ಜಾಗತಿಕ ತಾಪಮಾನದಿಂದ ಭೂಮಿ ಚಡಪಡಿಸುತ್ತಿದೆ : ಪರಿಸರ ತಜ್ಞ ನಾಗೇಶ್‌ ಹೆಗಡೆ

  • ಚಿತ್ರದುರ್ಗದಲ್ಲಿ ಜಾಗತಿಕ ತಾಪಮಾನ ಮತ್ತು ಕೃಷಿ - ಜಾಗೃತಿ ಸಮಾವೇಶ
  • ಗ್ರಾಮೀಣ ಕೃಷಿಕರ ಮಕ್ಕಳು ಕೃಷಿ ಬಿಟ್ಟು ನಗರಗಳಿಗೆ ವಲಸಿಗರಾಗುತ್ತಿದ್ದಾರೆ

ಭೂಮಿ ಮೇಲೆ ಮತ್ತು ಸಮುದ್ರದಲ್ಲಿ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಭೂಮಿ ಚಡಪಡಿಸುತ್ತಿದೆ ಎಂದು ಪರಿಸರ ತಜ್ಞ ನಾಗೇಶ್‌ ಹೆಗಡೆ ಹೇಳಿದರು.

ಚಿತ್ರದುರ್ಗದ ಕ್ರೀಡಾ ಸಭಾಂಗಣದಲ್ಲಿ ಭಾನುವಾರ ನಡೆದ 'ಜಾಗತಿಕ ತಾಪಮಾನ ಮತ್ತು ಕೃಷಿ ಜಾಗೃತಿ ಸಮಾವೇಶ'ದಲ್ಲಿ ಅವರು ಮಾತನಾಡಿದರು.

"ವಾತಾವರಣದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಕಾಡುಗಳು ಹೊತ್ತಿ ಉರಿಯುತ್ತಿವೆ. ಭೂಮಿಯ ಒಡಲ ಸಂಕಟವನ್ನು ತಣಿಸಲು ಎಲ್ಲೆಡೆ ಸುಂಟರಗಾಳಿ ಬೀಸುತ್ತಿದೆ. ಅಕಾಲಿಕ ಮಳೆ, ಚಂಡಮಾರುತಗಳು ಹೆಚ್ಚಿವೆ" ಎಂದು ನಾಗೇಶ್‌ ಹೆಗಡೆ ವಿವರಿಸಿದರು.

"ಕೃಷಿಗೆ ಬಳಸುತ್ತಿರುವ ಪರಿಕರಗಳಾದ ಮೋಟಾರ್‌ ಸೇರಿದಂತೆ ಎಲ್ಲೆಡೆ  ಪೆಟ್ರೋಲ್‌ ಉತ್ಪನ್ನಗಳನ್ನೇ ಬಳಸಲಾಗುತ್ತಿದೆ. ಅಂದರೆ ಕೃಷಿಗೆ ಬಳಸುವ ಆಯಾಮಗಳೆಲ್ಲ ಭೂಮಿಯಿಂದ ಬಗೆದು ತೆಗೆದವುಗಳಾಗಿವೆ. ಸಂಕಷ್ಟದಲ್ಲಿರುವ ರೈತರನ್ನು ಸಿನಿಮಾ ತಾರೆಯರು, ಫೈನಾನ್ಸ್‌ನಂತಹ ಕಂಪನಿಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸೆಳೆಯುತ್ತಿದ್ದಾರೆ. ನಿಕೃಷ್ಟ ಪ್ರಯೋಜನಕಾರಿ ವಸ್ತುಗಳೆಡೆಗೆ ಗಮನಹರಿಸುವಂತೆ ಮಾಡುತ್ತಿದ್ದಾರೆಂದು" ಎಂದವರು ಬೇಸರವ್ಯಕ್ತಪಡಿಸಿದರು.

ʼನಮ್ಮ ಉಳಿವಿಗಾಗಿ, ಸುಳಿವು ಹುಡುಕೋಣʼ ಎಂಬ ಘೋಷವಾಕ್ಯದೊಂದಿಗೆ ಪರಿಸರದ ಮೇಲೆ ಪ್ರಸ್ತುತ ದಾಳಿಗಳು, ತಾಪಮಾನ ಏರಿಕೆಯಿಂದ ಆಗುತ್ತಿರುವ ಸಮಸ್ಯೆಗಳು ಮತ್ತು ರೈತರ ಸಂಕಷ್ಟಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಯಿತು.

