ಗದಗ | ಗ್ರಾಮ ದೇವತೆ ಜಾತ್ರೆಯಲ್ಲಿ ದಲಿತರ ಮೇಲೆ ದೌರ್ಜನ್ಯ: ಶಾಂತಿ ಸಭೆ ನಡೆಸಿದ ಡಿವೈಎಸ್‌ಪಿ

Gadag
  • ಡಿವೈಎಸ್‌ಪಿ ಏಗೋನಗೌಡ ಪಾಟೀಲ್‌ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ
  • ದಲಿತರ ಮೇಲೆ ಪ್ರಬಲ ವರ್ಗದ ಜನರು ನಡೆಸಿದ ದೌರ್ಜನ್ಯ 

ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆಯಲ್ಲಿ ದಲಿತರ ಮೇಲೆ ಪ್ರಬಲ ಜಾತಿಯವರು ಹಲ್ಲೆ ನಡೆಸಿದ್ದಾರೆ. ದೌರ್ಜನ್ಯ ಪ್ರಕರಣವನ್ನು ಇತ್ಯರ್ಥಗೊಳಿಸಲು ಡಿವೈಎಸ್‌ಪಿ ಏಗೋನಗೌಡ ಪಾಟೀಲ್‌ ಅಧ್ಯಕ್ಷತೆಯಲ್ಲಿ ಗುರುವಾರ ಶಾಂತಿ ಸಭೆ ನಡೆಸಲಾಗಿದೆ.

ಮೇ 6ರಂದು ಸುರಕೋಡ ಗ್ರಾಮದ ‘ಗ್ರಾಮ ದೇವತೆ’ ಜಾತ್ರಾ ಮಹೋತ್ಸವದಲ್ಲಿ ಮಾದಿಗರು ಡೊಳ್ಳು ಬಾರಿಸುವುದನ್ನು ನಿಲ್ಲಿಸಲಿಲ್ಲ ಎಂಬ ಕಾರಣವೊಡ್ಡಿ ಪ್ರಬಲ ವರ್ಗದ ಜನರು ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ 23 ಜನರ ಮೇಲೆ ನರಗುಂದ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್‍‌ ದಾಖಲಾಗಿತ್ತು.

ಗ್ರಾಮದಲ್ಲಿರುವ ಶಿವರುದ್ರ ಶಿವಯೋಗಿ ಮಠಕ್ಕೆ ದಲಿತರು ಪ್ರವೇಶಿಸಿದ್ದನ್ನು ಸಹಿಸಲಾರದ ಪ್ರಬಲ ಜಾತಿಯವರು 'ಡೊಳ್ಳು ಬಾರಿಸಿದ' ನೆಪ ಓಡ್ಡಿ ಸಾಮೂಹಿಕವಾಗಿ ಹಲ್ಲೆ ನಡೆಸಿದ್ದಾರೆಂದು ದಲಿತರು ಆರೋಪಿಸಿದ್ದರು. ಘಟನೆಯ ಬಳಿಕ ಗ್ರಾಮದಲ್ಲಿ ಅಶಾಂತಿ ನೆಲೆಸಿದ್ದು, ಶಾಂತಿ ಸಭೆಯ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಗ್ರಾಮದ ಮುಖಂಡರೆಲ್ಲಾ ತೀರ್ಮಾನಿಸಿದ್ದಾರೆ. 

ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ ಏಗೋನಗೌಡ ಪಾಟೀಲ್, “ಜಗತ್ತಿನಲ್ಲಿಯೇ ಅತ್ಯಂತ ಪ್ರಬಲ ಮತ್ತು ಶಕ್ತಿಯುತ ಸಂವಿಧಾನವನ್ನು ಭಾರತ ಹೊಂದಿದೆ. ಭಾರತದದಷ್ಟು ಸದೃಢ, ಪ್ರಬಲ ಪ್ರಜಾಪ್ರಭುತ್ವ ಎಲ್ಲೂ ಕಾಣಸಿಗುವುದಿಲ್ಲ. ಇದಕ್ಕೆ ಮೂಲ ಬುನಾದಿ ಬಾಬಾ ಸಾಹೇಬರು ಬರೆದ ‘ಸಂವಿಧಾನ’. ಸಂವಿಧಾನದ ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡಿದೆ. ಆ ಹಕ್ಕುಗಳ ಮೂಲಕ ನಾವೆಲ್ಲರೂ ಜೀವಿಸಬೇಕಾಗಿದೆ” ಎಂದು ಹೇಳಿದ್ದಾರೆ.  

