ಕವಿ, ಶಿಕ್ಷಕ ವೀರಣ್ಣ ಮಡಿವಾಳರಿಗೆ ನೋಟಿಸ್‌ ನೀಡಿದ ಶಿಕ್ಷಣ ಇಲಾಖೆ; ಸಚಿವರ ವಿರುದ್ಧ ವ್ಯಾಪಕ ಟೀಕೆ

Veeranna Madiwalar
  • ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿಕ್ಕೋಡಿಯ ಉಪನಿರ್ದೇಶಕರಿಂದ ನೋಟಿಸ್‌ ಜಾರಿ
  • ಸಾರ್ವಜನಿಕ ಶಿಕ್ಷಣ ಇಲಾಖೆಯ ನಡೆ, ಶಿಕ್ಷಣ ಸಚಿವರ ವರ್ತನೆ ಖಂಡಿಸಿ ವಿರೋಧ ವ್ಯಕ್ತ

ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ನೀತಿ ಟೀಕಿಸಿ, ನಿಯಮ ಉಲ್ಲಂಘಿಸಿದ್ದೀರಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿಕ್ಕೋಡಿಯ ಉಪನಿರ್ದೇಶಕರು ಕವಿ ಮತ್ತು ಶಿಕ್ಷಕ ವೀರಣ್ಣ ಮಡಿವಾಳರ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ನಿಡಗುಂದಿಯ ಅಂಬೇಡ್ಕರ್‌ ನಗರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರಣ್ಣ ಮಡಿವಾಳ ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Eedina App

ಕನ್ನಡ ದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ʼ13,800 ಸರ್ಕಾರಿ ಶಾಲೆ ವಿಲೀನ?ʼ ಎಂಬ ತಲೆಬರಹದ ಅಡಿಯಲ್ಲಿ ಶಿಕ್ಷಣ ಸಚಿವರು ಹೇಳಿದ್ದ ಹೇಳಿಕೆಗೆ “13,800 ಶಾಲೆ ವಿಲೀನ ಅಲ್ಲ… ಅಷ್ಟು ಶಾಲೆಗಳ ಹತ್ಯಾಕಾಂಡ… ಸರ್ಕಾರಿ ಶಾಲಾ ಮಕ್ಕಳ ಭವಿಷ್ಯದ ಮಾರಣಹೋಮ” ಎಂದು ಸರ್ಕಾರದ ಹೇಳಿಕೆಗೆ ಹೀಗೆ ವಿರೋಧ ವ್ಯಕ್ತಪಡಿಸಿ, ನಿಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಕರ್ನಾಟಕ ನಾಗರಿಕ ಸೇವಾ ನಿಯಮಗಳು-1957ಕ್ಕೆ ವ್ಯತಿರಿಕ್ತವಾಗಿದ್ದು, ಅಲ್ಲದೆ ನಡತೆ ನಿಯಮಗಳು 1966ರ ನಿಯಮ 3 ರನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ಈ ಸಂಬಂಧ ಮೂರು ದಿನದಲ್ಲಿ ನಿಮ್ಮ ಸ್ಪಷ್ಟವಾದ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಲು ಸೂಚಿಸಿದೆ. ನಿಮ್ಮಿಂದ ಉತ್ತರ ಬಾರದೇ ಇದ್ದಲ್ಲಿ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು” ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಶಿಕ್ಷಣ ತಜ್ಞರು ವೀರಣ್ಣ ಮಡಿವಾಳರ ಬೆಂಬಲಕ್ಕೆ ನಿಲ್ಲುವ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ನಡೆ ಮತ್ತು ಶಿಕ್ಷಣ ಸಚಿವರ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ.

