ಬೀದರ್ | ಉತ್ತಮ ಸಂಸ್ಕಾರದ ಮೂಲಕ ಸ್ವಾತಂತ್ರ್ಯವನ್ನು ಆನಂದಿಸಬೇಕು: ಬಾಲಾಜಿ ಅಮರವಾಡಿ

Bidar
  • ಸ್ವಾತಂತ್ರ್ಯ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು
  • ಸ್ವಾತಂತ್ರ್ಯದ ಕಿಚ್ಚು ಕೇವಲ ಒಂದು ದಿನಕ್ಕೆ ಸಿಮೀತವಾಗಿರಬಾರದು

'ಪ್ರಸ್ತುತ ಸಮಾಜದಲ್ಲಿ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸ್ವಾತಂತ್ರ್ಯವನ್ನು ಅನುಭವಿಸುವ, ಆನಂದಿಸುವ ಕೆಲಸವಾಗಬೇಕಿದೆ' ಎಂದು ಸಂಪನ್ಮೂಲ ಶಿಕ್ಷಕ ಬಾಲಾಜಿ ಅಮರವಾಡಿ ಹೇಳಿದ್ದಾರೆ. 

ಔರಾದ್ ತಾಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಬಾಲಾಜಿ ಅಮರವಾಡಿ, ”ಈಗಿನ ಜನರಲ್ಲಿ ಸಂಕುಚಿತತೆ, ಸ್ವಾರ್ಥತೆ ಹಾಗೂ ಅಸಹನೆಯಂತಹ ಗುಣಗಳು ಹೆಚ್ಚಾಗುತ್ತಿದ್ದು, ಸ್ವಾತಂತ್ರ್ಯವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ದುರುಪಯೋಗವಾಗದಂತೆ ಎಚ್ಚರಿಕೆ ವಹಿಸುವ ಕೆಲಸ ನಡೆಯಬೇಕಿದೆ” ಎಂದು ಹೇಳಿದರು.

“ಸ್ವಾತಂತ್ರ್ಯದ ಕಿಚ್ಚು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಿರಂತರವಾಗಿ ಬದುಕಿನಲ್ಲಿ ಪ್ರಜ್ವಲಿಸಬೇಕು. ನಿಸ್ವಾರ್ಥ ಭಾವದಿಂದ ಜನರ ಸೇವೆಗೈಯ್ಯಬೇಕು. ಮನೆ ಮನೆಗೂ ತ್ರಿವರ್ಣ ಧ್ವಜಗಳು ಹಾರಿಸಿ ದೇಶಪ್ರೇಮ ಮೆರೆಯುತ್ತಿರುವ ನಮ್ಮ ಮನಗಳಲ್ಲಿಯೂ ಸಹ ಸತ್ಯ, ನ್ಯಾಯ, ನೀತಿ, ಧರ್ಮ, ಪ್ರೇಮ, ಸಹನೆ, ಸಹಿಷ್ಣುತೆಯ ಧ್ವಜಗಳು ಪ್ರತಿನಿತ್ಯವೂ ಹಾರುವಂತಾಗಲಿ” ಎಂದು ಹೇಳಿದರು. 

ಈ ಸುದ್ದಿ ಓದಿದ್ದೀರಾ?: ಮಂಡ್ಯ | ಪಥಸಂಚಲನಕ್ಕೆ ಸಜ್ಜಾಗಿ ಬಂದ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಿದ ಜಿಲ್ಲಾಡಳಿತ; ಆಕ್ರೋಶ

“ಭಾರತ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು” ಎಂದು ತಹಶೀಲ್ದಾರ್ ಅರುಣ್ ಕುಮಾರ್ ಕುಲಕರ್ಣಿ ಹೇಳಿದರು.

ವಿವಿಧ ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನಗೊಂಡವು. ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ರಾಜ್ಯಾದ್ಯಂತ ಸೈಕಲ್ ಯಾತ್ರೆಯೊಂದಿಗೆ ಜನರಲ್ಲಿ ದೇಶ, ನಾಡು, ನುಡಿ ಪ್ರೇಮ ಹಾಗೂ ಸ್ವಾತಂತ್ರ್ಯ ಕುರಿತು ಜಾಗೃತಿ ಮೂಡಿಸಿರುವ ಕೊಳ್ಳುರ್ ಗ್ರಾಮದ ಚಂದ್ರಕಾಂತ ರ‍್ಯಾಕಲೆ ಅವರ ಮಕ್ಕಳಾದ ಅರುಣ ಮತ್ತು ಕರುಣ ಅವರಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯತ್ ಅಧ್ಯಕ್ಷೆ ಅಂಬಿಕಾ ಪವಾರ್, ಉಪಾಧ್ಯಕ್ಷ ಸಂತೋಷ ಪೋಕಲವಾರ್, ತಾಪಂ ಇಒ ಬೀರೇಂದ್ರಸಿಂಗ್, ಬಿಇಒ ಎಚ್.ಎಸ್ ನಗನೂರ್, ರಘುನಾಥ ಬಿರಾದಾರ್, ಮಲಶೆಟ್ಟಿ ಚಿದ್ರೆ, ಶಿವಕುಮಾರ ಘಾಟೆ, ಹಿರಿಯರಾದ ರಾಮಣ್ಣ ವಡೆಯರ್, ಡಾ. ವೈಜಿನಾಥ ಬುಟ್ಟೆ, ಬಾಬುರಾವ ತಾರೆ, ಘಾಳರೆಡ್ಡಿ ಮಮದಾಪೂರ್ ಅವರಿಗೂ ಈ ವೇಳೆ ಸನ್ಮಾನಿಸಲಾಯಿತು.

ಮಾಸ್‌ ಮೀಡಿಯಾ ಕಲ್ಬುರ್ಗಿ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್