
- 48 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿದ ಪೊಲೀಸರು
- ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿತ್ತು
ಕಳೆದ ಎರಡು ದಿನಗಳ ಹಿಂದೆ ಗದಗ್ನ ಜೆಟಿ ಮಠದ ರಸ್ತೆಯಲ್ಲಿ ಯುವಕನೊಬ್ಬನನ್ನು ಕೊಲೆ ಮಾಡಿ ತಲೆತಪ್ಪಿಸಿಕೊಂಡಿದ್ದ ಆರೋಪಿಯನ್ನು ಗದಗ ಪೊಲೀಸರು ಬಂಧಿಸಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದ ಜವುಳಗಲ್ಲಿ ಎಂಬಲ್ಲಿ ಗುರುವಾರ ತಡರಾತ್ರಿ ಯುವಕನೊಬ್ಬನನ್ನು ಕೊಲೆ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಮೃತನನ್ನು ಸ್ಥಳೀಯ ನಿವಾಸಿ ಸಂದೀಪ ಮುಂಡೆವಾಡಿ ಎಂದು ಗುರುತಿಸಿದ್ದರು. ಆರೋಪಿಗಾಗಿ ಶೋಧ ಆರಂಭಿಸಿದ್ದರು.
ಆರೋಪಿಯನ್ನು ಬಂಧಿಸಿ ವಿಚಾರಣೆ ಒಳಪಡಿಸಲಾಗಿದ್ದು, ಸಂದೀಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಗರದ ಜೆಟಿ ಮಠ ರಸ್ತೆಯಲ್ಲಿ ಸಂದೀಪ ಮುಂಡೆವಾಡಿ ಮತ್ತು ಸಾಗರ ಮುಂಡೆವಾಡಿ ಎಂಬ ಇಬ್ಬರು ಆಟೋ ಚಾಲಕರ ನಡುವೆ ಯಾವುದೋ ವಿಷಯಕ್ಕೆ ಜಗಳ ಆರಂಭವಾಗಿದೆ. ಜಗಳವು ವಿಕೋಪಕ್ಕೆ ತಿರುಗಿ ಸಂದೀಪ ಮುಂಡೆವಾಡಿಯನ್ನು ಸಾಗರ ಮುಂಡೆವಾಡಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ" ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಬೆಳಗಾವಿ | ಮಚ್ಚಿನಿಂದ ಕೊಚ್ಚಿ ಮಗನಿಂದಲೇ ತಂದೆಯ ಕೊಲೆ
ಕೆಲವು ವರ್ಷಗಳಿಂದ ಸಾಗರ ಮತ್ತು ಸಂದೀಪನ ಕುಟುಂಬಗಳ ನಡುವೆ ವೈಯಕ್ತಿಕ ಕಲಹಗಳಿದ್ದವು ಎನ್ನಲಾಗಿದೆ. ಇದೇ ವಿಷಯವಾಗಿ ಜಗಳ ಪ್ರಾರಂಭವಾಗಿ ಕೊಲೆ ನಡೆದಿದೆ" ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣವನ್ನು ಭೇದಿಸಲು ಗದಗ ಎಸ್ಪಿ ಡಿ ಶಿವಪ್ರಕಾಶ ದೇವರಾಜು ಅವರು ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದರು. ಈ ತಂಡವು ಕೇವಲ ಎರಡು ದಿನಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.