ಧಾರವಾಡ | 86ನೇ ಸಾಹಿತ್ಯ ಸಮ್ಮೇಳನದ ಲಾಂಛನ ಮಾರ್ಪಾಡು; ಖಂಡನೆ

  • ಕನಕದಾಸ, ಸರ್ವಜ್ಞ, ಶಿಶುನಾಳ ಷರೀಪರ ಭಾವ ಚಿತ್ರ ಕೈಬಿಟ್ಟಿದ್ದಕ್ಕೆ ಆಕ್ರೋಶ
  • ಹಾವೇರಿ ಜಿಲ್ಲೆಯವರೇ ಆದ ಬಸವರಾಜ ಬೊಮ್ಮಾಯಿ ಸ್ಪಷ್ಟನೆಗೆ ಆಗ್ರಹ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮಾರ್ಪಾಡು ಮಾಡಲಾಗಿದೆ. ಲಾಂಛನದಲ್ಲಿ ಕನಕದಾಸ, ಸರ್ವಜ್ಞ, ಶಿಶುನಾಳ ಷರೀಫ ಮುಂತಾದ ಮಹನೀಯರ ಭಾವಚಿತ್ರಗಳನ್ನು ಕೈಬಿಟ್ಟಿರುವುದು ಖಂಡನೀಯ ಎಂದು ಧಾರವಾಡ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಪಿ.ಎಚ್ ನೀರಲಕೇರಿ ಖಂಡಿಸಿದ್ದಾರೆ.

ಲಾಂಛನ ಮಾರ್ಪಾಡು ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ಎಲ್ಲರನ್ನೂ ಲಾಂಛನದಲ್ಲಿ ಸೇರಿಸಲು ಸಾಧ್ಯವಾಗದ ಕಾರಣ, ಹಾವೇರಿ ಜಿಲ್ಲೆಯನ್ನು ಪ್ರತಿನಿಧಿಸುವ ಮಹನೀಯರ ಚಿತ್ರಗಳನ್ನು ಕೈಬಿಟ್ಟು, ಜಿಲ್ಲೆಯ ಐತಿಹಾಸಿಕ ಸ್ಥಳ, ಸಾಂಸ್ಕೃತಿಕ ಅಸ್ಮಿತೆ ಬಿಂಬಿಸಿ ಮಾರ್ಪಾಡು ಮಾಡಲಾಗಿದೆ" ಎಂಬ ಜೋಶಿ ಅವರ ನಿರ್ಧಾರ ಅತ್ಯಂತ ಬಾಲಿಶವಾದದ್ದು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಮಹೇಶ ಜೋಶಿಯವರ ಹೇಳಿಕೆ ನಾಡಿನ ಸಂತ ಶ್ರೇಷ್ಠರಿಗೆ ಮಾಡಿದ ಅಪಚಾರ. ನಾಡಿನ ಸಮಸ್ತ ಜನತೆಗೆ ಕ್ಷಮೆ ಕೇಳಬೇಕು ಮತ್ತು ರಾಜೀನಾಮೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.

"ಸರ್ಕಾರ ತಿದ್ದುಪಡಿ ಲಾಂಛನ ಹಿಂಪಡೆದು ಮೊದಲಿನಂತೆ ನಮ್ಮ ನಾಡಿನ ಸಂತ ಶ್ರೇಷ್ಠ ಸರ್ವಜ್ಞ, ಕನಕದಾಸ, ಶರೀಫರ ಭಾವ ಚಿತ್ರ ಅಳವಡಿಸಬೇಕು. ಸರ್ಕಾರ ಈ ಕುರಿತು ಶೀಘ್ರವೇ ಕ್ರಮ ಜರುಗಿಸಿ ನಾಡಿನ ಸಂತ ಶ್ರೇಷ್ಠರಿಗೆ, ಸಾಹಿತ್ಯ ಲೋಕಕ್ಕೆ ಗೌರವ ಪ್ರದರ್ಶಿಸಬೇಕು. ಇಲ್ಲವಾದರೆ ಹಾವೇರಿ ಸಾಹಿತ್ಯ ಸಮ್ಮೇಳನ ನಡೆಯುವ ಔಚಿತ್ಯವಿಲ್ಲ" ಎಂದಿದ್ದಾರೆ.

ಧಾರವಾಡ ಮಾಸ್ ಮೀಡಿಯಾ ವಾಲಂಟಿಯರ್ ಶರಣು ಗೊಲ್ಲರ್ ವರದಿ ಆಧರಿಸಿದ ಸುದ್ದಿ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180