ಈ ಸುದ್ದಿ ಓದಿದ್ದೀರಾ?: ಬೀದರ್ | ನಗರಾಭಿವೃದ್ಧಿ ಮರೀಚಿಕೆ: ನಗರಸಭೆ ವಿರುದ್ಧ ಕರವೇ ಆಕ್ರೋಶ

“ಸಂವಿಧಾನ ಜಾರಿಗೊಂಡು ಏಳು ದಶಕಗಳು ಕಳೆದರೂ ಅಸ್ಪೃಶ್ಯತೆ ಜೀವಂತವಾಗಿದೆ ಎಂದರೆ ನಿಜಕ್ಕೂ ನಾಚಿಕೆಗೇಡು. ಎಲ್ಲರನ್ನೂ ಸಮಾನತೆಯಿಂದ ಕಾಣುವ ದೃಷ್ಟಿ ಬೆಳಸಿಕೊಳ್ಳಬೇಕು. ಗ್ರಾಮದಲ್ಲಿ ಯಾವುದೋ ಒಂದು ಗುಡಿಯ ಪ್ರವೇಶಕ್ಕಾಗಿ ಈ ರೀತಿ ಹೊಡೆದಾಡಿಕೊಂಡು ಸಾಧಿಸುವುದೇನಿದೆ?” ಎಂದು ದಲಿತ ಸಮುದಾಯದ ಹೋರಾಟಗಾರ, ಚಿಂತಕ ಎಸ್.ಎನ್ ಬಳ್ಳಾರಿ ಹೇಳಿದ್ದಾರೆ.

Image
Gadag
ಪ್ರಬಲ ಜಾತಿಯವರು ನಡೆಸಿದ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ದಲಿತರು

“ಗ್ರಾಮದಲ್ಲಿ ಬಡತನ ತುಂಬಿ ತುಳುಕುತ್ತಿದೆ. ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಇವುಗಳ ಬಗ್ಗೆ ಗಮನಹರಿಸಬೇಕಿದೆ. ಅಸ್ಪೃಶ್ಯತೆ ಆಚರಣೆ ಮಾಡಿ ಸಾಧಿಸುವುದಾದರೂ ಏನು? ಕನಿಷ್ಠ ಮಾನವತ್ವವನ್ನು ಬೆಳೆಸಿಕೊಳ್ಳಬೇಕು” ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಹೇಳಿದ್ದಾರೆ.

ಶಾಂತಿ ಸಭೆಯ ನಂತರ ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲಿ ದಲಿತರು ಶ್ರೀ ಗುರು ಶಿವರುದ್ರ ಶಿವಯೋಗೆಶ್ವರ ಮಠಕ್ಕೆ ಪ್ರವೇಶ ಮಾಡಿದರು.

ಶಾಂತಿ ಸಭೆಯಲ್ಲಿ ರಾಜು ಕಲಾಲ, ವಾಸು ಜೋಗಣ್ಣನವರ, ಉಮೇಶಗೌಡ ಪಾಟೀಲ್, ಪ್ರವೀಣ್ ಯಾವಗಲ್, ಎಪ್.ವೈ.ದೊಡ್ಡಮನಿ, ತಹಶೀಲ್ದಾರ್ ಎ.ಡಿ ಅಮರವಾಡಗಿ, ಸಿಪಿಐನ ಮಲ್ಲಯ್ಯ ಮಠಪತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಬಿ.ಬಡಿಗೇರ ಮತ್ತಿತ್ತರು ಉಪಸ್ಥಿತರಿದ್ದರು. 

ಮಾಸ್‌ ಮೀಡಿಯಾ ಗದಗ ಜಿಲ್ಲಾ ಸಂಯೋಜಕ ಶರಣು ಸಂಗನಾಳ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
2 ವೋಟ್