ರಸಗೊಬ್ಬರ ಕೊರತೆ, ದುಪ್ಪಟು ಬೆಲೆ, ನಕಲಿ ಗೊಬ್ಬರದ ಹಾವಳಿ: ಕಂಗಾಲಾದ ರೈತ

  • ರೈತರಿಗೆ ತಲುಪದ ಸಬ್ಸಿಡಿ 
  • ಉಕ್ರೇನ್ ಯುದ್ಧದ ನೆಪದಲ್ಲಿ ಸುಲಿಗೆ

ಬೇಸಿಗೆಯಲ್ಲಿ ಸುರಿದ ಮಳೆಯು ಮುಂಗಾರು ಕೃಷಿ ಚಟುವಟಿಕೆಗೆ ನೀರಿನ ಅಭಾವವನ್ನು ತಪ್ಪಿಸುತ್ತದೆ ಎಂದು ರೈತರು ಸಂತಸಗೊಂಡಿದ್ದರು. ಆದರೆ, ಹಲವೆಡೆ ಮುಂಗಾರು ಮಳೆ ಕೈಕೊಡುತ್ತಿದೆ. ಅದರ ಜೊತೆಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯೂ ಹೆಚ್ಚು ಬಾಧಿಸುತ್ತಿದೆ. ವ್ಯವಸಾಯಕ್ಕೆ ಅಗತ್ಯವಾದ ರಸಗೊಬ್ಬರ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫವಾಗಿದ್ದು, ರಾಜ್ಯದಲ್ಲಿ ಗೊಬ್ಬರ ಕೊರತೆ ಉಂಟಾಗಿದೆ.

ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಉತ್ತಮ ಮಳೆ ಆಗಿದೆ. ಕೆರೆ-ಕುಂಟೆಗಳು ತುಂಬಿ ಹರಿದಿವೆ. ಬರಪೀಡಿತವಾಗಿದ್ದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ರಾಜ್ಯದ ಎಲ್ಲ ಭಾಗದ ರೈತರೂ ಕೃಷಿಯಲ್ಲಿ ತೊಡಗಿದ್ದಾರೆ. ಆದರೆ, ಅವರಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರೈತ ಮುಖಂಡರು ಹೇಳುತ್ತಿದ್ದಾರೆ. 

ರಾಜ್ಯದ ಧಾರವಾಡ, ಶಿವಮೊಗ್ಗ, ಮೈಸೂರು, ಹಾಸನ, ಗದಗ, ಬೀದರ್‌ ಸೇರಿದಂತೆ ವಿವಿಧ ಜಿಲ್ಲೆಗಳ ಹಲವಾರು ತಾಲೂಕುಗಳಲ್ಲಿ ರಸಗೊಬ್ಬರಕ್ಕಾಗಿ ಕೃಷಿ ಕೇಂದ್ರಗಳ ಎದುರು ರೈತರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ರಾಜ್ಯದಲ್ಲಿ ಅಗತ್ಯವಿರುವಷ್ಟು ಗೊಬ್ಬರ ದಾಸ್ತಾನಿದೆ ಎಂದು ವಾದಿಸುತ್ತಿದ್ದಾರೆ. ಸಾಕಷ್ಟು ದಾಸ್ತಾನಿದ್ದರೆ, ಅದನ್ನು ರೈತರಿಗೆ ಪೂರೈಕೆಯಾಗದೇ, ಏನಾಗುತ್ತಿದೆ ಎಂತಲೂ ಕೃಷಿಕರು ಪ್ರಶ್ನಿಸಿದ್ದಾರೆ. 

ಅಲ್ಲದೇ, ರಸಗೊಬ್ಬರ ಮತ್ತು ಕೀಟನಾಶಕ ಮೇಲೆ ಶೇ. 20ರಷ್ಟು ಬೆಲೆ ಏರಿಕೆ ಮಾಡಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರ ಕೇವಲ ಬೆಲೆ ಏರಿಕೆಗೆ ಮಾತ್ರ ಸಿಮೀತವಾಗಿದ್ದು, ಅಗತ್ಯದಷ್ಟು ರಸಗೊಬ್ಬರ ಒದಗಿಸುವಲ್ಲಿ ವಿಫಲವಾಗಿದೆ ಎಂದು ರೈತಸಂಘಟನೆ ಆರೋಪಿಸಿದೆ.

