ಈ ದಿನ ವಿಶೇಷ | ಅಧಿಕಾರಿಗಳ ನಿರ್ಲಕ್ಷ್ಯದಿಂದ ʼಇ-ವಿಧಾನ ಮಂಡಲʼ ಜಾರಿಯಾಗುತ್ತಿಲ್ಲ: ಸ್ಪೀಕರ್ ಕಾಗೇರಿ ಆರೋಪ

Vishveshwara Hegde Kageri
  • ʼಇ ವಿಧಾನ ಮಂಡಲ ಯೋಜನೆʼ ವಿಚಾರ ಕುರಿತ ಈ ದಿನ.ಕಾಮ್‌ ಪ್ರಶ್ನೆಗೆ ಕಾಗೇರಿ ಉತ್ತರ
  • ಸಭಾಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ

ವಿಧಾನ ಮಂಡಲದ ಉಭಯ ಸದನಗಳ ವ್ಯವಹಾರವನ್ನು ಸಂಪೂರ್ಣ ಕಾಗದರಹಿತಗೊಳಿಸುವ ಉದ್ದೇಶದಿಂದ ಜಾರಿಗೆ ತರಲು ಯೋಜಿಸಿದ್ದ ʼಇ-ವಿಧಾನ ಮಂಡಲʼ ಯೋಜನೆ ಜಾರಿ ವಿಳಂಬಕ್ಕೆ ಅಧಿಕಾರಿ ವರ್ಗವೇ ಕಾರಣ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೇರವಾಗಿ ಆರೋಪಿಸಿದರು.

ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ಮೂರು ವರ್ಷದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ ಕಾರ್ಯಕ್ರಮದಲ್ಲಿ ʼಇ ವಿಧಾನ ಮಂಡಲ ಯೋಜನೆʼ ವಿಚಾರ ಎಲ್ಲಿಗೆ ಬಂತು ಎಂದು ಈ ದಿನ.ಕಾಮ್‌ ಪ್ರಶ್ನಿಸಿದ್ದಕ್ಕೆ ಅವರು ಉತ್ತರಿಸಿದರು.

ಮುಂದುವರಿದು, “ಇ-ವಿಧಾನ ಮಂಡಲ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಪ್ರಯತ್ನಿಸಿರುವೆ. ಮೂವರು ಮುಖ್ಯ ಕಾರ್ಯದರ್ಶಿಗಳ ಜೊತೆ ಈ ಬಗ್ಗೆ ಚರ್ಚಿಸಿದ್ದರೂ ಯಾವುದೇ ಕ್ರಮ ಸಾಧ್ಯವಾಗಿಲ್ಲ. ಕಾರ್ಯಾಂಗದ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ. ನಾಲ್ಕು ವರ್ಷಗಳಿಂದ ಈ ಯೋಜನೆ ಕುಂಟುತ್ತ ಸಾಗಿದೆ. ಈಗಾಗಲೇ ಕೇರಳ ಸರ್ಕಾರ ಕಾಗದರಹಿತ ಯೋಜನೆ ಜಾರಿಗೆ ತಂದಿದೆ. ಆದರೂ ನಮ್ಮ ಅಧಿಕಾರಿ ವರ್ಗ ನಿರ್ಲಕ್ಷ್ಯದಿಂದ ನೋಡುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಾಂಗದ ಮೇಲೆ ಸಭಾಧ್ಯಕ್ಷ ಕಾಗೇರಿ ಅವರು ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಪ್ರತಿಕ್ರಿಯೆ ಪಡೆಯಲು ಈ ದಿನ.ಕಾಮ್‌ ಸತತವಾಗಿ ಪ್ರಯತ್ನಿಸಿತು. ಆದರೆ, ಅವರು ಕರೆಯನ್ನು ಸ್ವೀಕರಿಸಲ್ಲ. ಇದು ಕಾಗೇರಿ ಅವರ ಆರೋಪಕ್ಕೆ ಪರೋಕ್ಷವಾಗಿ ಸಾಕ್ಷಿಯಂತಿತ್ತು. 

ಈ ಸುದ್ದಿ ಓದಿದ್ದೀರಾ? ಈ ದಿನ ಎಕ್ಸ್‌ಕ್ಲೂಸಿವ್, ಭಾಗ 1|‌ ʼಇ-ವಿಧಾನಮಂಡಲʼ ಯೋಜನೆ ಹೆಸರಲ್ಲಿ ಜನರ ತೆರಿಗೆ ಹಣ ದುರ್ಬಳಕೆಗೆ ಹುನ್ನಾರ?

