ಕಬ್ಬು ಬೆಳೆಗೆ ದರ ನಿಗದಿ | ಧರಣಿನಿರತ ಕಬ್ಬು ಬೆಳೆಗಾರರ ಬಂಧನ ಖಂಡಿಸಿ ಹಲವೆಡೆ ರಸ್ತೆ ತಡೆ

Farmers-protest-sugarcaneissue
  • ಪೊಲೀಸರ ದೌರ್ಜನ್ಯ, ರೈತರ ಬಂಧನ ಖಂಡಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
  • ಕಲಬುರಗಿ, ಚಾಮರಾಜನಗರ ಸೇರಿದಂತೆ ಹಲವೆಡೆ ರಸ್ತೆ ತಡೆ ನಡೆಸಿದ ರೈತರು

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ನಡೆಸುತ್ತಿದ್ದ ಕಬ್ಬು ಬೆಳೆಗಾರರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ರಾಜ್ಯದ ಹಲವೆಡೆ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. 

ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರು, ಕಬ್ಬು ಬೆಳೆಗೆ ದರ ನಿಗದಿ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಸರ್ಕಾರ ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ಶುಕ್ರವಾರ ಕೇಂದ್ರ-ರಾಜ್ಯ ಸರ್ಕಾರಗಳ ಅಣಕು ಶವಯಾತ್ರೆ ನಡೆಸಲು ಮುಂದಾಗಿದ್ದರು. ಈ ವೇಳೆ ರೈತರನ್ನು ತಡೆದಿರುವ ಪೊಲೀಸರು ರೈತ ಮುಖಂಡ ಕುರುಬೂರು ಶಾಂತಕುಮಾರ್‌ ಸೇರಿದಂತೆ ಹಲವರನ್ನು ಬಂಧಿಸಿದ್ದರು. 

ಹೋರಾಟಗಾರರನ್ನು ಬಂಧಿಸಿದ್ದಕ್ಕೆ ಚಾಮರಾಜನಗರ, ಬನ್ನೂರು, ಟಿ ನರಸೀಪುರ, ಧಾರವಾಡ ಜಿಲ್ಲಾ ಕಲಘಟಗಿ, ಕಲಬುರಗಿ ಜಿಲ್ಲೆಯ ಅಫಜಲಪುರ ಸೇರಿದಂತೆ ಹಲವೆಡೆ ಕಬ್ಬು ಬೆಳೆಗಾರರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ತಿ ನರಸಿಪುರ
ಜಾನುವಾರುಗಳ ಜೊತೆ ತಿ ನರಸಿಪುರದಲ್ಲಿ ರಸ್ತೆ ತಡೆ ನಡೆಸಿದ ರೈತರು

ಕಬ್ಬು ಬೆಳೆಗಾರರ ಬಂಧನ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟಗಾರರು ಕಪ್ಪುಬಟ್ಟಿ ಧರಿಸಿ, "ರೈತರ ಹೋರಾಟವನ್ನು ಸರ್ಕಾರ ಪೊಲೀಸರ ಮುಖೇನ ಹತ್ತಿಕ್ಕುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ಮುಂದುವರೆಸಿದ್ದಾರೆ. "ರಾಜ್ಯಾದ್ಯಂತ ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಯವರು ತಮ್ಮ ಮನಬಂದಂತೆ ನಿಗದಿಪಡಿಸಿ, ಯಾರ ಅನುಮತಿಯು ಇಲ್ಲದೆ ಲಗಾಣಿ ವಸೂಲಿ ಮಾಡುವ ಮೂಲಕ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು" ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಬನ್ನೂರು
ಬನ್ನೂರಿನಲ್ಲಿ ರಸ್ತೆ ತಡೆಸಿದ ರೈತರು

"ಕೇಂದ್ರ ಸರ್ಕಾರ ಕಬ್ಬು ಬೆಳೆಗೆ ನಿಗದಿ ಮಾಡಿರುವ ಎಫ್‌ಆರ್‌ಪಿ ದರ ನ್ಯಾಯಸಮತವಾಗಿಲ್ಲ. ಕಬ್ಬಿನಿಂದ ಬರುವ ಇತರೆ ಉತ್ಪನ್ನಗಳ ಲಾಭ ಪರಿಗಣಿಸಿ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕು ಎಂಬುದು ನಮ್ಮ ಹೋರಾಟ. ಸರ್ಕಾರ, ಹೋರಾಟಗಾರರ ಮನವಿಗೆ ಸ್ಪಂದಿಸದೆ ಹೀಗೆ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಮುಂದಿನ ಎಲ್ಲ ಸಮಸ್ಯೆಗಳಿಗೂ ಸರ್ಕಾರವೇ ನೇರ ಹೊಣೆʼ ಎಂದು ಕುರುಬೂರು ಶಾಂತಕುಮಾರ್‌ ಎಚ್ಚರಿಕೆ ನೀಡಿದರು. 

ಧಾರವಾಡ-ಕಾರಟಗಿ
ಧಾರವಾಡ-ಕಾರಟಗಿಯಲ್ಲಿ ರಸ್ತೆ ತಡೆಯಿಂದ ವಾಹನ ದಟ್ಟಣೆ 

"ಕಬ್ಬು ಬೆಳೆಗಾರರ ಹೋರಾಟದ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುವುದಾಗಿ ಭರವಸೆ ನೀಡಿದ್ದ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಇದುವರೆಗೂ ಕಣ್ಣಿಗೆ ಬಿದ್ದಿಲ್ಲ. ಸುಳ್ಳು ಭರವಸೆಗಳನ್ನು ನೀಡಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಕಬ್ಬು ಬೆಳೆಗೆ ದರ ನಿಗದಿಯಾಗುವವರೆಗೂ ಈ ಜಾಗ ಬಿಟ್ಟು ಕದಲುವುದಿಲ್ಲ" ಎಂದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app