ಖ್ಯಾತ ಗಾಯಕ, ಹಿರಿಯ ವಕೀಲ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

Shivamogga_Subbanna

ಖ್ಯಾತ ಹಾಡುಗಾರರೂ, ವಕೀಲರೂ ಆಗಿದ್ದ ಶಿವಮೊಗ್ಗ ಸುಬ್ಬಣ್ಣ ಅವರು ಗುರುವಾರ (ಆಗಸ್ಟ್‌ ೧೧) ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. 

'ಕಾಡುಕುದುರೆ' ಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು, ವಕೀಲಿ ವೃತ್ತಿಯನ್ನೂ ಮಾಡುತ್ತಿದ್ದರು. ಅಲ್ಪಕಾಲದ ಅಸ್ವಸ್ಥತೆಯ ನಂತರ ಇಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. 

ಪತ್ನಿ ಶಾಂತಮ್ಮ, ಮಗ ಹೈಕೋರ್ಟ್ ನ್ಯಾಯವಾದಿ ಶ್ರೀರಂಗ ಹಾಗೂ ಪುತ್ರಿ ದಿ ಹಿಂದೂ ಪತ್ರಿಕೆಯ ಹಿರಿಯ ಪತ್ರಕರ್ತೆ ಬಾಗೇಶ್ರೀ ಸಹಿತ ಬಂಧು ಬಳಗವನ್ನು ಅಗಲಿದ್ದಾರೆ.

ಸುಬ್ಬಣ್ಣ ಪರಿಚಯ:

ಶಿವಮೊಗ್ಗ ಸುಬ್ಬಣ್ಣ - ಕನ್ನಡದ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಲ್ಲಿ ಒಬ್ಬರಾಗಿದ್ದರು ಸುಬ್ಬಣ್ಣ ಅವರ ನಿಜ ನಾಮಧೇಯ 'ಜಿ.ಸುಬ್ರಹ್ಮಣ್ಯಂ'. ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮಗನಾದ ಸುಬ್ಬಣ್ಣ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938, ಡಿಸೆಂಬರ್ 14ರಂದು ಜನಿಸಿದರು. ಇವರ ತಾತ ಶಾಮಣ್ಣನವರು ಸಂಗೀತದಲ್ಲಿ ಘನ ವಿದ್ವಾಂಸರು.

ಅವರ ಬಳಿಯಲ್ಲಿಯೇ ತಮ್ಮ ಪ್ರಾಥಮಿಕ ಸಂಗೀತಾಭ್ಯಾಸ ಆರಂಭಿಸಿದರು. ಇವರೊಂದಿಗೆ ಹೆಸರಾಂತ ಗಾಯಕಿ ಕರ್ನಾಟಕದ ಕೋಗಿಲೆ ಬಿ.ಕೆ. ಸುಮಿತ್ರಾ ಅವರೂ ಸೇರಿ ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ನಂತರ ತಮ್ಮ ವ್ಯಾಸಂಗದ ಕಡೆ ಗಮನ ಹರಿಸಿದ ಸುಬ್ಬಣ್ಣ ಬಿ.ಎ.,ಬಿ.ಕಾಂ.,ಎಲ್.ಎಲ್.ಬಿ.,ಪದವೀದರರು. ವಕೀಲರಾಗಿ ವೃತ್ತಿ ಬದುಕು ಆರಂಭಿಸಿದ ಇವರು ಬಳಿಕ ನೋಟರಿಯಾಗಿ ನೇಮಕಗೊಂಡು ಕೆಲವು ವರ್ಷಗಳ ಕಾಲ ಸಂಗೀತದ ಕಡೆ ಮುಖ ಮಾಡದಿದ್ದರೂ, ರಕ್ತಗತವಾಗಿದ್ದ ಸಂಗೀತ ಆಗಾಗ ಇವರನ್ನು ಎಚ್ಚರಿಸಿ ಶಾಲಾ ಸಮಾರಂಭಗಳಲ್ಲಿ ಹಾಡುವಂತೆ ಪ್ರೇರೇಪಿಸುತ್ತಿತ್ತು. ಇದರಿಂದಾಗಿ ಶಾಲಾ ದಿನಗಳಲ್ಲಿ ಹಲವಾರು ಪ್ರಶಸ್ತಿ ಪಡೆದು, ಹಾಡಿನ ಸುಬ್ಬಣ್ಣ ಎಂದೆನಿಸಿಕೊಂಡರು.

ಮುಂದೆ ಕನ್ನಡ ಗಾಯನ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡ ಸುಬ್ಬಣ್ಣ 1963ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ನಾಟಕಕಾರ, ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೂಲಕ ಸಿನಿಮಾ ರಂಗಕ್ಕೆ ಹಿನ್ನೆಲೆ ಗಾಯಕರಾಗಿ ಪ್ರವೇಶಿಸಿದರು. 'ಕಾಡು ಕುದುರೆ' ಚಿತ್ರದ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಗಳಿಸಿದ್ದರು. ಕಾಡು ಕುದುರೆ ಓಡಿ ಬಂದಿತ್ತಾ ಹಾಡು ರಾಷ್ಟ್ರಪ್ರಶಸ್ತಿ ಪಡೆಯಲು ಕಾರಣವಾಗಿತ್ತು.

1979ರಲ್ಲಿ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲ ಪ್ರಶಸ್ತಿ ಸ್ವೀಕರಿಸಿದ ಸುಬ್ಬಣ್ಣ ಯಶಸ್ಸಿನ ಕುದುರೆಯೇರಿ ನಡೆದರು. ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ...’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು. ಸುಬ್ಬಣ್ಣ ಅವರ ಸಾಧನೆಯನ್ನು ಮನ್ನಿಸಿ ರಾಜ್ಯ ಸರ್ಕಾರ ಪ್ರತಿಷ್ಠಿತ ಸಂತ ಶಿಶುನಾಳ ಶರೀಫ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ನೀಡಿ ಗೌರವಿಸಿದೆ. 1974ರಲ್ಲಿ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಸಂದ "ರಜತಕಮಲ್" ಪುರಸ್ಕಾರವನ್ನು ಪಡೆದ ಹೆಗ್ಗಳಿಕೆ ಇವರದು.

ಕಾಡುಕುದುರೆ ಚಿತ್ರದ ಗಾಯನಕ್ಕೆ ಸಂದ ರಾಷ್ಟ್ರ ಪ್ರಶಸ್ತಿಯಲ್ಲದೆ, ‘ಕನ್ನಡ ಕಂಪು’ ಪ್ರಶಸ್ತಿ, ‘ಸುಂದರಶ್ರೀ ಪ್ರಶಸ್ತಿ’, ‘ಶಿಶುನಾಳ ಷರೀಫ್ ಪ್ರಶಸ್ತಿ’, ‘ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಗೌರವ’, ‘ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವ’ ಮುಂತಾದ ಅನೇಕ ಪ್ರತಿಷ್ಠಿತ ಗೌರವಗಳು ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಂದಿವೆ. 

ನಿಮಗೆ ಏನು ಅನ್ನಿಸ್ತು?
0 ವೋಟ್