AV Eye Hospital ad

“ಸಚಿವ ನಾಗೇಶ್ ಅವರ ಅವೈಜ್ಞಾನಿಕ ಶಾಲಾ ವಿಲೀನಗಳ ಪ್ರಸ್ತಾವನೆ ಬಗ್ಗೆ ಕೇವಲ ಅಭಿಪ್ರಾಯ ವ್ಯಕ್ತಪಡಿಸಿದ ಶಿಕ್ಷಕ ವೀರಣ್ಣ ಮಡಿವಾಳರವರಿಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕಾರಣ ಕೇಳಿ ನೋಟಿಸ್ ನೀಡಿರುವ ಕ್ರಮ ಅತ್ಯಂತ ಖಂಡನಾರ್ಹ ಮತ್ತು ಏಕಪಕ್ಷೀಯ” ಎಂದು ಶಿಕ್ಷಣ ತಜ್ಞ ಡಾ. ವಿ ಪಿ ನಿರಂಜನಾರಾಧ್ಯ ಪತ್ರಿಕಾ ಪ್ರಕಟಣೆ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 “ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಸಹ ತಮ್ಮ ವಿವೇಚನೆ ಉಪಯೋಗಿಸದೆ ಸಚಿವರ ತಾಳಕ್ಕೆ ಕುಣಿಯುವುದು ನಿಜಕ್ಕೂ ವಿಷಾದನೀಯ. ಇದು ವಸಹಾಹತುಶಾಹಿ ಜೀ ಹುಜೂರ್ ಸಂಸ್ಕೃತಿ. ಇದೆಲ್ಲವೂ ಸಚಿವ ನಾಗೇಶ್ ನಿರ್ದೇಶನದ೦ತೆ ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ.

“ಸಚಿವರ ಕಾರ್ಯ ವಿಧಾನ ಸರ್ವಾಧಿಕಾರಿ ಧೋರಣೆಯಾಗಿದ್ದು, ಅವರ ಅವೈಜ್ಞಾನಿಕ, ಅಸಂವಿಧಾನಿಕ, ಅಪ್ರಬುದ್ಧ ತೀರ್ಮಾನಗಳನ್ನು ವಿರೋಧಿಸುವರನ್ನು ವೈರಿಗಳಂತೆ ಪರಿಭಾವಿಸುವ ಅವರ ಮನಸ್ಥಿತಿ ಬೌದ್ಧಿಕ ದಿವಾಳಿತನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ಚರ್ಚೆಗೆ ಇರಬೇಕಾದ ಮುಕ್ತ ಮನಸ್ಸಿನ ಬದಲು ಅವರ ಮುಚ್ಚಿದ ಮನಸ್ಥಿತಿಯನ್ನು ಅನಾವರಣಗೊಳಿಸಿದೆ” ಎಂದು ದೂರಿದ್ದಾರೆ. 

“ಒಬ್ಬ ನಾಗರೀಕನಾಗಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಸಂವಿಧಾನ ಬದ್ಧವಾಗಿ ಪ್ರತಿಯೊಬ್ಬ ನಾಗರೀಕರಿಗೂ ಇದೆ. ಇದು ಸರ್ಕಾರಿ ನೌಕರರಿಗೂ ಅನ್ವಯವಾಗುತ್ತದೆ. ಅದು ಅವರ ವೈಯುಕ್ತಿಕ ಅಭಿಪ್ರಾಯ. ಜೊತೆಗೆ ಸಚಿವರ ಪ್ರಸ್ತಾವನೆಯನ್ನು ಅವರು ಟೀಕಿಸಿಲ್ಲ . ಅವರ ಅಭಿಪ್ರಾಯ ಹೇಳಿದ್ದಾರೆ. ಅದನ್ನು ಮೆಚ್ಚಿ ಗೌರವಿಸಬೇಕಾದ ಜಾಗದಲ್ಲಿ, ತಮ್ಮ ಅಧಿಕಾರ  ದುರ್ಬಳಕೆ ಮಾಡಿಕೊಂಡು, ಡಿಡಿಪಿಐ ಮೂಲಕ ನೋಟೀಸ್ ಕೊಡಿಸಿರುವುದು ಸಚಿವರ ಹಿಟ್ಲರ್ ಮನಸ್ಥಿತಿಯನ್ನು ಹೊರಗೆಡವಿದೆ” ಎಂದು ಟೀಕಿಸಿದ್ದಾರೆ.