ಏನಿದು ಇ-ವಿಧಾನ ಮಂಡಲ ಯೋಜನೆ ವಿವಾದ?

ವಿಧಾನ ಮಂಡಲದ ಉಭಯ ಸದನಗಳ ವ್ಯವಹಾರವನ್ನು ಸಂಪೂರ್ಣ ಕಾಗದರಹಿತಗೊಳಿಸುವ ಉದ್ದೇಶದಿಂದ ಜಾರಿಗೆ ತರಲು ಯೋಜಿಸಿದ್ದ ʼಇ-ವಿಧಾನ ಮಂಡಲʼ ಯೋಜನೆ ಅಂದಾಜು ವೆಚ್ಚ ಸುಮಾರು ₹60 ಕೋಟಿ ಇತ್ತು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಭಾಧ್ಯಕ್ಷರಾದ ಮೇಲೆ ದಿಢೀರನೇ 254 ಕೋಟಿ ರೂ. ಗೆ ಹೆಚ್ಚಳವಾಗಿದೆ.

ಇ-ವಿಧಾನ ಮಂಡಲ ಯೋಜನಾ ವೆಚ್ಚದಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚಳವಾಗಿರುವ ಕುರಿತು ಆತಂಕ ವ್ಯಕ್ತಪಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿ ರಾಜ್ಯ ಸರ್ಕಾರಕ್ಕೆ ಎರಡು ವರ್ಷಗಳ ಎರಡು ವರ್ಷದ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, “ಕಾಗದ ರಹಿತ ಯೋಜನೆಗೆ 254 ಕೋಟಿ ರೂ. ಅಂದಾಜು ಮಾಡಿರುವುದು ತಿಳಿದು ಬಂದಿದೆ. ಈ ಮೂಲಕ ರಾಜ್ಯದ ಜನತೆಯ ಶ್ರಮದ ಹಣವನ್ನು ದುಂದುವೆಚ್ಚ ಮತ್ತು ದುರ್ಬಳಕೆ ಮಾಡುವ ಅವಶ್ಯಕತೆ ಏನಿದೆ” ಎಂದು ಪ್ರಶ್ನಿಸಿದ್ದರು.

ಮುಂದುವರಿದು, “ವಿಧಾನ ಮಂಡಲದ ವ್ಯವಹಾರ, ವಿದ್ಯಮಾನಗಳನ್ನು ಸಂಪೂರ್ಣ ಕಾಗದರಹಿತ ಮಾಡುವ ಸದುದ್ದೇಶದ ಯೋಜನೆಯನ್ನೇ ನೆಪವಾಗಿಸಿಕೊಂಡು ಅಧಿಕಾರಶಾಹಿ ಸಾರ್ವಜನಿಕ ತೆರಿಗೆ ಹಣವನ್ನು ಲೂಟಿ ಹೊಡೆಯುವ ಹುನ್ನಾರ ನಡೆಸಿದೆ” ಎಂಬುದನ್ನು ಸ್ವತಃ ಪ್ರತಿಪಕ್ಷ ನಾಯಕರೇ ಅಧಿಕೃತ ಪತ್ರದಲ್ಲಿ ಪ್ರಸ್ತಾಪಿಸಿದ್ದರು! 

ಸಿದ್ದರಾಮಯ್ಯ ಪತ್ರ ಮತ್ತು  ಅಧಿಕಾರಿ ವರ್ಗದ ಪತ್ರ ವ್ಯವಹಾರಗಳನ್ನು ದಾಖಲೆ ಸಮೇತ  ಈ ದಿನ. ಕಾಮ್‌ ಇ-ವಿಧಾನ ಮಂಡಲ ಯೋಜನೆ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಇಲ್ಲಿ ನೆನೆಯಬಹುದು. 

ಈ ಸುದ್ದಿ ಓದಿದ್ದೀರಾ? ʼಇ-ವಿಧಾನಮಂಡಲʼ ಯೋಜನೆ ಜಾರಿಗೆ ಅನುದಾನ ಕೋರಿ ಸ್ಪೀಕರ್ ಕಾಗೇರಿ ಪತ್ರ!

