ಗದಗ | ಸರ್ಕಾರಿ ಶಾಲಾ ಶಿಕ್ಷಕಿಯ ಬೇಜವಾಬ್ದಾರಿ ವರ್ತನೆ: ಗ್ರಾಮಸ್ಥರ ಆಕ್ರೋಶ

  • ಶಿಕ್ಷಕಿಯ ವರ್ತನೆಯಿಂದ ಬೇಸತ್ತ ಪೋಷಕರು
  • ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದ ಗ್ರಾಮಸ್ಥರು

ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಸರಿಯಾದ ಸಮಯಕ್ಕೆ ಶಾಲೆಗೆ ಬರದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. 

ಬೆಳವಣಿಕೆ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಜಿ.ಎನ್ ಮಾನೆ ಎಂಬುವವರು ಶಾಲೆಯ ನಿಯಮಗಳನ್ನು ಉಲ್ಲಂಘಿಸಿ ಬೇಜವಾಬ್ದಾರಿ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ರೋಣ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ.

"ಶಾಲೆಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ನಾಲ್ಕು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಜಿ.ಎನ್ ಮಾನೆ ಅವರು ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಿಲ್ಲ. ಪದೇ ಪದೇ ಸಾಂದರ್ಭಿಕ ರಜೆ, ಗಳಿಕೆ ರಜೆ ಹಾಗೂ ಸಿಎಲ್ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ತಿಂಗಳುಗಟ್ಟಲೆ ಅನಧಿಕೃತ ಗೈರು ಹಾಜರಾಗಿದ್ದರು” ಎಂದು ಗ್ರಾಮಸ್ಥರು ಪತ್ರದಲ್ಲಿ ದೂರಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಸರ್ಕಾರಿ ಶಾಲೆಯ ಎಲ್ಲ ವರ್ಗದ ಮಕ್ಕಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಬೇಕು: ಶಿಕ್ಷಣ ಸಚಿವ ಬಿ ಸಿ ನಾಗೇಶ್

ವಿಷಯದ ಕುರಿತು ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಪಾಲಕರು, "ಮುಖ್ಯ ಶಿಕ್ಷಕಿ ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಇದರಿಂದ ನಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು? ಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗಾದರೂ ಸೇರಿಸಬಹುದು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಸ್‌ಡಿಎಮ್‌ಸಿ ಸದಸ್ಯರಾದ ಸಂಕನಗೌಡ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "ನಮ್ಮ ಶಾಲಾ ಶಿಕ್ಷಕಿಯ ಮೇಲೆ ಇರುವ ಆರೋಪದ ಬಗ್ಗೆ ಪ್ರಶ್ನೆ ಮಾಡಿದರೆ, ಉಡಾಫೆಯ ಉತ್ತರ ನೀಡುತ್ತಾರೆ. ಇದೇ ಊರಿನಲ್ಲಿ ಬಾಡಿಗೆ ಮನೆ ಮಾಡಿಕೊಳ್ಳಲು ಸಲಹೆ ನೀಡಿದರೇ, ‘ನನಗೆ ಮನೆ ಮಾಡಲು ಆಗುವುದಿಲ್ಲ ನಾನು ಬಸ್ಸಿಗೆ ಬರುತ್ತೇನೆ. ಹಾಗಾಗಿ ಲೇಟ್‌ ಆಗುತ್ತದೆ. ನೀವು ಏನಾದರೂ ಮಾಡಿಕೊಳ್ಳಿ’ ಎಂಬ ಗರ್ವದ ಉತ್ತರ ನೀಡುತ್ತಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾದಿಕಾರಿಗಳಿಗೆ ಮನವಿ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180