ಈ ವರ್ಷ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮುಂಗಾರು ಕೃಷಿಗೆ ಒಟ್ಟು 22.85 ಲಕ್ಷ ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಈ ಪೈಕಿ ಏಪ್ರಿಲ್ ತಿಂಗಳಲ್ಲಿ 2.57 ಲಕ್ಷ ಟನ್ (ಯೂರಿಯಾ 0.85 ಲಕ್ಷ ಟನ್, ಫೋಸ್ಪೆಟ್ 0.70 ಲಕ್ಷ ಟನ್, ಪೊಟ್ಯಾಷ್‌ 0.30 ಲಕ್ಷ ಟನ್) ರಸಗೊಬ್ಬರದ ಬೇಡಿಕೆ ಇತ್ತು. ಆದರೆ, ರೈತರಿಗೆ ಬಫರ್ ಸ್ಟಾಕ್‌ನಲ್ಲಿ ಕೇವಲ ಸುಮಾರು 1.38 ಲಕ್ಷ ಟನ್‌ ಮಾತ್ರ ವಿವಿಧ ರಸಗೊಬ್ಬರ ಲಭ್ಯವಾಗಿದೆ. ಮೇ ಮತ್ತು ಜೂನ್‌ ತಿಂಗಳಿನಲ್ಲಿ ಒಟ್ಟು 7.30 ಲಕ್ಷ ಟನ್ ರಸಗೊಬ್ಬರ ಲಭ್ಯವಾಗಿದೆಯಷ್ಟೇ. ಹೀಗಾಗಿ, ರಸಗೊಬ್ಬರದ ಕೊರತೆಯಾಗಿದ್ದು, ರೈತರು ಪ್ರತಿಭಟನೆಗೆ ಇಳಿದಿದ್ದಾರೆ.

"ವರ್ಷದಿಂದ ವರ್ಷಕ್ಕೆ ಗೊಬ್ಬರದ ಬೇಡಿಕೆ ಹೆಚ್ಚುತ್ತಿದೆ. ಸರ್ಕಾರಗಳು ಹೆಚ್ಚುವರಿಯಾಗಿ ದಾಸ್ತಾನು ಮಾಡಿಕೊಂಡು ಪೂರೈಸಬೇಕು. ಆದರೆ, ಸರ್ಕಾರವು ನಿರ್ಲಕ್ಷ್ಯ ತಳೆದಿದೆ" ಎಂದು ಚಿಕ್ಕಬಳ್ಳಾಪುರದ ರೈತ ಎಚ್.ಕೆ ಸುರೇಶ್ ಅಸಮಾಧಾನ ಹೊರಹಾಕಿದ್ದಾರೆ. 

ಕಾಳಸಂತೆಯಲ್ಲಿಲ್ಲ ಕೊರತೆ ಇಲ್ಲ:

ಅಧಿಕ ಬೆಲೆಗೆ ಮಾರಾಟ ಮಾಡುವ ಕಾಳಸಂತೆಯಲ್ಲಿ ಗೊಬ್ಬರಕ್ಕೆ ಕೊರತೆ ಉಂಟಾಗಿಲ್ಲ. ರೈತರು ಖರೀದಿಸುವ ಕೇಂದ್ರಗಳಲ್ಲಿ ಮಾತ್ರ ಅಭಾವ ಸೃಷ್ಟಿಯಾಗಿದೆ. ಕೃಷಿ ಚಟುವಟಿಕೆಗಳು ಆರಂಭವಾಗುವ ಮುನ್ನವೇ ಸರ್ಕಾರ ಗೊಬ್ಬರ ದಾಸ್ತಾನು, ಪೂರೈಕೆ ಮೇಲೆ ನಿಗಾ ವಹಿಸಿ, ರೈತರಿಗೆ ಪೂರೈಸಬೇಕಿತ್ತು. ಈ ಬಗ್ಗೆ ಪೂರ್ವ ಸಿದ್ಧತೆ ಇಲ್ಲದ ಪರಿಣಾಮ ಗೊಬ್ಬರ ಕೊರತೆ ಸಮಸ್ಯೆ ಉಂಟಾಗಿದೆ ಎಂದು ವಿಪಕ್ಷ ನಾಯಕರು ಹಾಗೂ ರೈತ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಕಲಬುರಗಿ, ರಾಯಚೂರು, ಕೊಡಗು ಭಾಗದಲ್ಲಿ ಒಂದು ಚೀಲ ಗೊಬ್ಬರಕ್ಕೆ ಬೆಲೆ ಮೇಲೆ 250-300ರೂ. ಅಧಿಕ ಪಡೆಯುತ್ತಿರುವುದು ಗೊತ್ತಾಗಿದೆ. ಇದೆಲ್ಲವು ರೈತರಿಗೆ ಆರ್ಥಿಕ ಸಂಕಷ್ಟ ತಂದೊಡ್ಡುತ್ತಿದೆ. ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ರೈತರು ಆಗ್ರಹಿಸಿದ್ದಾರೆ. 

