ಪ್ರವಾದಿ ಮುಹಮ್ಮದ್ ಬಗ್ಗೆ ಪ್ರಬಂಧ ಸ್ಪರ್ಧೆ; ಮುಖ್ಯ ಶಿಕ್ಷಕನ ಮೇಲೆ ಶ್ರೀರಾಮಸೇನೆ ದಾಳಿ

  • ಗದಗ ಜಿಲ್ಲೆಯ ನಾಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನ ಥಳಿತ
  • ಘಟನೆ ಕುರಿತು ತನಿಖೆಗೆ ಆದೇಶಿಸಿದ ಗದಗ ಸಾರ್ವಜನಿಕ ಶಿಕ್ಷಣ ಇಲಾಖೆ 

ವಿದ್ಯಾರ್ಥಿಗಳಿಗೆ ಪ್ರವಾದಿ ಮುಹಮ್ಮದ್ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಿದ ರಾಜ್ಯದ ಗದಗ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯರನ್ನು ಬಲಪಂಥೀಯ ಸಂಘಟನೆಯಾದ ಶ್ರೀರಾಮಸೇನೆಯ ಕಾರ್ಯಕರ್ತರು ಥಳಿಸಿರುವ ಘಟನೆ ನಡೆದಿದೆ.

ವಿದ್ಯಾರ್ಥಿಗಳ ಧಾರ್ಮಿಕ ಮತಾಂತರಕ್ಕೆ ಮುಖ್ಯ ಶಿಕ್ಷಕರು ಮುಂದಾಗಿದ್ದರು ಎಂದು ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.

ನಾಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ (ಸೆಪ್ಟೆಂಬರ್ 27) ಈ ಘಟನೆ ನಡೆದಿದೆ. ಕಾರ್ಯಕರ್ತರು ಶಾಲೆಗೆ ನುಗ್ಗಿ ಬಿಜಾಪುರದ ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫರ್ ಅವರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

172 ವಿದ್ಯಾರ್ಥಿಗಳಿರುವ ಶಾಲೆಯ ಹೆಡ್‌ಮಾಸ್ತರ್ ಆಗಿರುವ ಅಬ್ದುಲ್ ಅವರ ಪ್ರಕಾರ, ಒಂದು ವಾರದ ಹಿಂದೆ ಯಾರೋ ಒಬ್ಬರು ಅವರ ಬಳಿಗೆ ಬಂದು ಪ್ರಬಂಧ ಸ್ಪರ್ಧೆಗೆ ಹಣವನ್ನು ಪ್ರಾಯೋಜಿಸಲು ಮುಂದಾಗಿದ್ದಾರೆ.

AV Eye Hospital ad

"ವಿದ್ಯಾರ್ಥಿಗಳ ಕೈಬರಹವನ್ನು ಸುಧಾರಿಸುವ ಸಲುವಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದೆ. ಪ್ರತಿ ತಿಂಗಳು ಕನಿಷ್ಠ ಒಂದೆರಡು ಸ್ಪರ್ಧೆಗಳನ್ನು ಶಾಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಈ ಹಿಂದೆಯೂ ಕನಕದಾಸ, ಪುರಂದರ ದಾಸ ಮತ್ತಿತರ ವ್ಯಕ್ತಿಗಳ ಕುರಿತು ಪ್ರಬಂಧ ಸ್ಪರ್ಧೆಗಳನ್ನು ನಡೆಸಿದ್ದೇವೆ. ಇಸ್ಲಾಂ ಪ್ರಚಾರ ಮಾಡುತ್ತಿದ್ದೇನೆ ಎನ್ನುವುದು ಸುಳ್ಳು ಆರೋಪ” ಎಂದು ಅಬ್ದುಲ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? 15,000 ಪ್ರಾಥಮಿಕ ಶಾಲಾ ಶಿಕ್ಷಕರ ದಾಖಲಾತಿ ಪರಿಶೀಲನೆ ಪಟ್ಟಿ ಪ್ರಕಟ

“ಯಾರೋ ಒಬ್ಬರು ಶಾಲೆಗೆ ಬಂದು ವಿಜೇತರಿಗೆ ₹5,000 ನೀಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಮುಖ್ಯ ಶಿಕ್ಷಕ ಸ್ಪರ್ಧೆ ನಡೆಸಲು ಒಪ್ಪಿಕೊಂಡಿದ್ದಾರೆ. ಶಿಕ್ಷಕರಾಗಿ ಯಾವುದೇ ಒಂದು ಧರ್ಮದ ಪ್ರಚಾರಕ್ಕೆ ಅವಕಾಶ ನೀಡಬಾರದು. ಈ ಮೂಲಕ ಯುವ ಮನಸ್ಸುಗಳಲ್ಲಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾರೆ" ಎಂದು ಶ್ರೀರಾಮಸೇನೆಯ ರಾಜು ಖಾನಪ್ಪನವರ್ ಆರೋಪಿಸಿದ್ದಾರೆ.

ಘಟನೆ ಕುರಿತು ತನಿಖೆಗೆ ಆದೇಶಿಸಿರುವುದಾಗಿ ಗದಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ ಎಂ ಬಸವಲಿಂಗಪ್ಪ ತಿಳಿಸಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

''ಸುಮಾರು 43 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಾಲ್ಮೀಕಿ ಜಯಂತಿ, ಕನಕ ಜಯಂತಿ ಮತ್ತಿತರ ಕಾರ್ಯಕ್ರಮಗಳನ್ನು ಸಹ ಆಚರಿಸಿದ್ದೇವೆ ಎಂದು ಮುಖ್ಯೋಪಾಧ್ಯಾಯರು ಸಮರ್ಥಿಸಿಕೊಂಡಿದ್ದಾರೆ. ಆದರೆ, ಈ ರೀತಿ ಪ್ರಬಂಧ ಸ್ಪರ್ಧೆಗಳನ್ನು ನಡೆಸಲು ಸರ್ಕಾರದ ಆದೇಶವಿದ್ದರೂ ಈ ಪ್ರಕರಣದಲ್ಲಿ ಯಾವುದೇ ನಿರ್ದೇಶನ ನೀಡಿಲ್ಲ’’ ಎಂದು ಬಸವಲಿಂಗಪ್ಪ ಹೇಳಿದ್ದಾರೆ.

“ಶಿಕ್ಷಕ ವೃತ್ತಿಯಲ್ಲಿ 28 ವರ್ಷಗಳ ಅನುಭವ ಹೊಂದಿರುವ ನಾನು ಕಳೆದ ಮೂರು ವರ್ಷಗಳಿಂದ ಬಿಜಾಪುರದ ಈ  ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹಿಂದೂ ವ್ಯಕ್ತಿಗಳು ಮತ್ತು ಇತರರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಎಲ್ಲ ದಾಖಲೆಗಳನ್ನು ನಾನು ನಿರ್ವಹಿಸಿದ್ದೇನೆ. ನನ್ನೊಂದಿಗೆ ಕೆಲಸ ಮಾಡುವ ಏಳು ಶಿಕ್ಷಕರಿದ್ದು, ಅದೃಷ್ಟವಶಾತ್ ಅವರು ನನ್ನ ರಕ್ಷಣೆಗೆ ಬಂದರು” ಎಂದು ದಾಳಿ ಬಗ್ಗೆ ಅಬ್ದುಲ್ ಮುನಾಫರ್ ಪ್ರತಿಕ್ರಿಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
12 ವೋಟ್
eedina app