ಈ ದಿನ.ಕಾಮ್ ವರದಿಯ ‘ಫಲಶ್ರುತಿ’: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್‌ಸೈಟ್‌ನಲ್ಲಿದ್ದ ಹಿಂದಿ ಮಾಯ!

Hindi
  • ಇಲಾಖೆ ವೆಬ್‌ಸೈಟ್‌ನಲ್ಲಿದ್ದ ಹಿಂದಿ ಪೋಸ್ಟರ್ ಬಗ್ಗೆ ಸುದ್ದಿ ಪ್ರಕಟಿಸಿದ್ದ ‘ಈ ದಿನ.ಕಾಮ್’
  • ಹಿಂದಿ ಹೇರಿಕೆ ವಿರೋಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್

‘ಆಜಾದಿ ಕಾ ಅಮೃತ ಮಹೋತ್ಸವ’ ಮತ್ತು ‘ಹರ್ ಘರ್ ತಿರಂಗ’ ಅಭಿಯಾನದ ಬಗ್ಗೆ ಪ್ರಚಾರ ಮಾಡುವ ಭರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಬಳಸಿದ್ದ ಹಿಂದಿ ಪೋಸ್ಟರ್ ಕೊನೆಗೂ ತೆಗೆದಿದೆ. 

ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ದಿಗಾಗಿಯೇ ಇರುವ ಇಲಾಖೆಯ ವೆಬ್‌ಸೈಟ್‌ನಲ್ಲಿ ಹಿಂದಿ ಬಳಸಿದ್ದರ ಬಗ್ಗೆ ಈ ದಿನ.ಕಾಮ್ ವರದಿ ಶುಕ್ರವಾರ ಬೆಳಗ್ಗೆ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಲಾಖೆ ಸಚಿವ ವಿ ಸುನಿಲ್‌ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಒತ್ತಡ ಹೆಚ್ಚಾದ ನಂತರ ತನ್ನ ಲೋಪದ ಬಗ್ಗೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಹಿಂದಿ ಪೋಸ್ಟರ್ ತೆಗೆದು ಕನ್ನಡ ಮಾತ್ರ ಉಳಿಸಿಕೊಂಡಿದ್ದಾರೆ.

Eedina App
Hindi
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್‌ಸೈಟ್‌ನಲ್ಲಿ ಹಿಂದಿ ಪೋಸ್ಟರ್ ತೆಗೆದಿರುವುದು

“ಕನ್ನಡ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು‌ ಪೋಷಣೆಗಾಗಿ ಇರುವ ಇಲಾಖೆಯೇ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವನ್ನು ಹೊರಗಿಟ್ಟು ಹಿಂದಿ ಭಾಷೆಯ ಪ್ರಚಾರಕ್ಕೆ ಇಳಿದರೆ ಕನ್ನಡ ಭಾಷೆಯನ್ನು ರಕ್ಷಿಸುವವರು ಯಾರು” ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಸರ್ಕಾರವನ್ನು ಪ್ರಶ್ನಿಸಿದ್ದರು.

“ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಕನ್ನಡಿಗರ ಸ್ವಾಭಿಮಾನವನ್ನು 'ಉತ್ತರ ಕುಮಾರ'ರ ಕಾಲಡಿ ಯಾಕೆ ಅಡವು ಇಡುತ್ತೀರಾ? ಶರಣಾಗತಿ ಕನ್ನಡದ ಮಣ್ಣಿನ ಗುಣವಲ್ಲ, ವೀರರಾಣಿ ಅಬ್ಬಕ್ಕನ ನೆಲದಿಂದ ಬಂದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್‌ ಕುಮಾರ್ ಅವರಿಗೆ ಇಂಥಾ ಗುಲಾಮಿ‌ ಮನಸ್ಥಿತಿ ಬರಬಾರದಿತ್ತು” ಎಂದು ತಿಳಿಸಿದ್ದರು.

AV Eye Hospital ad

ಇಲಾಖೆಯ ವೆಬ್‌ಸೈಟಿನಲ್ಲಿ ಆಗಿರುವ ಲೋಪದ ಬಗ್ಗೆ ಈ ದಿನ.ಕಾಮ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಷಿ ಮತ್ತು ಕನ್ನಡ ಪರ ಹೋರಾಟಗಾರರ ಗಮನಕ್ಕೆ ತಂದಿತ್ತು. ಕನ್ನಡದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಇಲಾಖೆ ವೆಬ್‌ಸೈಟಿನಲ್ಲಿ ಹಿಂದಿ ಬಳಸಿದ್ದಕ್ಕೆ ವಿರೋಧ ಹೆಚ್ಚಾದ ನಂತರ, ಇಲಾಖೆ ತನ್ನ ವೆಬ್‌ಸೈಟ್‌ನಿಂದ ಹಿಂದಿ ಪೋಸ್ಟರ್ ತೆಗೆದಿದೆ. 

ಈ ಸುದ್ದಿ ಓದಿದ್ದೀರಾ?: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್‌ಸೈಟಿನಲ್ಲಿ ‘ಹಿಂದಿ ಪ್ರಚಾರ’: ಬಿಜೆಪಿಯಿಂದ ಮತ್ತೆ ಮತ್ತೆ ಕನ್ನಡಕ್ಕೆ ಅಪಮಾನ

ಈ ದಿನ.ಕಾಮ್ ಜತೆಗೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ, "ವೆಬ್‌ಸೈಟ್‌ನಲ್ಲಿದ್ದ ಹಿಂದಿ ಪೋಸ್ಟರ್ ಬದಲಾವಣೆ ಆಗಿದೆ, ನಾನು ಕೂಡಾ ಈ ಬಗ್ಗೆ ಗಮನಿಸಿದ್ದೆ" ಎಂದು ಹೇಳಿದರು.

ಪದೇ ಪದೆ ಈ ರೀತಿ ಲೋಪಗಳಾಗುತ್ತಿವೆ, ಇದಕ್ಕೆ ಶಾಶ್ವತ ಪರಿಹಾರ ಇಲ್ಲವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಸದ್ಯದಲ್ಲೇ ಸಮಸ್ತ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ' ಅನುಷ್ಠಾನ ಮಾಡಲಿದ್ದೇವೆ. ಆ ನಂತರ ಎಲ್ಲವೂ ಸರಿಯಾಗುತ್ತದೆ" ಎಂದು ಪ್ರತಿಕ್ರಿಯಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಷಿ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆಗೆ ಸ್ಪಂದಿಸಿಲ್ಲ.         

ನಿಮಗೆ ಏನು ಅನ್ನಿಸ್ತು?
1 ವೋಟ್
eedina app