ಕೆರೆಗಳಿಗೆ ಕಾರ್ಖಾನೆಗಳ ಕಲುಷಿತ ನೀರು ಸೇರ್ಪಡೆ: ಅಧಿಕಾರಿಗಳ ವಿರುದ್ಧ ಕೆರೆ ಸಂರಕ್ಷಣಾ ಸಮಿತಿ ಆಕ್ರೋಶ

  • ಕಾರ್ಖಾನೆಗಳಿಂದ ಹೊರಬರುವ ಕಲುಷಿತ ನೀರು ಕೆರೆಗೆ ಸೇರ್ಪಡೆ
  • ಕೆರೆ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆಯ ಎಚ್ಚರಿಕೆ

ದೊಡ್ಡಬಳ್ಳಾಪುರ ನಗರದ ತ್ಯಾಜ್ಯಯುಕ್ತ ಒಳಚರಂಡಿ ನೀರು ಮತ್ತು ಕೈಗಾರಿಕೆಗಳ ರಾಸಾಯನಿಕಯುಕ್ತ ನೀರನ್ನು ಕೆರೆಗಳಿಗೆ ಹರಿಬಿಡಲಾಗುತ್ತಿದೆ. ಅಧಿಕಾರಿಗಳು ಇದನ್ನು ತಡೆಯದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ದೊಡ್ಡ ತುಮಕೂರು ಕೆರೆ ಸಂರಕ್ಷಣಾ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಿತಿ ಮುಖಂಡ ಸತೀಶ್, "ಕೈಗಾರಿಕೆಗಳು, ನಗರಸಭೆ ಹಾಗೂ ಪಟ್ಟಣ ಪಂಚಾಯತಿಯ ಒಳಚರಂಡಿ ಹಾಗೂ ವಿಷಯುಕ್ತ ರಾಸಾಯನಿಕ‌ ಮಿಶ್ರಿತ ನೀರನ್ನು ದೊಡ್ಡ ತುಮಕೂರು ಹಾಗೂ ಮಜರಾ ಹೊಸಹಳ್ಳಿ ಕೆರೆಗಳಿಗೆ ಹರಿಬಿಡಲಾಗುತ್ತಿದೆ. ಇದರಿಂದ ಕೆರೆ ನೀರು ಸಂಪೂರ್ಣ ಕಲುಷಿತವಾಗಿದೆ. ಕೆರೆಗಳಿಗೆ ತ್ಯಾಜ್ಯಯುಕ್ತ ನೀರು ಬಿಡದಂತೆ ಸೂಚಿಸಲು ತ್ರಿಪಕ್ಷೀಯ‌ ಸಭೆ ‌ನಡೆಸುವುದು ಹಾಗೂ ಡಿಪಿಆರ್ ಸಿದ್ದಪಡಿಸುವ ಕುರಿತು ಅಧಿಕಾರಿಗಳು ನೀಡಿದ್ದ ಭರವಸೆ ಈವರೆಗೂ ಈಡೇರಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಕೆರೆಗಳ ಸಂರಕ್ಷಣೆಗಾಗಿ ನಿಯಮಾವಳಿಗಳನ್ನು ರೂಪಿಸಲು ಸಭೆ ಕರೆಯುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ನಗರಸಭೆ, ಬಾ ಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ ಹಾಗೂ ಕಾರ್ಖಾನೆ ಪ್ರತಿನಿಧಿಗಳ ‌ಸಭೆ ಕರೆಯುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಇದುವರೆಗೂ ಶಾಂತಿಯುತ ಪ್ರತಿಭಟನೆ ಮಾಡಲಾಗಿದೆ. ಈ ಧೋರಣೆ ಮುಂದುವರಿದರೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ಸಮಿತಿಯ ವಸಂತ್ ಮಾತನಾಡಿ, ಕೆರೆ ಉಳಿವಿಗಾಗಿ‌ ಈವರೆಗೆ ಶಾಂತಿಯುತ ಹೋರಾಟ‌ ಮಾಡುತ್ತಾ‌ ಬಂದಿದ್ದೇವೆ. ಆದರೆ, ಅಧಿಕಾರಿಗಳು ಮಾತು ತಪ್ಪಿರುವ ಹಿನ್ನೆಲೆಯಲ್ಲಿ ನಾವು ತಾಳ್ಮೆ‌ ಕಳೆದುಕೊಂಡಿದ್ದೇವೆ. ವಾರದೊಳಗೆ ಡಿಪಿಆರ್ ತಯಾರಿಸದಿದ್ದರೆ‌ ತಹಶೀಲ್ದಾರ್ ಕಚೇರಿ ಮುಂದೆ ನಿರಂತರ ಹೋರಾಟಕ್ಕೆ ಇಳಿಯಲಾಗುವುದು ಎಂದು‌ ಎಚ್ಚರಿಸಿದ ಅವರು, ಅಧಿಕಾರಿಗಳು ಸ್ಪಂದಿಸಿ, ಸಭೆ‌ ನಡೆಸಿದರೆ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗುವುದು ಎಂದರು.

ಇದನ್ನು ಓದಿದ್ದೀರಾ? ಹಾಸನ: ಆಸ್ತಿ ವ್ಯಾಜ್ಯಕ್ಕೆ ಮಹಿಳೆಯರ ಮೇಲೆ ಹಲ್ಲೆ

"ಅರ್ಕಾವತಿ ನದಿಯು ದೊಡ್ಡ ತುಮಕೂರು, ಹೆಸರಘಟ್ಟ ಮೂಲಕ ತಿಪ್ಪಗೊಂಡನಹಳ್ಳಿ ಕೆರೆ ಸೇರುತ್ತದೆ.‌ ಕೆರೆ ನೀರು ಕಲುಷಿತ ಆಗುವುದರಿಂದ ಅರ್ಕಾವತಿ ನದಿ,  ವೃಷಭಾವತಿಯಂತೆ ಮಲಿನವಾಗಲಿದೆ" ಎಂದು ಸಮಿತಿಯ ಟಿ ಜಿ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

"ಕೆರೆ ನೀರು ಕಲುಷಿತಗೊಂಡರೆ ಮುಂದೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ. ಹಾಗಾಗಿ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕಲುಷಿತ ನೀರು ಕೆರೆ ಸೇರದಂತೆ ಕಾಮಗಾರಿ ಆರಂಭಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ" ಎಂದು ಕೆರೆ ರಕ್ಷಣಾ ಸಮಿತಿಯ ಹಿರಿಯ ಮುಖಂಡ ಬಿ ಎಚ್ ಕೆಂಪಣ್ಣ ಎಚ್ಚರಿಸಿದರು.

ಮುಖಂಡರಾದ ರಾಮಕೃಷ್ಣ, ಮಜರಾ ಹೊಸಳ್ಳಿ, ಗ್ರಾ.ಪಂ. ಅಧ್ಯಕ್ಷ ‌ಸಂದೇಶ್, ಸದಸ್ಯ ಲೊಕೇಶ್, ಸತೀಶ್, ಅಜಯ್, ಚನ್ನೇಗೌಡ, ಭಾಸ್ಕರ್, ಶ್ರೀಧರ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಮಾಸ್‌ ಮೀಡಿಯಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಾಧ್ಯಮ ಸಂಯೋಜಕ ರಾಜು ಸಣ್ಣಕ್ಕಿ ಅವರ ಮಾಹಿತಿ ಆಧರಿಸಿದ ವರದಿ.
ನಿಮಗೆ ಏನು ಅನ್ನಿಸ್ತು?
2 ವೋಟ್
eedina app