Veeranna Madiwalar

“ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸದ ಸಚಿವ ನಾಗೇಶ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಚಿವರಾಗಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ. ಸಚಿವರ ಈ ನಡೆಯನ್ನು ಅಧಿಕಾರಿಗಳು, ಶಿಕ್ಷಕರು ಹಾಗು ಪ್ರಜ್ಞಾವಂತ ನಾಗರೀಕರು ಪ್ರತಿಭಟಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ವೀರಣ್ಣ ಮಡಿವಾಳರಿಗೆ ಬಂದ ಪರಿಸ್ಥಿತಿ ಬೇರೆಯವರಿಗೂ ಬಂದರೆ ಅಚ್ಚರಿಯಲ್ಲ” ಎಂದು ತಿಳಿಸಿದ್ದಾರೆ.

“ಯಾವುದೇ ಶಾಲೆ ಮುಚ್ಚಿದಾಗ ಒಬ್ಬ ಪ್ರಾಮಾಣಿಕ ಶಿಕ್ಷಕನಿಗೆ ಸಂತೋಷವಾಗುವುದಿಲ್ಲ. ಬೇಸರವಾಗುತ್ತದೆ. ಹದಿಮೂರು ಸಾವಿರದ ಎಂಟುನೂರು ಶಾಲೆಗಳನ್ನ ವಿಲೀನ ಮಾಡುತ್ತೇವೆ ಎಂದಾಗ ನಾನೂ ಕೂಡ ವ್ಯಥೆ ಪಟ್ಟೆ, ಆಳದಿಂದ ನೊಂದೆ, ಎರಡು ಸಾಲು ಬರೆದೆ. ಅದೀಗ ಅಪರಾಧವಾಗಿದೆ. ನನಗೆ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ” ಎಂದು ವೀರಣ್ಣ ಮಡಿವಾಳರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಪಠ್ಯ ಪರಿಷ್ಕರಣೆ ಎಡವಟ್ಟುಗಳು: ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಬಲಿಪಶುವಾ? ಆರೋಪಿಯಾ?

“ಡಿಡಿಪಿಐ ಸಾಹೇಬರು ಕಾರಣ ಕೇಳಿ ನನಗೆ ನೋಟಿಸ್ ನೀಡಿದ್ದಾರೆ. ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಶಾಲೆಯೊಂದರ ಶಿಸ್ತು ಸುಂದರತೆ ಮತ್ತು ಅರ್ಥವಂತಿಕೆ ಹೇಗಿರುತ್ತದೆ ಎಂದು ತೋರಿಸಿಕೊಟ್ಟವರು ನಾವು. ಈಗ ನನ್ನ ಮೇಲೆಯೇ ಶಿಸ್ತುಕ್ರಮ ಜರುಗಿಸುವುದಾದರೆ. ಅದೂ ಕೂಡ ನಡೆಯಲಿ” ಎಂದು ಸವಾಲು ಹಾಕಿದ್ದಾರೆ. 

“ಯಾರು ಯಾವ ಹುನ್ನಾರದಿಂದ ಹೇಗೆಲ್ಲ ತುಳಿಯಲು ಹವಣಿಸಬಹುದು ಎಂಬುದು ಯಾರಿಗೂ ಅಂದಾಜಿರುವುದಿಲ್ಲ. ಈಗ ನನ್ನ ಪಾಲಿಗೂ ಅಂತಹ ಆತಂಕದ ದಿನಗಳು ಬರುತ್ತಿವೆ. ಬರವಣಿಗೆ ನನ್ನ ಉಸಿರು, ಬರವಣಿಗೆ ಮತ್ತು ಕೃತಿ ನನ್ನ ಜೀವಂತಿಕೆ” ಎಂದಿದ್ದಾರೆ. 

“ಶಿಸ್ತುಕ್ರಮ ಜರುಗಿದರೆ ಜರುಗಲಿ. ಈಗಾಗಲೇ ಒಂದು ಪೂರ್ಣ ಬದುಕಿನ ಅನುಭವ ನನ್ನ ಜೀವರಕ್ತದ ಕಣಕಣದಲ್ಲಿದೆ. ಇನ್ನೆಷ್ಟು ದಿನ ಬದುಕೇನು? ಬದುಕಿರುವವರೆಗೆ ಇಸ್ತ್ರಿ ಅಂಗಡಿ ಇಟ್ಟುಕೊಂಡು ಬದುಕುವೆ; ಬರವಣಿಗೆ ಬಿಡಲಾರೆ” ಎಂದು ಎಚ್ಚರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app