ಕೊಡಗು | ಸಂವಿಧಾನ ಬದ್ಧ ಹಕ್ಕುಗಳ ಈಡೇರಿಕೆಗಾಗಿ 'ಅರೆಬೆತ್ತಲೆ' ಮೆರವಣಿಗೆ; ಧರಣಿ ಸತ್ಯಾಗ್ರಹ

kodagu
 • ಕೊಡಗಿನಲ್ಲಿ ಜೀತಗಾರಿಕೆ ಈಗಲೂ ಜೀವಂತವಾಗಿದೆ
 • ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರಿಗೆ ಅನ್ಯಾಯ

ಕೊಡಗು ಜಿಲ್ಲೆ ಪೊನ್ನಂಪೇಟೆಯಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಸಂವಿಧಾನ ಬದ್ಧ ಹಕ್ಕುಗಳ ಈಡೇರಿಕೆಗಾಗಿ 'ಅರೆಬೆತ್ತಲೆ ಮೆರವಣಿಗೆ ಹಾಗೂ ಧರಣಿ ಸತ್ಯಾಗ್ರಹ ' ನಡೆಯಿತು.

ಪೊನ್ನಂಪೇಟೆ ಖಾಸಗಿ ಬಸ್ ನಿಲ್ದಾಣದಿಂದ ಪ್ರಾರಂಭವಾದ ಅರೆಬೆತ್ತಲೆ ಮೆರವಣಿಗೆ ಸರ್ಕಾರ, ಜಿಲ್ಲಾಡಳಿತ, ಸ್ಥಳೀಯಾಡಳಿತದ ವಿರುದ್ಧ ಧಿಕ್ಕಾರ ಕೂಗುತ್ತ ಸಾಗಿ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಜಿಲ್ಲಾ ಸಂಚಾಲಕ ಹೆಚ್ ಆರ್ ಪರಶುರಾಮ್ “ಕೊಡಗಿನಲ್ಲಿ ಜೀತಗಾರಿಕೆ ಈಗಲೂ ಜೀವಂತವಾಗಿದ್ದು, ಶತ ಶತಮಾನಗಳಿಂದ ಒಂದಿಂಚು ಸ್ವಂತ ಜಾಗ ಹೊಂದಿಲ್ಲದ ಸಾವಿರಾರು ಬಡ ಕುಟುಂಬಗಳು ಕೊಡಗಿನಲ್ಲಿವೆ. 2005-06ರಲ್ಲಿ ಆದಿವಾಸಿಗಳು ಭೂ ಒಡೆತನ ಹೊಂದಲು ತರಲಾದ ಅರಣ್ಯ ಹಕ್ಕು ಕಾಯ್ದೆ ಸಂಪೂರ್ಣ ವಿಫಲವಾಗಿದ್ದು, ಆದಿವಾಸಿಗಳನ್ನು ಭೂ ಒಡೆತನದಿಂದ ವಂಚಿಸಲಾಗುತ್ತಿದೆ” ಎಂದರು.

“ದುಡಿಯುವ ಕಾರ್ಮಿಕ ವರ್ಗವನ್ನು ಪ್ರಗತಿಗೊಳಿಸಲು ನೂರಾರು ಕಾರ್ಯಕ್ರಮಗಳು ಸರ್ಕಾರದಿಂದ ತರಲಾಗಿದೆ. ಆದರೆ, ಇದುವರೆಗೆ ಯಾರಿಗೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ” ಎಂದು ಅಸಮಾಧಾನ ಹೊರಹಾಕಿದರು.

