ಈ ದಿನ ವಿಶೇಷ | ರವಿಶಂಕರ್ ಗುರೂಜಿ, ಪತಂಜಲಿ ಸಲಹೆ ಪಡೆದು ವಿದ್ಯಾರ್ಥಿಗಳಿಗೆ ಧ್ಯಾನ; ಶಿಕ್ಷಣ ಸಚಿವರ ಹೊಸ ವಿವಾದ!

ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ 10 ನಿಮಿಷದ ಧ್ಯಾನ ಕಡ್ಡಾಯ ಮಾಡಲು ಹೊರಟಿರುವ ನಡೆ ಹೊಸ ವಿವಾದಕ್ಕೆ ಕಾರಣವಾಗಿದೆ. ಧ್ಯಾನದ ಸುತ್ತ ಪರ ಮತ್ತು ವಿರೋಧದ ಹೇಳಿಕೆಗಳು ವ್ಯಕ್ತವಾಗಿವೆ.
ಧ್ಯಾನ

ಪ್ರಾಥಮಿಕ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರತಿದಿನ ನಿಯಮಿತವಾಗಿ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿಸುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಬಿ ಸಿ ನಾಗೇಶ್ ಅವರು ಟಿಪ್ಪಣಿ ಹೊರಡಿಸಿರುವ ಬೆನ್ನಲ್ಲೇ ಶಾಲಾ ಶಿಕ್ಷಕರು ಮತ್ತು ಕಾಲೇಜು ಉಪನ್ಯಾಸಕರು ಹಾಗೂ ಶಿಕ್ಷಣ ತಜ್ಞರಿಂದ ಪರ ಮತ್ತು ವಿರೋಧದ ಹೇಳಿಕೆಗಳು ವ್ಯಕ್ತವಾಗಿವೆ. 

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಸ್ವಯಂಪ್ರೇರಿತವಾಗಿ ಶಿಕ್ಷಣ ಸಚಿವರಿಗೆ ಪತ್ರ ಬರೆದು, “ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ನಿತ್ಯ ಧ್ಯಾನ ಮಾಡಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡಿಲು ಅವಕಾಶ ಕಲ್ಪಿಸಬೇಕು” ಎಂದು ಬಿ ಸಿ ನಾಗೇಶ್‌ ಅವರಲ್ಲಿ ಕಳೆದ ಸೆಪ್ಟೆಂಬರ್‌ 20 ರಂದು ಕೋರಿದ್ದರು.

Eedina App

ಬಿ ಸಿ ನಾಗೇಶ್‌ ಅವರು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಗೆ ಸ್ಪಂದಿಸಿ ನವೆಂಬರ್‌ 1ರಂದು ಟಿಪ್ಪಣಿ ಹೊರಡಿಸಿ, “ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು, ಆರೋಗ್ಯ ವೃದ್ಧಿಸಲು, ಸದ್ವಿಚಾರ ಚಿಂತನೆ, ಒತ್ತಡಗಳಿಂದ ಮುಕ್ತವಾಗಿ ಜ್ಞಾನಾರ್ಜನೆ, ಉತ್ತಮ ಗುಣಗಳನ್ನು ರೂಢಿಸಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆಗಳು & ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ 10 ನಿಮಿಷ ಧ್ಯಾನ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ.

ಸಚಿವರ ಈ ನಿರ್ಧಾರಕ್ಕೆ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಪ್ರೌಢಶಾಲೆ ಶಿಕ್ಷಕರು ಮತ್ತು ಪಿಯು ಕಾಲೇಜುಗಳ ಉಪನ್ಯಾಸಕರು ಹಾಗೂ ಶಿಕ್ಷಣ ತಜ್ಞರೆಲ್ಲ "ಸದ್ಯದ ಕಲಿಕಾ ವಾತಾವರಣದಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸುತ್ತಲೇ ಧ್ಯಾನದ ಅವಧಿ ಕೂಡ ಬೋಧನಾ ಸಮಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ” ಎಂದಿದ್ದಾರೆ.