Image

ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯ ಗುರುರಾಜ್‌ ಎಸ್‌ ದಾವಣಗೆರೆ ಅವರು ಮಾತನಾಡಿ, "ಕೃಷಿಗೆ ಅಗತ್ಯವಿರುವುದನ್ನು ಬಿಟ್ಟು ಉಳಿದೆಲ್ಲವನ್ನೂ ಸರ್ಕಾರಗಳು ಮಾಡುತ್ತಿವೆ. 'ಆಹಾರ ಎಂಬುದು‌ ಸಂಪತ್ತಿನ ಮೂಲ. ಆದರೆ ಅದರ ಉತ್ಪಾದನೆ ಬಗೆಯರಿಯದ ಗೋಳು' ಎಂದು 106 ವರ್ಷಗಳ ಹಿಂದೆಯೇ ರವೀಂದ್ರನಾಥ ಠಾಗೋರ್ ಅವರು ಹೇಳಿದ್ದರು. 86 ವರ್ಷಗಳ ಹಿಂದೆ ದ.ರಾ. ಬೇಂದ್ರೆ ತಮ್ಮ ನಾದಲೀಲೆಯಲ್ಲಿ ʼಭೂಮಿ ತಾಯಿ ಚೊಚ್ಚಲ ಮಗನನ್ನು ಕಣ್ತೆರೆದು ನೋಡಿದಿರಾ, ಸಾಲದ ಶೂಲ ಆತನ ಕೊರಳ ಬಿಗಿದಿದೆ. ಆದರೂ ಯಮನಿಗೂ ಕರುಣೆಯಿಲ್ಲ. ಕಣ್ಮುಚ್ಚಿ ತೆರೆಯುವ ಪ್ರತಿ ಉಸಿರಾಟಕ್ಕೂ ಸತ್ತು ಬದುಕುತ್ತಿದ್ದಾನೆʼ ಎಂದು ರೈತನ ಕರುಣಾಜನಕ ಸ್ಥಿತಿಯನ್ನು ವಿವರಿಸಿದ್ದರು. ಅದು ಪ್ರಸ್ತುತಕ್ಕೂ ಬದಲಾಗಿಲ್ಲ" ಎಂದು ಹೇಳಿದರು.

"1995ಕ್ಕೂ ಹಿಂದೆ ಭಾರತದಲ್ಲಿ ನಾಲ್ಕು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ ಮೂರನೇ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಇಂದಿಗೂ ರೈತರೂ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೆ ಶರಾಗುತ್ತಿದ್ದಾರೆ. ಇದು ಬಹಳ ಬೇಸರದ ಸಂಗತಿ' ಎಂದು ತಿಳಿಸಿದರು.

ʼʼಆರ್ಥಿಕ ತಜ್ಞರಾದ ಅರವಿಂದ್ ಪನಗರಿಯಾ ಮತ್ತು ಜಗದೀಶ್‌ ಭಗವತಿ ರೈತರ ಸಾವಿಗೆ ಕೊಡುವ ಕಾರಣಗಳು ಮಾತ್ರ ಅರ್ಥಹೀನವಾಗಿವೆ. ರೈತ ಬಿತ್ತನೆ ಮಾಡಿದ, ಆದರೆ ಇಳುವರಿ ನಾಶವಾಗಿದೆ. ತೆಗೆದುಕೊಂಡ ಸಾಲ ಮರುಪಾವತಿ ಮಾಡಿಲ್ಲ. ಕಂಪನಿಗಳಿಂದ ನೀಡಿದ ನಕಲಿ ಬಿತ್ತನೆ ಬೀಜಗಳ ಸಮಸ್ಯೆಯಿಂದ ರೈತ ನಷ್ಟ ಅನುಭವಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿ ನೀಡುತ್ತಾರೆ. ಅಲ್ಲದೆ, ಸತ್ತ ರೈತರೆಲ್ಲ ವಾಣಿಜ್ಯ ಬೆಳೆಗಾರರು. ಸಣ್ಣ ಕೃಷಿ ಮಾಡಿದ್ದ ರೈತರು ಸತ್ತಿಲ್ಲ. ಜತೆಗೆ ಕುಡಿತ ಸೇರಿದಂತೆ ಇತರ ದುಶ್ಚಟಗಳಿದ್ದ ರೈತರು ಆತ್ಮಹತ್ಯೆಯಿಂದ ಸತ್ತಿದ್ದಾರೆಂದು ವರದಿ ನೀಡಿದ್ದಾರೆಂದು" ಗುರುರಾಜ್‌ ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಸಹಬಾಳ್ವೆಯನ್ನು ನಿರಾಕರಿಸುವುದೆಂದರೆ ನಮ್ಮ ಅಸ್ತಿತ್ವವನ್ನೇ ನಿರಾಕರಿಸಿದಂತೆ

