ಅನುಕಂಪದ ಆಧಾರದಲ್ಲಿ ನೌಕರಿ | ಸರ್ಕಾರಿ ಉದ್ಯೋಗಕ್ಕೆ ದತ್ತು ಮಕ್ಕಳು ಅರ್ಹರು - ಹೈಕೋರ್ಟ್

  • ಅರ್ಜಿದಾರ ದತ್ತು ಪುತ್ರನಿಗೆ ಅನುಕಂಪದ ನೌಕರಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ
  • ʼನೈಸರ್ಗಿಕ ಮಕ್ಕಳಿಗೂ ದತ್ತು ಮಕ್ಕಳಿಗೂ ವ್ಯತ್ಯಾಸ ಮಾಡಿದರೆ ದತ್ತು ತೆಗೆದುಕೊಳ್ಳುವ ಉದ್ದೇಶಕ್ಕೆ ಅರ್ಥವಿಲ್ಲʼ

ಅನುಕಂಪದ‌ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ದತ್ತು ಮಕ್ಕಳೂ ಕೂಡ ಅರ್ಹರು ಎಂದು ಮಂಗಳವಾರ ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.

ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ದತ್ತು ಪುತ್ರ ಅರ್ಹರಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿತ್ತು.

Eedina App

ಅದನ್ನು ಪ್ರಶ್ನಿಸಿ ಗಿರೀಶ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿ ವಿಭಾಗೀಯ ಪೀಠ, ನೈಸರ್ಗಿಕ ಮಕ್ಕಳಿಗೂ ದತ್ತು ಮಕ್ಕಳಿಗೂ ಯಾವುದೇ ವ್ಯತ್ಯಾಸವಿಲ್ಲ. ವ್ಯತ್ಯಾಸ ಮಾಡಿದರೆ ದತ್ತು ತೆಗೆದುಕೊಳ್ಳುವ ಉದ್ದೇಶಕ್ಕೇ ಅರ್ಥವಿರುವುದಿಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್, ಜಿ. ಬಸವರಾಜ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ಆದೇಶವನ್ನು ನೀಡಿದ್ದು, "ಸರ್ಕಾರಿ ಸೇವೆಯಲ್ಲಿದ್ದ ಪೋಷಕರು ಅಕಾಲಿಕವಾಗಿ ಮೃತಪಟ್ಟಾಗ ಆ ಕುಟುಂಬ ಆರ್ಥಿಕ ಸ್ಥಿತಿಗತಿ ಸಮಸ್ಯೆಯ ಆಧಾರದಲ್ಲಿ ಅವರ ಅವಲಂಬಿತರ ಜೀವನ ಮಟ್ಟ ಸುಧಾರಿಸಲು ನೇಮಕಾತಿಗೆ ಅವಕಾಶವಿದೆ. ಹಾಗಾಗಿ ಈ ನಿಯಮಕ್ಕೆ ದತ್ತು ಪಡೆದ ಮಕ್ಕಳು ಕೂಡ ಸಮಾನವಾಗಿ ಅರ್ಹರು" ಎಂದು ಅಭಿಪ್ರಾಯಪಟ್ಟಿದೆ.

AV Eye Hospital ad

ಮೇಲ್ಮನವಿ ಅರ್ಜಿ ಸಲ್ಲಿಸಿದ್ದ ಗಿರೀಶ್ ಎಂಬುವವರು ವಿನಾಯಕ ಮುತ್ತತ್ತಿ ಎಂಬುವರ ದತ್ತುಪುತ್ರ. ಸರ್ಕಾರಿ ನೌಕರಿಯಲ್ಲಿದ್ದ ವಿನಾಯಕ 2010ರಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗಿರೀಶ್ ತಮ್ಮ ದತ್ತು ತಂದೆಯ ಉದ್ಯೋಗವನ್ನು ತಮಗೆ ನೀಡುವಂತೆ ಕೋರಿ ಅನುಕಂಪದ ನೌಕರಿಗಾಗಿ ಅರ್ಜಿ ಸಲ್ಲಿಸಿದ್ದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನ. 25 ರೊಳಗೆ ಓಲಾ, ಉಬರ್ ಆಟೋ ದರ ನಿಗದಿ: ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

ಆದರೆ, ದತ್ತು ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಹೇಳಿ ಕೆಲಸ ನಿರಾಕರಿಸಲಾಗಿತ್ತು. ಹಾಗಾಗಿ ಗಿರೀಶ್‌ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್‌, ತಂದೆಯ ಕೆಲಸ ಪಡೆಯಲು ದತ್ತು ಪುತ್ರ ಕೂಡ ಅರ್ಹರಾಗಿದ್ದು, ಅವರಿಗೆ ಅನುಕಂಪದ ನೌಕರಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app