ಮಾರುಕಟ್ಟೆಯಲ್ಲಿ ಗೊಬ್ಬರದ ಬೆಲೆ ದುಪ್ಪಟು

ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿದ್ದ ಯುದ್ಧದಿಂದ ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆ ಹೆಚ್ಚಳವಾಗಿದೆಯೆಂದು ಹೇಳಲಾಗಿತ್ತು. ವರ್ತಕರು ನಿಗದಿತ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ವಸೂಲು ಮಾಡುತ್ತಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕೇಂದ್ರ ಸರ್ಕಾರ ರಸಗೊಬ್ಬರದ ಮೇಲೆ ಸಬ್ಸಿಡಿ ಘೋಷಿಸಿತ್ತು. ಆದರೆ, ರಾಜ್ಯದ ಬೆಂಗಳೂರು ಗ್ರಾಮಾಂತರ, ಕೋಲಾರ, ಬಳ್ಳಾರಿ, ಹಾವೇರಿ, ಗದಗ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ 50ಕೆ.ಜಿ ತೂಕದ ಚೀಲಕ್ಕೆ 400-1000 ರೂ ವರೆಗೆ ಹೆಚ್ಚುವರಿ ಹಣ ಪಡೆಯುತ್ತಿರುವುದು ಕಂಡು ಬಂದಿದೆ. ಗೊಬ್ಬರದ ಅಂಗಡಿಗಳಲ್ಲಿ ದರಪಟ್ಟಿ ಪ್ರದರ್ಶಿಸಬೇಕೆಂಬ ನಿಯಮಗಳಿದ್ದರೂ ಬಹುತೇಕ ಗೊಬ್ಬರದ ಅಂಗಡಿಯವರು ಇದನ್ನು ಪಾಲಿಸದೇ ದುಬಾರಿ ಬೆಲೆಯನ್ನು ಪಡೆಯುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಗೊಬ್ಬರ            -    ಮಾರಾಟ ದರ        -     ಸಬ್ಸಿಡಿ

ಡಿಎಪಿ            -     1350                 -     2500.65
ಯೂರಿಯಾ    -    266                    -     800
ಎಸ್‌ಎಸ್‌ಪಿ     -     575-640             -    375.65
ಎಂಒಪಿ         -     1700                  -    759.3

ನಕಲಿ ಗೊಬ್ಬರದ ಹಾವಳಿ

ಒಂದು ಕಡೆ ದುಬಾರಿ ಬೆಲೆಯ ಗೊಬ್ಬರದಿಂದ ಬೇಸತ್ತ ರೈತರಿಗೆ ಗದಗ ಮತ್ತು ಹಾವೇರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ನಕಲಿ ಗೊಬ್ಬರದ ಹಾವಳಿಯು ಹೆಚ್ಚಾಗಿದೆ.