ಈ ಸುದ್ದಿ ಓದಿದ್ದೀರಾ?: ಆರ್‌ಎಸ್‌ಎಸ್‌ ವಿರುದ್ಧ ಕರಪತ್ರ ಹಂಚಿದ ಆರೋಪ: ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆಯ ಮೂವರು ಪೊಲೀಸ್ ವಶ

“ಹಿಂದುಳಿದ ಅಲ್ಪಸಂಖ್ಯಾತ ವರ್ಗವನ್ನು ಎಲ್ಲ ರೀತಿಯ ಅಭಿವೃದ್ಧಿಯಿಂದ ಹೊರಗಿಡಲಾಗಿದೆ. ಜಾತಿ, ಕೋಮುವಾದ ಮತ್ತು ಮತೀಯ ಭಾವನೆಗಳನ್ನು ಕೆರಳಿಸಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅಮಾಯಕರ ಕೊಲೆ, ದೌರ್ಜನ್ಯಗಳಿಂದ ಹತ್ತಿ ಉರಿಯುತ್ತಿದೆ. ಮಹಿಳೆಯರ ಮಾನಭಂಗ, ದಲಿತರ ಅತ್ಯಾಚಾರ, ಹತ್ಯೆ-ದೌರ್ಜನ್ಯಗಳು ಸಾಮಾನ್ಯವಾಗಿ ನಡೆಯುತ್ತಿದೆ. ಇದು ಆತಂಕಕಾರಿ” ಎಂದು ಕಳವಳ ವ್ಯಕ್ತಪಡಿಸಿದರು.

ಈ ದಿನ.ಕಾಮ್‌ ಜೊತೆ ಮಾತನಾಡಿದ ದಸಂಸ ಹಿರಿಯ ಮುಖಂಡ ಹೆಚ್ ಎಸ್ ಕೃಷ್ಣಪ್ಪ, "ರೈತರು ನಿತ್ಯ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ದಲಿತರು ರಾಜ್ಯದಲ್ಲಿ ಎರಡನೇ ಪ್ರಜೆಗಳಂತೆ ಜೀವನ ನಡೆಸಬೇಕಾಗಿದೆ. ನಿವೇಶನ, ಸರಿಯಾದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಮನೆಗಳಿಗೆ ಹಕ್ಕುಪತ್ರವಿಲ್ಲ, ಸತ್ತವರ ಮಣ್ಣು ಮಾಡಲು ಸ್ಮಶಾನಗಳಿಲ್ಲ, ವಿದ್ಯಾರ್ಥಿಗಳಿಗೆ ಸೂಕ್ತ ವಿದ್ಯಾರ್ಥಿ ನಿಲಯಗಳಿಲ್ಲ, ವಿದ್ಯಾವಂತ ಯುವಕರಿಗೆ ಉದ್ಯೋಗಗಳಿಲ್ಲದೆ ನಿರಾಸೆ, ಆತಂಕ, ಭಯದಿಂದ ದಲಿತರು ಜೀವನ ನಡೆಸುತ್ತಿದ್ದಾರೆ" ಎಂದರು.

