ʼಅಗ್ನಿಪಥ್‌ʼ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ; ಸರಣಿ ಟ್ವೀಟ್‌ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ 

siddaramaiah
  • ಹೊಸ ಯೋಜನೆ ಹೆಸರಲ್ಲಿ ದೇಶದ ಯುವಜನರನ್ನ ನಿರುದ್ಯೋಗದ ಕೂಪಕ್ಕೆ ತಳ್ಳುವ ಹುನ್ನಾರ: ಆರೋಪ
  • 'ಅಗ್ನಿಪಥ್‌' ದೇಶದ ಭದ್ರತೆಗೆ ಮಾರಕವಾಗಿದ್ದು, ಹಳೇ ನಿಯಮ ಮೂಲಕವೇ ಸೈನಿಕರ ನೇಮಕವಾಗಲಿ: ಆಗ್ರಹ

ದೇಶಾದ್ಯಂತ ಕಿಚ್ಚು ಹಚ್ಚಿರುವ ʼಅಗ್ನಿಪಥ್‌ʼ ಯೋಜನೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹರಿತ ಪದ ಪ್ರಯೋಗ ಮಾಡಿರುವ ಅವರು, ಶುಕ್ರವಾರ ಸರಣಿ ಟ್ವೀಟ್‌ ಮೂಲಕ ಯೋಜನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
“ಈಗಾಗಲೇ ದೇಶದ ಯುವಜನರನ್ನು ದಾರಿ ತಪ್ಪಿಸಿರುವ ಕೇಂದ್ರ ಸರ್ಕಾರ, ಹೊಸ ಯೋಜನೆ ಹೆಸರಲ್ಲಿ ಅವರನ್ನಿನ್ನೂ ಅತಂತ್ರರನ್ನಾಗಿಸುತ್ತಿದೆ. ದೇಶದ ಯುವಜನರನ್ನ ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ʼಅಗ್ನಿಪಥ್‌ʼ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರ ತಕ್ಷಣ ರದ್ದು ಮಾಡಬೇಕು,” ಎಂದು ಒತ್ತಾಯಿಸಿದ್ದಾರೆ. 

“ಅಗ್ನಿಪಥ್‌ ಯೋಜನೆ ದೇಶದ ಭದ್ರತೆಗೆ ಮಾರಕ. ಇದರ ಬದಲು ಹಳೆಯ ಸೇನಾ ನಿಯಮಗಳ ಮೂಲಕವೇ ಸೈನಿಕರ ನೇಮಕಾತಿಯಾಬೇಕು. ಪ್ರತಿ ವರ್ಷ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ, ಈಗ ಉದ್ಯೋಗವಕಾಶದ ಬಾಗಿಲುಗಳನ್ನು ಒಂದೊಂದಾಗಿ ಮುಚ್ಚುತ್ತಿದೆ. ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳನ್ನು ಈ ಸರ್ಕಾರ ಸೃಷ್ಟಿ ಮಾಡುವ ಗುಪ್ತ ಅಜೆಂಡಾ ಹೊಂದಿದೆ,” ಎಂದು ಟೀಕಿಸಿದ್ದಾರೆ. 

“ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ದರಾಗುತ್ತಿರುವ  ಸೈನಿಕರಿಗೆ ಉದ್ಯೋಗ ಭದ್ರತೆ, ನ್ಯಾಯಬದ್ಧ ಸಂಬಳ, ಪಿಂಚಣಿ ಮತ್ತಿತರ ಸೌಲಭ್ಯ ಒದಗಿಸಲಾಗದಷ್ಟು ಕೇಂದ್ರ ಸರ್ಕಾರ ದೀವಾಳಿಯಾಗಿದೆಯೇ? ಸರ್ಕಾರ ರಕ್ಷಣೆ ಸಲುವಾಗಿ ದೇಶದ ಭದ್ರತೆ ಜತೆ ಚೆಲ್ಲಾಟವಾಡಬೇಡಿ,” ಎಂದು ಎಚ್ಚರಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ದ್ವೇಷ ರಾಜಕಾರಣದ ವಿರುದ್ದ ತೊಡೆ ತಟ್ಟಿದ ಸಿದ್ದರಾಮಯ್ಯ, ಡಿಕೆಶಿ 

“ಹೊಸ ಸೇನಾ ನೇಮಕಾತಿ ಸೇನೆಗಷ್ಟೇ ಸೀಮಿತವಾಗದೆ ಮುಂದಿನ ದಿನಗಳಲ್ಲಿ ಇತರೆ ಸರ್ಕಾರಿ ಉದ್ಯೋಗಗಳ ಮೇಲೂ ಸವಾರಿ ಮಾಡಲಿದೆ. ಈ ಹಿಂದೆ ಕರಾಳ ಕೃಷಿ ಕಾಯ್ಧೆಗಳನ್ನು ಜಾರಿಗೆ ತಂದು ರೈತರ ಬದುಕು ನಾಶ ಮಾಡಲು ಮುಂದಾಗಿತ್ತು. ಜನ ಅದಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಈಗ ಯುವ ಜನರ ಬದುಕಿನ ಜೊತೆ ಆಟವಾಡಲು ನಿಂತಿರುವ ಕೇಂದ್ರ ಸರ್ಕಾರಕ್ಕೆ  ಮತ್ತೆ ಜನ ಪಾಠ ಕಲಿಸುತ್ತಾರೆ," ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್