AV Eye Hospital ad

ಧ್ಯಾನದ ಅವಶ್ಯಕತೆ: ಈ ಬಗ್ಗೆ ಸಂಶೋಧನೆ ಅಗತ್ಯ 

ಶಾಲಾ ಮಕ್ಕಳಿಗೆ ಧ್ಯಾನದ ಅಗತ್ಯತೆ ವಿಚಾರವಾಗಿ ಶಿಕ್ಷಣ ತಜ್ಞ ವಿ ಪಿ ನಿರಂಜನಾರಾಧ್ಯ ಅವರು ಈ ದಿನ.ಕಾಮ್‌ ಜೊತೆ ಮಾತನಾಡಿ, “ಶಿಕ್ಷಣ ಸಚಿವರ ತಲೆಯಲ್ಲಿ ಏನಿದೆ ಏಂಬುದೇ ಅರ್ಥವಾಗುತ್ತಿಲ್ಲ. ಅವರ ಈ ಕ್ರಮಕ್ಕೆ ಏನು ಹೇಳಬೇಕು? ಯಾವುದೇ ಒಂದು ಚಟುವಟಿಕೆ ಪಠ್ಯವಾಗಿರಲಿ ಅಥವಾ ಪಠ್ಯೇತರವಾಗಿರಲಿ, ಅದನ್ನೆಲ್ಲ ಅಳವಡಿಸುವ ಅಧಿಕಾರ ಇರುವುದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ)ಗೆ ಮಾತ್ರ. ಅವರು ಮಕ್ಕಳಿಗೆ ಧ್ಯಾನ ಅವಶ್ಯಕತೆ ಇದೆಯಾ, ಇಲ್ಲವಾ ಎಂಬುದನ್ನು ತಜ್ಞರ ವರದಿ ಆಧರಿಸಿ ಡಿಎಸ್‌ಇಆರ್‌ಟಿ ಕ್ರಮ ಕೈಗೊಳ್ಳುತ್ತದೆ" ಎಂದರು.

“ಕೋವಿಡ್‌ನಿಂದ ಮಕ್ಕಳ ಮನಸ್ಥಿತಿ ಚದುರಿದೆ ಎಂದು ಶಿಕ್ಷಣ ಸಚಿವರು ಹೇಳುತ್ತಾರೆ. ಇದು ನಿಜವಾಗಿದ್ದರೆ ಇದಕ್ಕೆ ಸಂಬಂಧಪಟ್ಟಂತೆ ಸಂಶೋಧನೆ ಆಗಬೇಕು. ಯೂನಿಸೆಫ್ ಈ ಬಗ್ಗೆ ಒಂದಿಷ್ಟು ಮಾಡಲ್‌ಗಳನ್ನೇ ಜಾರಿ ಮಾಡಿದೆ. ಧ್ಯಾನವನ್ನು ಹೇಗೆ ಮಾಡಬೇಕು, ಶಿಕ್ಷಕರು ಇದರಲ್ಲಿ ಹೇಗೆ ತೊಡಗಿಕೊಳ್ಳಬೇಕು ಎಂಬ ಎಲ್ಲ ವಿವರಗಳು ಆ ಮಾಡಲ್‌ನಲ್ಲಿವೆ. ಈಗಾಗಲೇ ನಿರೂಪಿಸಲ್ಪಟ್ಟ ಸಂಶೋಧನಾ ವರದಿಗಳ ಕಾರ್ಯತಂತ್ರಗಳನ್ನು ಶಾಲೆಗಳಲ್ಲಿ ಅಳವಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಏಕಾಏಕಿ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸುವೆ ಎಂದರೆ ಯಾವ ರೀತಿ ಧ್ಯಾನ ಮಾಡಿಸುತ್ತೀರಿ? ದೇವರ ಹೆಸರಲ್ಲಿ ಧ್ಯಾನ ಮಾಡಿಸಿದರೆ ಹೇಗೆ? ಧ್ಯಾನ ಮಾಡಿಸುವವರು ಯಾರು? ಇದೆಲ್ಲ ಹಿಂಭಾಗಿಲಿನಿಂದ ತಮ್ಮ ವಿಚಾರಗಳನ್ನು ತುರುಕುವ ಕ್ರಮದಂತೆ ಕಾಣುತ್ತಿದೆ” ಎಂದು ನಿರಂಜನಾರಾಧ್ಯ ಟೀಕಿಸಿದರು.

