಡೂರು ಜನತೆ ಶ್ವಾನಪ್ರೀತಿಯನ್ನು ಕೊಂಡಾಡಿದೆ.
“ಆರೇಳು ವರ್ಷಗಳಿಂದಿರುವ ನಾಯಿ ಕೇವಲ ಹೆಣ್ಣು ಮರಿಗಳನ್ನೇ ಹಾಕುತ್ತಿತ್ತು. ಈಗಲೂ ಕೂಡ ಗರ್ಭ ಧರಿಸಿದೆ. ಯಾವಾಗಲೂ ನಾಯಿಗೆ ಬೈಯ್ತಿದ್ದೆ. ಆದರೆ, ಈ ಉಪಕಾರವನ್ನ ಕೊನೆಯವರೆಗೂ ಮರೆಯುವುದಿಲ್ಲ” ಎಂದು ಶೇಖರಪ್ಪ ಹೇಳಿದ್ದಾರೆ.