ಜೂನ್‌ 24ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ದಸಂಸ ಪ್ರತಿಭಟನೆ

  • "ಯಾವ ಸರ್ಕಾರವೂ ದಲಿತರ ಮತ್ತು ಬಡವರ ಬವಣೆಗಳನ್ನು ಆಲಿಸಿಲ್ಲ"
  • "ದಲಿತರ ಅಭಿವೃದ್ದಿಗೆ ಹತ್ತು ಪೈಸೆ, ಜಾಹಿರಾತುಗಳಿಗೆ 90 ಪೈಸೆ ವೆಚ್ಚ"

ದಲಿತರ ಮೂಲಭೂತ ಹಕ್ಕುಗಳಿಗೆ ಒತ್ತಾಯಿಸಿ ಜೂನ್ 24 ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಏಕಕಾಲಕ್ಕೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ರಾಜ್ಯ ಸಂಘಟನಾ ಸಂಚಾಲಕ ಕಾರಳ್ಳಿ ಶ್ರೀನಿವಾಸ್ ಹೇಳಿದ್ದಾರೆ.

ದೇವನಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಕೇಂದ್ರ ಮತ್ತು ರಾಜ್ಯದಲ್ಲಿ ಹಲವಾರು ಚುನಾಯಿತ ಸರ್ಕಾರಗಳು ಆಡಳಿತ ನಡೆಸಿವೆ. ಆದರೆ, ಯಾವ ಸರ್ಕಾರವೂ ದಲಿತರ ಮತ್ತು ಬಡವರ ಬವಣೆಗಳನ್ನು ಆಲಿಸಿಲ್ಲ. ಸಮಸ್ಯೆಗಳನ್ನು ಪರಿಹರಿಸಿಲ್ಲ. ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡಿಲ್ಲ" ಎಂದು ಆರೋಪಿಸಿದ್ದಾರೆ. 

Eedina App

"ಜಾತಿಯನ್ನು ಉಸಿರಾಡುವ ಈ ಪ್ರಭುತ್ವಗಳು ದಲಿತರ ಅಭಿವೃದ್ಧಿಗೆ ಕೋಟಿಗಟ್ಟಲೆ ವೆಚ್ಚ ಮಾಡುತ್ತಿದ್ದೇವೆಂದು ಹೇಳಿಕೊಳ್ಳುತ್ತಿವೆ. ಆದರೆ, ದಲಿತರ ಅಭಿವೃದ್ದಿಗಾಗಿ ಹತ್ತು ಪೈಸೆ ಖರ್ಚು ಮಾಡಿ, ಜಾಹಿರಾತುಗಳಿಗೆ 90 ಪೈಸೆ ವೆಚ್ಚ ಮಾಡುತ್ತಿವೆ. ದಲಿತರ ಕುರಿತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಧ್ಯಯನಗಳು ನೀಡುವ ವಾಸ್ತವ ಚಿತ್ರಣವೇ ಬೇರೆಯಾಗಿದೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

"2019ಕ್ಕೂ ಮುನ್ನ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ಸೌಲಭ್ಯ ನೀಡಲಾಗುತ್ತಿತ್ತು. ಆದರೆ, ಇದೀಗ ಆ ಸೌಲಭ್ಯವನ್ನು ಸರ್ಕಾರ ಏಕಾಏಕಿ ರದ್ದುಗೊಳಿಸಿದೆ. ಈ ನಡೆ ಅಕ್ಷಮ್ಯ" ಎಂದು ಅವರು ಕಿಡಿಕಾರಿದ್ದಾರೆ. 

AV Eye Hospital ad

"ಸರ್ಕಾರ ಶಿಕ್ಷಣವನ್ನು ಕೇಸರೀಕರಣಗೊಳಿಸಿ ಮಕ್ಕಳಲ್ಲಿ ಕೋಮುವಾದದ ವಿಷ ಬೀಜ ಬಿತ್ತುವ ಹುನ್ನಾರ ನಡೆಸುತ್ತಿದೆ. ಸಂವಿಧಾನದ ಆಶಯದಂತೆ ತಳ ಸಮುದಾಯಗಳ ಏಳಿಗೆಗಾಗಿ ಶ್ರಮಿಸಬೇಕಾದ ಸರ್ಕಾರಗಳು ಉಳ್ಳವರ ಕೈಗೊಂಬೆಗಳಾಗಿವೆ" ಎಂದು ಕಾರಳ್ಳಿ ಶ್ರೀನಿವಾಸ್ ಆರೋಪಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಮೈಸೂರಿನಲ್ಲಿ ಮೋದಿ | ಎಂಎಸ್‌ಪಿ ಜಾರಿಗೆ ಆಗ್ರಹಿಸಿ ರೈತರ ಪ್ರತಿಭಟನೆ

"ಬಾಬಾಸಾಹೇಬ್ ಅಂಬೇಡ್ಕರರ ಆಶಯದಂತೆ ಇಂದು ದಲಿತ ದಮನಿತರು ಐಕ್ಯ ಹೋರಾಟವನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಜೂನ್ 24 ರಂದು ದಲಿತರಿಗೆ ಭೂಮಿ, ವಸತಿ, ವಿದ್ಯಾರ್ಥಿ ವೇತನ, ಹಾಸ್ಟೆಲ್‌ಗಳಂತಹ ಮೂಲ ಸೌಲಭ್ಯಗಳನ್ನು ಕಲ್ಪಸುವಂತೆ ಒತ್ತಾಯಿಸಿ ಹಾಗೂ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ, ನಾಗರೀಕ ಹಕ್ಕು ಜಾರಿ ದಳಕ್ಕೆ ರಕ್ಷಣಾತ್ಮಕ ಅಧಿಕಾರಕ್ಕಾಗಿ ಆಗ್ರಹಿಸಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳ ಎದುರು ಏಕಕಾಲದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು" ಎಂದು ಅವರು ವಿವರಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಸಂಚಾಲಕ ಬಿಸ್ಲಳ್ಳಿ ಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ಆವತಿ ತಿಮ್ಮರಾಯಪ್ಪ, ಜೊಗಳ್ಳಿ ನಾರಾಯಣಸ್ವಾಮಿ ಇದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app