B C Nagesh

ಬಡಮಕ್ಕಳಿಗೆ ಏನೇ ಜಾರಿ ಮಾಡಿದರೂ ಆಕ್ಷೇಪ ಸಹಜ: ಬಿ ಸಿ ನಾಗೇಶ್

ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರನ್ನು ಈ ವಿಚಾರವಾಗಿ ಈ ದಿನ.ಕಾಮ್‌ ಸಂಪರ್ಕಿಸಿದಾಗ, “ಕೋವಿಡ್‌ ಬಂದು ಮಕ್ಕಳ ಕಲಿಕೆಯ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರಿತು. ಎಷ್ಟೋ ಮಕ್ಕಳು ಮೊಬೈಲ್‌ ನೋಡಿ ಕಲಿಕೆಯಲ್ಲಿ ತೊಡಗಿದ್ದರಿಂದ ಏಕಾಗ್ರತೆ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ನಿತ್ಯ ಮಕ್ಕಳು 10 ನಿಮಿಷ ಧ್ಯಾನ ಮಾಡಿದರೆ ಮಕ್ಕಳ ಕಲಿಕೆಯ ಮೇಲೆ ಸಕಾರಾತ್ಮಕವಾದ ಪರಿಣಾಮ ಬೀರುತ್ತದೆ. ಅವರ ಏಕಾಗ್ರತೆ ಕೂಡ ಹೆಚ್ಚಾಗುತ್ತದೆ” ಎಂದರು.

ಬೋಧನಾ ಸಮಯದ ಮೇಲೆ ಧ್ಯಾನದ ಅಳವಡಿಕೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಶಾಲೆ ಆರಂಭವಾಗುತ್ತಿದ್ದಂತೆ 10 ನಿಮಿಷ ಧ್ಯಾನವನ್ನು ಎಲ್ಲ ಶಾಲೆ ಮತ್ತು ಕಾಲೇಜುಗಳಲ್ಲಿ ಕಡ್ಡಾಯವಾಗಿ ಮಾಡಿಸಬೇಕು. 10 ನಿಮಿಷ ಶಿಕ್ಷಕರು ಸಮಯ ಕೊಡುವುದರಿಂದ ಬೋಧನೆ ಮೇಲೆ ಯಾವುದೇ ಪರಿಣಾಮ ಬೀರದು. ಧ್ಯಾನದ ಪ್ರಕ್ರಿಯೆಯಲ್ಲಿ ಶಿಕ್ಷಕರು ಕೂಡ ತೊಡಗಿಕೊಳ್ಳಬೇಕು” ಎಂದರು.  

“ಮಕ್ಕಳಿಗೆ ಧ್ಯಾನ ಅಳವಡಿಕೆ ವಿಚಾರದಲ್ಲಿ ಪರಿಣಿತರಾದ ರವಿಶಂಕರ್‌ ಗುರೂಜಿ, ಪತಂಜಲಿ ರಾಮದೇವ ಹಾಗೂ ರಾಮಕೃಷ್ಣ ಆಶ್ರಮಗಳ ಸಲಹೆ ಪಡೆದು ಜಾರಿ ಮಾಡುತ್ತೇವೆ. ಆದರೆ, ಇಂತಹ ಒಳ್ಳೆ ಕಾರ್ಯಕ್ರಮ ಬಡಮಕ್ಕಳಿಗೆ ಜಾರಿ ಮಾಡಿದರೆ ಅಪಸ್ವರಗಳು ಕೇಳಿಬರುತ್ತವೆ. ಅದೇ ಉಳ್ಳವರ ಮಕ್ಕಳಿಗೆ ಜಾರಿ ಮಾಡಿದರೆ ಯಾವುದೇ ವಿರೋಧಗಳು ಕೇಳಿಬರುವುದಿಲ್ಲ. ಇದನ್ನು ಸಹಿಸಿಕೊಳ್ಳದೇ ಕೆಲವರು ಆಕ್ಷೇಪ ಎತ್ತುತ್ತಾರೆ” ಎಂದು ವಿರೋಧದ ಹೇಳಿಕೆಗಳನ್ನು ತಳ್ಳಿಹಾಕಿದರು.

ಶಿಕ್ಷಕರು ಮತ್ತು ಉಪನ್ಯಾಸಕರು ಹೇಳುವುದೇನು?

