1120 ದೈಹಿಕ ಶಿಕ್ಷಕ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಕೆ; 200 ಶಿಕ್ಷಕರ ನೇಮಕಾತಿಗೆ ಅನುಮತಿ

  • ದೈಹಿಕ ಶಿಕ್ಷಕರ ನೇಮಕಾತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ
  • ಪ್ರೌಢಶಾಲೆಗಳಿಗೆ 200 ಮಂದಿ ದೈಹಿಕ ಶಿಕ್ಷಕರ ನೇಮಕಾತಿಗೆ ಅನುಮತಿ

ರಾಜ್ಯದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 1120 ದೈಹಿಕ ಶಿಕ್ಷಕರ ನೇಮಕಾತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಇದಕ್ಕೆ ಮೊದಲು ಕೇವಲ 200 ದೈಹಿಕ ಶಿಕ್ಷಕರನ್ನಷ್ಟೇ ಈ ವರ್ಷ ನೇಮಿಸಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿತ್ತು. ಕನಿಷ್ಠ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿರುವ ವಿರುದ್ಧ ಶಿಕ್ಷಕರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ಶಾಲಾ ಹಂತದಿಂದ ವಿಶ್ವವಿದ್ಯಾಲಯ ಹಂತದವರೆಗೆ ಹಲವು ವರ್ಷಗಳಿಂದ ದೈಹಿಕ ಶಿಕ್ಷಕರ ನೇಮಕಾತಿ ನಡೆದಿಲ್ಲ. ದೈಹಿಕ ಶಿಕ್ಷಕ, ಉಪನ್ಯಾಸಕ, ನಿರ್ದೇಶಕ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ‘ಬೆಂಗಳೂರು ಚಲೋ’ ಹೆಸರಿನಲ್ಲಿ ದೈಹಿಕ ಶಿಕ್ಷಕ ಆಕಾಂಕ್ಷಿಗಳು ಮತ್ತು ಕ್ರೀಡಾ ವೃತ್ತಿಪರರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಂದಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೆಪ್ಟೆಂಬರ್ 15ರಂದು ಪ್ರತಿಭಟನೆ ನಡೆಸಿದ್ದರು.

ಇದೀಗ ವಿಧಾನಪರಿಷತ್‍ನಲ್ಲಿ ಇಂದು (ಸೆಪ್ಟೆಂಬರ್ 19) ನಡೆದ ಪ್ರಶ್ನೋತ್ತರ ಅವಧಿಯಲ್ಲಿ ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ, “ಪ್ರಸ್ತುತ ಪ್ರೌಢಶಾಲೆಗಳಿಗೆ 200 ದೈಹಿಕ ಶಿಕ್ಷಕರನ್ನು ನೇಮಿಸಲು ಆರ್ಥಿಕ ಇಲಾಖೆ ಅನುಮತಿ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. 1120 ದೈಹಿಕ ಶಿಕ್ಷಕರ ನೇಮಕಾತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

“ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಾಲೆಗಳಲ್ಲಿ ದೈಹಿಕ ಶಿಕ್ಷಣದಡಿ ಹತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಚಿತ್ರಕಲೆಯಲ್ಲಿ 2800ಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಪ್ರತಿಭಟನೆ | ಒಪ್ಪೊತ್ತಿನ ಊಟಕ್ಕಾಗಿ 'ಮೂರು ನಾಲ್ಕು ಅನ್ನ ಹಾಕು' ವಾಟ್ಸಪ್‌ ಗ್ರೂಪ್‌

“14 ವರ್ಷಗಳಿಂದ ನೇಮಕಾತಿ ನೆನೆಗುದಿಗೆ ಬಿದ್ದಿರುವುದರಿಂದಾಗಿ ಹುದ್ದೆಗಳು ಖಾಲಿ ಉಳಿದಿವೆ” ಎಂದು ಸಚಿವರು ಹೇಳಿದರು.

“ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 2015ರವರೆಗೆ ಖಾಲಿ ಉಳಿದಿರುವ ಹುದ್ದೆಗಳಿಗೆ ನೇಮಕಾತಿಗೆ ಹಣಕಾಸು ಇಲಾಖೆಯ ಅನುಮತಿ ಪಡೆದು ಪ್ರಕ್ರಿಯೆ ಆರಂಭಿಸಲಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳು 455 ಹುದ್ದೆಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಿಲ್ಲ. 171 ಹುದ್ದೆಗಳ ಪ್ರಸ್ತಾವನೆಯಲ್ಲಿ ಸರಿಯಾದ ದಾಖಲೆಗಳಿಲ್ಲದೆ ಹುದ್ದೆಗಳು ಖಾಲಿ ಇವೆ” ಎಂದು ಸಚಿವರು ಹೇಳಿದ್ದಾರೆ.

“ಸುಮಾರು 11,125 ಹುದ್ದೆಗಳು ಬಾಕಿ ಉಳಿದಿದ್ದು, ಹೊಸದಾಗಿ ನೀಡಲಾಗಿರುವ ಅಂಕಿ- ಅಂಶಗಳ ಪ್ರಕಾರ 9158 ಹುದ್ದೆಗಳಲ್ಲಿ ಭರ್ತಿ ಮಾಡಿಕೊಳ್ಳಬೇಕಿದೆ. ಇಷ್ಟು ಹುದ್ದೆಗಳನ್ನು ಖಾಲಿ ಇಟ್ಟು ಹೇಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಹಣಕಾಸು ಇಲಾಖೆಯಿಂದ ಈಗಾಗಲೇ ಅನುಮತಿ ನೀಡಿರುವ ಹುದ್ದೆಗಳಿಗೆ ಪ್ರಸ್ತಾವನೆಗಳು ಸರಿಯಾಗಿ ಬಂದಿಲ್ಲ. ನೇಮಕಾತಿಗೆ ಅನುಮತಿ ಪಡೆಯಲು ಕಷ್ಟಸಾಧ್ಯವಾಗಿದೆ” ಎಂದು ಸದಸ್ಯ ಸಂಕನೂರ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಯವರ ಜೊತೆ ವಿಧಾನಪರಿಷತ್ ಸದಸ್ಯರನ್ನೊಳಗೊಂಡ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್