ಎರಡೇ ವರ್ಷದಲ್ಲಿ ಅಂದಾಜು ಮೊತ್ತ ಹೆಚ್ಚಳ

ರಾಜ್ಯ ವಿಧಾನಸಭಾ ಸಚಿವಾಲಯ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಈ ಯೋಜನೆ ಜಾರಿಗೆ ಮುಂದಾಗಿತ್ತು. ರಾಜ್ಯದ ವಿಧಾನ ಮಂಡಲದಲ್ಲಿ (ವಿಧಾನಸಭೆ ಮತ್ತು ವಿಧಾನ ಪರಿಷತ್)‌ ʼಇ-ವಿಧಾನ ಮಂಡಲʼ ಯೋಜನೆ ಜಾರಿಗೆ ಎನ್‌ಐಸಿ 60.84 ಕೋಟಿ ರೂ. ಅಂದಾಜು ಮಾಡಿತ್ತು. ಈ ಯೋಜನೆ ಜಾರಿಗೆ ಬೇಕಾದ ಆರ್ಥಿಕ ವೆಚ್ಚವನ್ನು ಕೇಂದ್ರ ಸರ್ಕಾರದ ʼನೇವಾʼ ಯೋಜನೆ ಅಡಿ‌ ಹಿಮಾಚಲ ಪ್ರದೇಶ ವಿಧಾನಸಭೆ ಮಾದರಿಯಲ್ಲಿಯೇ ಕೇಂದ್ರದಿಂದ ಶೇ. 60ರಷ್ಟು ಅನುದಾನ ಪಡೆಯಲು ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ  ಎರಡು ಬಾರಿ ಸಲ್ಲಿಸಿತ್ತು. 2016 ಸೆಪ್ಟೆಂಬರ್‌ 1 ರಂದು ಮತ್ತು 2016 ಮಾರ್ಚ್ 3ರಂದು ಶೇ.40ರಷ್ಟು ಅನುದಾನ ಕೋರಿ ಮನವಿ ಸಲ್ಲಿಸಲಾಗಿತ್ತು. 

ಈ ಸುದ್ದಿ ಓದಿದ್ದೀರಾ? ʼಇ-ವಿಧಾನಮಂಡಲʼ ಯೋಜನೆ| ಪ್ರತ್ಯೇಕ ಅನುದಾನಕ್ಕಾಗಿ ಉಭಯ ಸದನಗಳ ನಡುವೆ ಹಗ್ಗ ಜಗ್ಗಾಟ!

ಆದರೆ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಯಾವುದೇ ಉತ್ತರ ಬಾರದಿರುವ ಬಗ್ಗೆ ಸಭಾಧ್ಯಕ್ಷರ ಮೂಲಕ ಅಂದಿನ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಗಮನಕ್ಕೆ 2016 ಫೆಬ್ರವರಿ 2ರಂದು ತರಲಾಗಿದೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮ 2017-18ನೇ ಸಾಲಿನ ಆಯವ್ಯಯದಲ್ಲಿ ʼಇ-ವಿಧಾನ ಮಂಡಲʼ ಯೋಜನೆ ಜಾರಿಗೆ 20 ಕೋಟಿ ರೂ. ಅನುದಾನ ಘೋಷಿಸಿದ್ದರು.

ಸಿದ್ದರಾಮಯ್ಯ ಸರ್ಕಾರ ಒದಗಿಸಿದ್ದ ಅನುದಾನವನ್ನು ವಿಧಾನಸಭೆ ಸಚಿವಾಲಯ ತಿರಸ್ಕರಿಸಿದ್ದು, ಮತ್ತೆ ಹೊಸದಾಗಿ ಈ ಯೋಜನೆ ಜಾರಿಗೆ ʼಕಿಯೋನಿಕ್ಸ್‌ʼ ಸಂಸ್ಥೆಯಿಂದ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿಕೊಂಡಿದೆ. ವಿಪರ್ಯಾಸವೆಂದರೆ ಕೇವಲ ಎರಡೇ ವರ್ಷದಲ್ಲಿ ʼಇ-ವಿಧಾನ ಮಂಡಲʼ ಯೋಜನೆ ಜಾರಿಯ ಅಂದಾಜು ಮೊತ್ತ ನಾಲ್ಕು ಪಟ್ಟು ಹೆಚ್ಚಳವಾಗಿರುವುದು ಭಾರೀ ಹಣಕಾಸು ದುರ್ಬಳಕೆಯ ಅನುಮಾನ ಮೂಡಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್