ಬಾದಾಮಿ ತಾಲ್ಲೂಕಿನ ನಂದಿಕೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಲ್‌ ಜೆ ಪಡಿಯಪ್ಪನವರ್‌ ಈ ಕುರಿತು ಪ್ರತಿಕ್ರಿಯಿಸಿ, “ಮಕ್ಕಳಿಗೆ ಧ್ಯಾನ ಮಾಡಿಸಬೇಕು ಎಂಬ ಕ್ರಮವನ್ನು ಪರಿಚಯಿಸುತ್ತಿರುವುದು ಒಳ್ಳೆಯ ಕ್ರಮ. ಆದರೆ ಹೇಗೆ ಪರಿಚಯವಾಗುತ್ತದೆ ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ಸಿಕ್ಕಿಲ್ಲ. ಈಗಾಗಲೇ ಕ್ಷೀರಭಾಗ್ಯ ಯೋಜನೆಯಲ್ಲಿ ಮಕ್ಕಳಿಗೆ ಹಾಲು ಕೊಡಲು ಅರ್ಧ ತಾಸಿಗೂ ಹೆಚ್ಚು ಸಮಯ ಹಿಡಿಯುತ್ತಿದೆ. ಬೆಳಗಿನ ಪ್ರಾರ್ಥನೆಗೆ ಸಮಯ ಹೋಗುತ್ತಿದೆ. ಈ ಮಧ್ಯೆ ಧ್ಯಾನ ಜಾರಿಯಾದರೆ ಬೋಧನೆಯ ಸಮಯಕ್ಕೆ ತೊಂದರೆಯಾಗಬಹುದು. ಇದನ್ನು ಜಾರಿಗೆ ತರುವುದೇ ಆಗಿದ್ದರೆ ಶಾಲೆಗಳನ್ನು 10 ನಿಮಿಷ ಮೊದಲೇ ಶಾಲೆ ಆರಂಭಿಸುವುದು ಒಳ್ಳೆಯದು” ಎಂದರು.

ಕೂಡ್ಲಿಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದಿನೇಶ್‌ ಎಂ ಎಂಬುವವರು ಪ್ರತಿಕ್ರಿಯಿಸಿ, “ಮಕ್ಕಳು ಏಕಾಗ್ರತೆ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಬೆಳಿಗ್ಗೆ ಧ್ಯಾನದೊಂದಿಗೆ ತರಗತಿಗಳು ಆರಂಭವಾದರೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಬೋಧನಾ ಸಮಯದ ಮೇಲೆ ಪರಿಣಾಮ ಬೀರಬಹುದು. ಈ ಬಗ್ಗೆ ನಿಯಮಗಳು ಹೇಗೆ ಬರುತ್ತವೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ” ಎಂದು ಹೇಳಿದರು.

ಗದಗ ಜಿಲ್ಲೆಯ ತಿಮ್ಮಾಪುರದ ಕೆವಿಎಸ್‌ಆರ್‌ ಪಿಯು ಕಾಲೇಜಿನ ಉಪ್ಯಾಸಕ ಆನಂದ್‌ ಕರಿಗಣ್ಣವರ್‌ ಈ ವಿಚಾರವಾಗಿ ಮಾತನಾಡಿ, “ಸರ್ಕಾರ ಈ ಕ್ರಮ ಜಾರಿಗೆ ತಂದರೆ ಬಹಳ ಒಳ್ಳೆಯದು. ವಿದ್ಯಾರ್ಥಿಗಳು ಧ್ಯಾನ ಮಾಡುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಏಕಾಗ್ರತೆ ಇನ್ನೂ ಉತ್ತಮವಾಗುತ್ತದೆ. ಇದನ್ನು ಜಾರಿ ಮಾಡಲು ಪ್ರತ್ಯೇಕ ಸಮಯ ಮೀಸಲಿಡುವ ಅಗತ್ಯವಿದೆ” ಎಂದು ತಿಳಿಸಿದರು.

ಒಟ್ಟಾರೆಯಾಗಿ ಶಿಕ್ಷಣ ಸಚಿವರು ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ 10 ನಿಮಿಷದ ಧ್ಯಾನ ಕಾರ್ಯಕ್ರಮವನ್ನು ಜಾರಿಗೆ ತರಲು ಮುಂದಾಗಿರುವುದಕ್ಕೆ ಪರ ಮತ್ತು ವಿರೋಧದ ಮಾತುಗಳು ವ್ಯಕ್ತವಾಗಿದ್ದು, ಸಚಿವರು ಹೊಸ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಧ್ಯಾನವನ್ನು ಹೇಗೆ ಜಾರಿ ಮಾಡುತ್ತಾರೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app