ಕಳೆದ ವಾರ ಜೈ ಕಿಸಾನ್ ಮಂಗಳಾ ಡಿಎಪಿ ಹೆಸರಿನ ನಕಲಿ ರಸಗೊಬ್ಬರವನ್ನು ರೈತರಿಗೆ ಮಾರಟ ಮಾಡಲು ಬಂದ ವ್ಯಕ್ತಿಗಳನ್ನು ಬಂಧಿಸಿ ಕೃಷಿ ಇಲಾಖೆ ಮತ್ತು ಪೋಲಿಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಘಟನೆ ನಡೆದಿತ್ತು.

ಈ ಸುದ್ದಿ ಓದಿದ್ದೀರಾ? : ಪರಿಶಿಷ್ಟರ ಕೃಷಿ ಸಬ್ಸಿಡಿಗೆ ಕತ್ತರಿ ಹಾಕಿದ ರಾಜ್ಯ ಸರ್ಕಾರ; ರೈತರ ಆಕ್ರೋಶ 

ಇಂತಹ ಹಲವು ಪ್ರಕರಣಗಳು ಅಲ್ಲಲ್ಲಿ ನಡೆದು ದೂರುಗಳು ಕೂಡ ದಾಖಲಾಗಿದ್ದವು. ಉನ್ನತಾಧಿಕಾರಿಗಳು ಗೊಬ್ಬರ ವಿತರಣೆ ಅಕ್ರಮಗಳ ಕುರಿತು ದೂರು ಕೊಟ್ಟಾಗ ವಿಚಕ್ಷಣ ದಳದ ಅಧಿಕಾರಿಗಳಿಂದ ರಾಜ್ಯಾದ್ಯಂತ ಅಕ್ರಮ ಜಾಲವನ್ನು ಭೇದಿಸಲಾಗುತ್ತಿದೆ ಎನ್ನುವ ಉತ್ತರ ಕೊಟ್ಟಿದ್ದರು.

ಹಾವೇರಿಯ ಜಿಲ್ಲಾಡಳಿತದ ಆವರಣದಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದ ಕೃಷಿ ಸಚಿವರಾದ ಬಿ. ಸಿ ಪಾಟೀಲ್, “ಕಳಪೆ ಗುಣಮಟ್ಟದ ಬೀಜ ಮತ್ತು ಗೊಬ್ಬರವನ್ನು ಮಾರಾಟ ಮಾಡಿ, ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದ್ದ 144 ಜನರ ಪರವಾನಗಿಗಳನ್ನು ರದ್ದುಪಡಿಸಲಾಗಿದ್ದು, 15 ಪ್ರಕರಣಗಳಲ್ಲಿ ಶಿಕ್ಷೆಯನ್ನು ನೀಡುವುದರ ಜೊತೆಗೆ 28 ಕೋಟಿ ರೂಪಾಯಿ ಮೌಲ್ಯದ ಕಳಪೆ ಬೀಜ ವಶಪಡಿಸಿಕೊಂಡು ದಂಡ ಹಾಕಲಾಗಿದೆ,” ಎಂದು ಹೇಳಿದ್ದಾರೆ. 

ಈ ಸಂಬಂಧ ಈ ದಿನ.ಕಾಮ್‌ನೊಂದಿಗೆ ರೈತ ಮುಖಂಡ ರಮೇಶ್‌ ಮಾತನಾಡಿ, "ಹೆಚ್ಚು ಹಣಕ್ಕೆ ಗೊಬ್ಬರವನ್ನು  ಮಾರಾಟ ಮಾಡುತ್ತಿರುವ ಮಾಲೀಕರ ಮೇಲೆ ಹಾಗೂ ನಕಲಿ ಗೊಬ್ಬರವನ್ನು ಮಾರುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಎಮ್ಮೆ ಚರ್ಮದ ಸರ್ಕಾರಕ್ಕೆ  ಪ್ರಜ್ಞೆ ಇದ್ದಂತೆ ಕಾಣುತ್ತಿಲ್ಲ, ಅಂತವರ ಮೇಲೆ ಸರ್ಕಾರ ಆದಷ್ಟು ಬೇಗ ಕ್ರಮಗೊಳ್ಳದಿದ್ದರೇ, ನಾವೇ ಹಿಡಿದು ಹೊಡೆಯುತ್ತೇವೆ" ಎಂದು ಎಚ್ಚರಿಕೆ ನೀಡಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್