
- ʼನಾವು ದೇಣಿಗೆ ನೀಡಿದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಕೇಳಿದ್ದಾರೆʼ
- ಮುಂದಿನ ವಿಚಾರಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ : ಡಿ ಕೆ ಶಿವಕುಮಾರ್
ವಿಚಾರಣೆ ವೇಳೆ ಅಧಿಕಾರಿಗಳು ಕೆಲವು ದಾಖಲೆ ಕೇಳಿದ್ದು, ಅವುಗಳನ್ನು ಸಲ್ಲಿಸಿದ್ದೇನೆ. ಇನ್ನು ಕೆಲವು ದಾಖಲೆ ಕೇಳಿದ್ದು, ಅದನ್ನು ಮುಂದಿನ ಕೆಲವು ದಿನಗಳಲ್ಲಿ ಸಲ್ಲಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದರು.
ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದರು. ದೇಣಿಗೆ ವಿಚಾರವಾಗಿ ಯಾವ ರೀತಿ ವಿಚಾರಣೆ ನಡೆಯಿತು ಎಂದು ಪ್ರಶ್ನಿಸಿದಾಗ, “ನಾವು ದೇಣಿಗೆ ನೀಡಿದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಕೇಳಿದ್ದಾರೆ. ನಾವು ಅದಕ್ಕೆ ಸಂಬಂಧಿಸಿದ ದಾಖಲೆ ನೀಡುತ್ತೇವೆ” ಎಂದರು.
ಮತ್ತೆ ವಿಚಾರಣೆಗೆ ಕರೆದಿದ್ದಾರಾ ಎಂಬ ಪ್ರಶ್ನೆಗೆ, “ಸದ್ಯಕ್ಕೆ ದಾಖಲೆ ಕೇಳಿದ್ದು, ಮುಂದಿನ ವಿಚಾರಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದರು.
ಚುನಾವಣೆ ಸಮಯದಲ್ಲಿ ಡಿ ಕೆ ಸಹೋದರರಿಗೆ ಈ ರೀತಿ ಒತ್ತಡ ಹಾಕಿ ಬಿಜೆಪಿ ಸೇರುವ ಒತ್ತಾಯ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆ ಎದುರಾದಾಗ, “ಈಗ ಆ ವಿಚಾರ ಹೇಳಿಕೊಂಡು ಕೂತರೆ ಸಮಯ ಸಾಲುವುದಿಲ್ಲ. ಈಗ ಆ ವಿಚಾರ ಬೇಡ. ನಾವು ಎಲ್ಲವನ್ನೂ ಎದುರಿಸಲು ಸಿದ್ಧ” ಎಂದರು.