Image
kodagu

“ದಲಿತರ ಕೂಗು ನಾಡನ್ನಾಳುವ ದೊರೆಗಳಿಗೆ ಕೇಳುತ್ತಿಲ್ಲ. ಕೇಳಿದರೂ ಕೇಳಿಸದಂತೆ ಇದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗಾಗಿ ಮೀಸಲಿಟ್ಟ ಜಾಗಗಳನ್ನು ಜಾತಿವಾದಿ ಮೇಲ್ವರ್ಗದವರು ಆಕ್ರಮಿಸಿಕೊಂಡಿದ್ದಾರೆ. ಒತ್ತುವರಿ ತೆರವಿಗಾಗಿ ನಡೆಸಿದ ದಸಂಸ ಹೋರಾಟಗಳನ್ನು ಹತ್ತಿಕ್ಕಲಾಗಿದೆ. ಹೋರಾಟಗಾರರ ಮೇಲೆ ವಿನಾಕಾರಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಹಿರಿಯ ದಸಂಸ ಮುಖಂಡ ಟಿ ಎಂ ಗೋವಿಂದಪ್ಪ ಮಾತನಾಡಿ, “ಸರ್ಕಾರ ಭೂಮಾಲೀಕರ ಪರವಾದ ಸರ್ಕಾರಿ ಪೈಸಾರಿ ಜಾಗವನ್ನು ಒತ್ತುವರಿ ಮಾಡಿ ತೋಟ ಮಾಡಿಕೊಂಡವರಿಗೆ 30 ವರ್ಷಗಳಿಗೆ ಭೋಗ್ಯಕ್ಕೆ ಕೊಡುವ ಬಗ್ಗೆ ತೀರ್ಮಾನ ಮಾಡಿಕೊಂಡಿದೆ. ಬಡವರನ್ನು ನಿರ್ಗತಿಕಕರನ್ನಾಗಿ ಮಾಡಿ, ಶ್ರೀಮಂತರನ್ನು ಅತಿ ಶ್ರೀಮಂತರನ್ನಾಗಿ ಮಾಡುವ ಹುನ್ನಾರ ಸರ್ಕಾರದಿಂದಲೇ ನಡೆಯುತ್ತಿದೆ. ಶಿಕ್ಷಣದಲ್ಲಿ ಅವೈಜ್ಞಾನಿಕವಾಗಿ, ಮೂಢನಂಬಿಕೆ, ಸಂವಿಧಾನ ವಿರೋಧಿ ಮನೋಭಾವ ತುಂಬಲು ಪ್ರಯತ್ನ ನಡೆಸಲಾಗುತ್ತಿದೆ” ಎಂದು ಕಿಡಿಕಾರಿದರು.

Image
kodagu

“ಸಂವಿಧಾನ ಬದ್ಧವಾಗಿ ಸಿಗಬೇಕಿದ್ದ ಮೂಲಭೂತ ಸೌಲಭ್ಯಗಳನ್ನು, ಹಕ್ಕುಗಳನ್ನು ಆಡಳಿತಾತ್ಮಕವಾಗಿ ನಿರಾಕರಿಸಲಾಗಿದೆ.  75ನೇಯ ವರ್ಷದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದಲಿತರು, ಬಡವರು ಅರ್ಧ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ. ಸರ್ಕಾರದ ಆಡಳಿತದ ವೈಫಲ್ಯವನ್ನು ದಸಂಸ ಖಂಡಿಸುತ್ತದೆ” ಎಂದರು.

ಧರಣಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್, ತಕ್ಷಣವೇ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇವೆ. ಸಭೆಯ ದಿನದಂದು ಎಲ್ಲ ಅಧಿಕಾರಿಗಳು, ಮುಖಂಡರುಗಳ ಜೊತೆ ಚರ್ಚಿಸಿ ತಾಲೂಕಿನ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಹಸೀಲ್ದಾರ್ ಅವರಿಗೆ ದಸಂಸ ಜಿಲ್ಲಾ ಸಂಚಾಲಕ ಪರಶುರಾಮ್ ಅವರು ಹಕ್ಕೊತ್ತಾಯ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೆಚ್ ಏನ್ ಕುಮಾರ್, ವಕೀಲರಾದ ಸುನಿಲ್ ,ಚಂದ್ರ, ಮುರುಗ ಸಿ, ಮಂಜುನಾಥ್, ಮಂಜು, ಚೆಲುವ, ಕರ್ಕು, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.

ದಲಿತ ಸಂಘರ್ಷ ಸಮಿತಿಯ ಬೇಡಿಕೆಗಳು:

