ಇಡಬ್ಲ್ಯೂಎಸ್ ತೀರ್ಪು ಸಂವಿಧಾನದ ಮೇಲೆ ಆಗಿರುವ ನೇರ ದಾಳಿ : ಮಾವಳ್ಳಿ ಶಂಕರ್

ಮಾವಳ್ಳಿ ಶಂಕರ್
  • ಸಂವಿಧಾನ ಮೀಸಲಾತಿ ನೀಡಿರುವುದು ಬಡತನ ನಿರ್ಮೂಲನೆಗಾಗಿ ಅಲ್ಲ
  • ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯಗಳ ಪಾಲುದಾರಿಕೆ ಬೇಕು’

“ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡುವ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ತೀರ್ಪು ಸಂವಿಧಾನ ವಿರೋಧಿ” ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಮಾವಳ್ಳಿ ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಡಬ್ಲ್ಯೂಎಸ್ ತೀರ್ಪು ನಿಜಕ್ಕೂ ಸಾಮಾಜಿಕ ನ್ಯಾಯಕ್ಕೆ ಆಗಿರುವಂತ ಬಹುದೊಡ್ಡ ಹಿನ್ನಡೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಸಂವಿಧಾನದ 15 ಮತ್ತು 16ನೇ ವಿಧಿಯಲ್ಲಿ ಶತಮಾನಗಳಿಂದ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ, ಶೋಷಣೆಗೆ ಒಳಪಟ್ಟ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ಮೀಸಲಾತಿ ಹಕ್ಕು ಕೊಡಲಾಗಿದೆ. ಅದು ಬಡತನ ನಿರ್ಮೂಲನೆಯ ಉದ್ದೇಶಕ್ಕಾಗಿ ಅಲ್ಲ” ಎಂದು ಪ್ರತಿಪಾದಿಸಿದರು.

Eedina App

“ಸುಪ್ರೀಂ ಕೋರ್ಟ್‌ನ ನಿರ್ದೇಶನದ ಬಗ್ಗೆ ಭರವಸೆ ಇತ್ತು. ಈಗಾಗಲೆ ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ತೆಗೆದುಕೊಂಡಿರುವ ನಿಲುವುಗಳ ಬಗ್ಗೆ ನಮಗೆ ಗೊತ್ತಿದೆ. ವಿಶೇಷವಾಗಿ ಈ ಇಡಬ್ಲ್ಯೂಎಸ್ ತೀರ್ಪು ಸಂವಿಧಾನದ ಮೇಲೆ ನೇರವಾಗಿ ಆಗಿರುವ ದಾಳಿ” ಎಂದು ಅಭಿಪ್ರಾಯಪಟ್ಟರು. 

“ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಬೇಕು ಎನ್ನುವಾಗ ಮಾತ್ರ, ಯಾವ ಆಧಾರದ ಮೇಲೆ ಕೊಟ್ಟಿದ್ದೀರಾ? ಸಮೀಕ್ಷೆ ಮಾಡಿದ್ದೀರಾ? ಅವರ ಪ್ರಾತಿನಿಧ್ಯದ ಬಗ್ಗೆ ನೀವು ಯಾವ ಮಾನದಂಡ ಅನುಸರಿಸಿದ್ದೀರಾ? ಇತ್ಯಾದಿ ಆಧಾರವನ್ನು ಸುಪ್ರೀಂ ಕೋರ್ಟ್ ಕೇಳುತ್ತದೆ. ಕಾಂತರಾಜು ಆಯೋಗ ವರದಿ ಸಲ್ಲಿಸಿ ಸುಮಾರು ತಿಂಗಳುಗಳೇ ಕಳೆದಿವೆ. ಆದರೆ, ಏನನ್ನೂ ಕೇಳದ, ಮೀಸಲಾತಿಯ ಬಗ್ಗೆ ತೀರ ಕ್ಷುಲ್ಲಕವಾಗಿ ಮಾತನಾಡಿದ ಸಮುದಾಯಗಳು, ಇಂದು ಏಕಾಏಕಿ ಮೀಸಲಾತಿಯನ್ನು ಕೇಳಿವೆ. ಈಗ ಆ ಸಮುದಾಯಗಳಿಗೆ ಯಾವ ಆಧಾರದ ಮೇಲೆ ಮೀಸಲಾತಿಯನ್ನು ಇವರು ಕೊಟ್ಟರು” ಎಂದು ಪ್ರಶ್ನಿಸಿದರು.

AV Eye Hospital ad

“ಈ ಎಲ್ಲದರ ಬಗ್ಗೆ ನಾವು ಗಂಭೀರವಾಗಿ ತೀರ್ಮಾನ ಮಾಡಬೇಕಾಗಿದೆ. ನಮ್ಮ ಉನ್ನತ ನ್ಯಾಯಾಂಗದಲ್ಲಿಯೂ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯ ಇಲ್ಲದ ಕಾರಣ ಈ ರೀತಿಯ ತೀರ್ಪುಗಳು ಬರುತ್ತಲೇ ಇರುತ್ತವೆ” ಎಂದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ನೆಟ್‌ವರ್ಕ್‌ ಸಮಸ್ಯೆ; ಆಯುಷ್ಮಾನ್ ನೋಂದಣಿಗೆ ಬೆಟ್ಟ ಹತ್ತಿದ ಗ್ರಾಮಸ್ಥರು

“ದೇಶದ ಉನ್ನತ ನ್ಯಾಯಾಂಗದಲ್ಲಿ ಸಾಮಾಜಿಕವಾಗಿ ತುಳಿತಕ್ಕೆ ಒಳಪಟ್ಟ ಸಮುದಾಯಗಳೂ ಪಾಲುದಾರರಾಗಬೇಕು. ಅವರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಹಿಂದೆ ರಾಷ್ಟ್ರಪತಿಯಾಗಿದ್ದ ಕೆ ಎಂ ನಾರಾಯಣ್ ಅವರು ಒಂದು ಸಂದರ್ಭದಲ್ಲಿ ಹೇಳಿದ್ದರು. ಅಂದು ಎಲ್ಲ ನ್ಯಾಯಾಧೀಶರು ಅವರ ವಿರುದ್ಧ ಹರಿಹಾಯ್ದರು. ನ್ಯಾಯಾಂಗದಲ್ಲಿಯೂ ಮೀಸಲಾತಿ ತರುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂಬ ಟೀಕೆಯನ್ನು ಎ. ಆನಂದನ್, ನಾರಿಮನ್ ಅವರಂತ ಹಿರಿಯ ವಕೀಲರು ಆರೋಪಿಸಿದ್ದರು. ಇಂದು ನಾವು ಒತ್ತಾಯ ಮಾಡುತ್ತೇವೆ, ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಶೋಷಿತ ಸಮುದಾಯಗಳ ಪಾಲುದಾರಿಕೆ ಬೇಕು” ಎಂದು ಅಭಿಪ್ರಾಯಪಟ್ಟರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app