"ಭಾರತದ ಜನಸಂಖ್ಯೆಗೆ ಹೋಲಿಸಿದರೆ ರೈತರ ಸಾವಿನ ಸಂಖ್ಯೆ ಕಡಿಮೆಯಿದ್ದು, ದೇಶದಲ್ಲಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯನ್ನು ರೈತರ ಸಾವಿನ ಸಂಖ್ಯೆಯ ಮಟ್ಟಕ್ಕೆ ಇಳಿಸಬೇಕೆಂದು ಆರ್ಥಿಕ ತಜ್ಞರು ಅಪಾಯಕಾರಿಯಾದ ಹೇಳಿಕೆ ನೀಡುತ್ತಾರೆ. ರೈತರಿಗೆ ನೀಡುವ ಸಬ್ಸಿಡಿಯನ್ನು ಶೂಲ ಎಂದು ಕರೆದದ್ದಲ್ಲದೆ, ರೈತರು ಹೊಲದಲ್ಲಿ ದುಡಿಯುವುದಿಲ್ಲ. ಅವರು ಸೋಮಾರಿಗಳು ಎಂದು ಟೀಕಿಸುತ್ತಾರೆ. ಆದರೆ ಲಕ್ಷ್ಮಿ ಮಿತ್ತಲ್‌ ಸೇರಿದಂತೆ ಹಲವು ಉದ್ಯಮಿಗಳಿಗೆ ಸುಮಾರು ನಲವತ್ತೆಂಟು ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ತೆರಿಗೆ ವಿನಾಯಿತಿ ನೀಡಿದ್ದಾರೆ. ರೈತರ ಮನೆ ಬಾಗಿಲಿಗೆ ಕೃಷಿ ಯಂತ್ರಗಳು ತಲುಪಿಸಲು ಯೋಜನೆ ಮಾಡಿದ್ದೇವೆಂದು ಪ್ರಧಾನಿ ಹೇಳುತ್ತಾರೆ ಆದರೆ ಅವುಗಳು ರೈತರಿಗೆ ತಲುಪುತ್ತಿಲ್ಲ" ಎಂದವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ ಸುರೇಶ್‌ ಬಾಬು ಅವರು ಮಾತನಾಡಿದರು. "ಈ ದೇಶದ ರೈತರು ಲಾಭ, ನಷ್ಟ ಏನೇ ಇದ್ದರೂ ಜೀವಿಸುವುದಕ್ಕಾಗಿ ಒಟ್ಟಿನಲ್ಲಿ ಬೆಳೆಯುತ್ತಿದ್ದಾನೆ. ಆದರೆ ರೈತರ ಸಮಸ್ಯೆಗಳ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಸರ್ಕಾರಗಳು ಸ್ವಾರ್ಥ ರಾಜಕಾರಣ ಮಾಡುತ್ತಿವೆ. ಜಾಹೀರಾತುಗಳಲ್ಲಿ ಇಳುವಳಿ, ಲಾಭ ಸಿಕ್ಕಿದೆ ಎಂದು ಸುಳ್ಳನ್ನು ಪ್ರಚಾರ ಮಾಡುವ ಮೂಲಕ ರೈತರನ್ನು ವಂಚಿಸಲಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಪತ್ರಕರ್ತ ಗಾಣದಾಳು ಶ್ರೀಕಂಠ, ಕೃಷಿ ತಜ್ಞ ಅವಿನಾಶ್‌ ಟಿ ಜಿ ಎಸ್‌ ಸೇರಿದಂತೆ ಹಲವು ರೈ ಮುಖಂಡರು, ಪ್ರಗತಿಪರರು, ಹಿರಿಯ ಪತ್ರಕರ್ತರು, ರೈತರು ಭಾಗವಹಿಸಿದ್ದರು.

ಮಾಸ್‌ ಮೀಡಿಯಾ ತುಮಕೂರು ಜಿಲ್ಲಾ ಮಾಧ್ಯಮ ಸಂಯೋಜಕ ರವಿಶಂಕರ್‌ ಅವರ ಮಾಹಿತಿ ಆಧರಿಸಿದ ವರದಿ.
ನಿಮಗೆ ಏನು ಅನ್ನಿಸ್ತು?
0 ವೋಟ್