 • ತೋಟ ಮಾಲೀಕರ ಲೈನ್ ಮನೆಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮನೆ ನಿವೇಶನ ಹಂಚಬೇಕು.
 • ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಪೈಸಾರಿ ಜಾಗವನ್ನು ಕೂಡಲೇ ತೆರವುಗೊಳಿಸಿ ನಿವೇಶನ ರಹಿತರು, ಭೂ ರಹಿತರಿಗೆ ಹಂಚಬೇಕು.
 • ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಭೂ ರಹಿತ ಆದಿವಾಸಿಗಳಿಗೆ ತಲಾ 5 ಎಕರೆ ಭೂಮಿ ಹಂಚಬೇಕು ಹಾಗೂ ವಾಸಿಸುತ್ತಿರುವ ಕಾಡಿನಲ್ಲೇ ಅವರಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರ ಪಾರಂಪರಿಕ ಹಕ್ಕುಗಳನ್ನು ಕಾನೂನುಗತಗೊಳಿಸಬೇಕು. ಅರಣ್ಯಾಧಿಕಾರಿಗಳಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು.
 • ಪ್ರತಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗ್ರಾಮಗಳಲ್ಲಿ ಸ್ಮಶಾನ ಜಾಗ ಕಾಯ್ದಿರಿಸಬೇಕು.
 • ದಲಿತ, ಹಿಂದುಳಿದ,ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಹೋಬಳಿಗೊಂದು ವಸತಿ ಶಾಲೆ, ಸುಸಜ್ಜಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕು ಮತ್ತು ತಾಲೂಕಿಗೊಂದು ಸರ್ಕಾರಿ ಡಿಗ್ರಿ ಕಾಲೇಜನ್ನು ಸ್ಥಾಪಿಸಬೇಕು.
 • ದಲಿತರ ಮೇಲೆ ನಡೆಯುತ್ತಿರುವ ಅಟ್ರಾಸಿಟಿ(ದೌರ್ಜನ್ಯ)  ಪ್ರಕರಣಗಳನ್ನು ಕಠಿಣಗೊಳಿಸಿ ಆರೋಪಿಗೆ ಜಾಮೀನು ಸಿಗದಂತೆ ಮತ್ತು ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆ ಆಗುವಂತೆ ಕಾನೂನು ತರಬೇಕು.
 • ದಲಿತ ವಿದ್ಯಾವಂತ ಯುವಕರಿಗೆ ಕಡ್ಡಾಯವಾಗಿ ಸರ್ಕಾರಿ ಉದ್ಯೋಗ ಸಿಗುವಂತೆ ಕಾನೂನುಗಳನ್ನು ಜಾರಿಗೊಳಿಸಬೇಕು.
 • ಭೂ ಮಾಲೀಕರಿಂದ ಅತಿಕ್ರಮಣಗೊಂಡ ಸರ್ಕಾರಿ ಪೈಸಾರಿ ಜಾಗವನ್ನು ಭೋಗ್ಯಕ್ಕೆ ಕೊಡುವ ಕರ್ನಾಟಕ ಸರ್ಕಾರದ ತೀರ್ಮಾನವನ್ನು ಕೈಬಿಡಬೇಕು.
 • ಅರ್ಧಕ್ಕೆ ಶಾಲೆ ಬಿಟ್ಟ ದಲಿತ ವಿದ್ಯಾರ್ಥಿಗಳನ್ನು ಶಾಲೆಗೆ ಮರು ಸೇರ್ಪಡೆಗೆ ಕಾನೂನಾತ್ಮಕವಾಗಿ ಆದೇಶ ಹೊರಡಿಸಬೇಕು.
 • ಪರಿಶಿಷ್ಟ ಜಾತಿಯವರಿಗೆ ಈಗ ಇರುವ ಶೇ 15% ಮೀಸಲಾತಿ ಪ್ರಮಾಣವನ್ನು ಶೆ 17% ಕ್ಕೆ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 3% ಮೀಸಲಾತಿಯ ಪ್ರಮಾಣವನ್ನು ಶೇ 7 ಕ್ಕೆ ಹೆಚ್ಚಿಸಬೇಕು.
 • ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಹೆಚ್ಚಿಸಬೇಕು.
 • ನಿರುದ್ಯೋಗ ದಲಿತ ಪದವಿದರರಿಗೆ ಸ್ಟೈಫಂಡ್ (ನಿರುದ್ಯೋಗ ಭತ್ಯೆ) ಮಾಸಿಕ ಭತ್ಯೆ ನೀಡಬೇಕು.
 • ಲೈಸೆನ್ಸ್ ಹೊಂದಿದ ದಲಿತ ವಿದ್ಯಾವಂತರಿಗೆ ಸರ್ಕಾರಿ, ಅರೆ ಸರ್ಕಾರಿ ಕಾಮಗಾರಿಗಳಲ್ಲಿ ,ಸರ್ಕಾರಿ ಸಾಮ್ಯದ ಸಂಸ್ಥೆಗಳಲ್ಲಿ ಆಹಾರ ಪದಾರ್ಥ ಸಾಗಾಟ ಇನ್ನಿತರ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನಿಗದಿಪಡಿಸಬೇಕು.
 • ದಲಿತರ ಕೊಲೆಗಳು ,ಜಾತಿಯ ಹೆಸರಿನಲ್ಲಿ ಅಥವಾ ಯಾವುದೇ ಕಾರಣಕ್ಕೆ ನಡೆದರೂ ಸಹ ಕನಿಷ್ಠ 50 ಲಕ್ಷ ಪರಿಹಾರ ಸರ್ಕಾರ ಮಂಜೂರು ಮಾಡಬೇಕು.
 • ದಲಿತರಿಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಒದಗಿಸುವ ಕಾನೂನು ಜಾರಿ ಮಾಡಬೇಕು.
 • ದಲಿತ ಹೋರಾಟಗಾರರ ಮೇಲೆ ದುರುದ್ದೇಶದಿಂದ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು.
 • ಅಂತರ್ ಜಾತೀಯ ವಿವಾಹಕ್ಕೆ ಪ್ರೋತ್ಸಾಹ ಧನವನ್ನು 25 ಲಕ್ಷಕ್ಕೆ ಹೆಚ್ಚಿಸಬೇಕು.
 • ಖಾಸಗಿ ಕ್ಷೇತ್ರದಲ್ಲಿ ಸರ್ಕಾರಿ ಕ್ಷೇತ್ರದಲ್ಲಿ ನಿಯಮದಂತೆ ದಲಿತರಿಗೆ ಮೀಸಲಾತಿಯನ್ನು ಜಾರಿಗೊಳಿಸಬೇಕು.
 • ಪರಿಶಿಷ್ಟ ಪಂಗಡದವರು ಹೆಚ್ಚಿರುವ ಕೊಡಗಿನ ಪೊನ್ನಂಪೇಟೆ ತಾಲೂಕನ್ನು ಪರಿಶಿಷ್ಟ ಪಂಗಡದವರಿಗಾಗಿ ವಿಧಾನ ಸಭಾ ಕ್ಷೇತ್ರವೆಂದು ಘೋಷಿಸಬೇಕು.
 • ಪ್ರತಿ ಗ್ರಾಮಗಳಲ್ಲಿ ದಲಿತರಿಗಾಗಿ ಅಂಬೇಡ್ಕರ್ ಭವನ ನಿರ್ಮಿಸಬೇಕು.
 • ಪೌರ ಕಾರ್ಮಿಕ ಆರೋಗ್ಯ ಕಾಪಾಡಲು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಬೇಕು ಮತ್ತು ಪೌರ ಕಾರ್ಮಿಕರ ವೇತನ ಹೆಚ್ಚಳಗೊಳಿಸಬೇಕು . ಏರೆಡುವರೆ ವರ್ಷ ಕರ್ತವ್ಯ ನಿರ್ವಹಿಸಿರುವ ಎಲ್ಲ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಬೇಕು.
 • ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಮೀಸಲಾತಿ ನಿಯಮದಂತೆ ಪ್ರವೇಶಕ್ಕೆ ಮೀಸಲಾತಿ ನಿಗದಿ ಪಡಿಸಬೇಕು.
ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
3 ವೋಟ್