
- ಆಸ್ಪತ್ರೆಯಲ್ಲಿ 100 ಹಾಸಿಗೆಗಳಿವೆ
- ಉತ್ತಮ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ
ಗದಗ, ಕೊಪ್ಪಳ, ಬಾಗಲಕೋಟ, ಹಾವೇರಿ ಸೇರಿದಂತೆ ಮತ್ತಿತರ ಜಿಲ್ಲೆಗಳ ಮಹಿಳೆಯರು ಮತ್ತು ಮಕ್ಕಳಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದ ದಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಕೆಲ ಸೌಲಭ್ಯಗಳು ಸ್ಥಳಾಂತರಗೊಂಡಿದೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿದೆ.
ಸರ್ಕಾರಿ ಆಸ್ಪತ್ರೆಯ ವಿವಿಧ ಸೌಲಭ್ಯಗಳನ್ನು ನಗರದ ಹೊರವಲಯದಲ್ಲಿರುವ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ಗೆ ಸ್ಥಳಾಂತರಿಸಲಾಗಿದೆ. ಇದರಿಂದ ಜನ ಅದರಲ್ಲೂ ಗರ್ಭಿಣಿಯರು ಕಂಗಾಲಾಗಿದ್ದಾರೆ. ಹೊಸ ಆಸ್ಪತ್ರೆಯಲ್ಲಿ ದಂಡಪ್ಪ ಮಾನ್ವಿ ಅಸ್ಪತ್ರೆಯಲ್ಲಿ ದೊರೆಯುತ್ತಿದ್ದ ಉತ್ತರ ಚಿಕಿರತ್ಸೆ ದೊರೆಯುವುದೇ ಎಂಬ ಆತಂಕ ಮನೆಮಾಡಿದೆ.
ದಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿತ್ತು. ಹಾಗಾಗಿ, ಆಸ್ಪತ್ರೆಯ ಸೇವೆಯ ಗುಣಮಟ್ಟ ನೋಡಿ ಹಿಂದಿನ ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಮ್ಮ ಪತ್ನಿಯ ಹೆರಿಗೆಯನ್ನು ಇದೇ ಆಸ್ಪತ್ರೆಯಲ್ಲಿ ಮಾಡಿಸಿದ್ದರು. ಆದರೆ, ಈಗ ಆಸ್ಪತ್ರೆಯ ಸೌಲಭ್ಯಗಳು ಜಿಮ್ಸ್ ಆಸ್ಪತ್ರೆಗೆ ಸ್ಥಳಾಂತರಗೊಂಡಿವೆ.
ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪುರ ಮಾತನಾಡಿ, “ಆಸ್ಪತ್ರೆಯಲ್ಲಿ 100 ಹಾಸಿಗೆಗಳಿವೆ. ಒಂದು ವರ್ಷದ ಹಿಂದೆ ಜನಸಂಪರ್ಕ ಸಭೆ ಇದ್ದಾಗ ಅಧಿಕಾರಿಗಳು ಇಲ್ಲಿರುವ ಸೌಲಭ್ಯಗಳನ್ನು ಈ ಆಸ್ಪತ್ರೆಯಲ್ಲಿಯೇ ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಎನ್ಐಸಿಯು, ಸಿಸೇರಿಯನ್, ಹೆರಿಗೆ ಸೇರಿದಂತೆ ಎಲ್ಲ ಸೇವೆಗಳನ್ನು ಜಿಮ್ಸ್ಗೆ ಸ್ಥಳಾಂತರಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
"2018ರಲ್ಲಿ 19 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆಯನ್ನು ನವೀಕರಣಗೊಳಿಸಲಾಗಿದೆ. ಸ್ತ್ರೀರೋಗ ತಜ್ಞರು ಹಾಗೂ ಸಿಬ್ಬಂದಿಗಾಗಿ ನಿರ್ಮಿಸಿರುವ ಕ್ವಾರ್ಟರ್ಸ್ ಕೂಡ ಖಾಲಿ ಇದೆ. ಆಸ್ಪತ್ರೆ ಸೌಲಭ್ಯಗಳನ್ನು ಸ್ಥಳಾಂತರ ಮಾಡಬೇಕು ಎಂದಿದ್ದರೇ, ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡಿದ್ದು ಏಕೆ?" ಎಂದು ಕಿಡಿಕಾರಿದರು.
"1932ರಲ್ಲಿ ಮಾನ್ವಿ ಕುಟುಂಬದವರು ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗಾಗಿ ಗದಗ-ಬೆಟಗೇರಿ ನಗರ ಸಭೆಗೆ (ಜಿಬಿಸಿಎಂಸಿ) ಭೂಮಿಯನ್ನು ದಾನ ಮಾಡಿದ್ದರು. ಕೆಲವು ದಶಕಗಳಲ್ಲಿ ಇದನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಈಗ ಅದನ್ನು ಸ್ಥಳಾಂತರಿಸುವ ಬದಲು ಜಿಬಿಸಿಎಂಸಿಗೆ ಹಿಂತಿರುಗಿಸಬೇಕು" ಎಂದು ಅವರು ಹೇಳಿದರು.
ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ಮಾತನಾಡಿ, “ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರ ನಡುವೆ ಮಾತ್ರ ಸ್ತ್ರೀರೋಗ ಸಮಾಲೋಚನೆಯಂತಹ ಸೇವೆಗಳನ್ನು ನೀಡುತ್ತಿದ್ದಾರೆ. ಯಾವುದೇ ರೋಗಿಯು ಸಂಜೆ 4 ಗಂಟೆಯ ನಂತರ ಬಂದರೆ, ಅವರನ್ನು ಜಿಮ್ಸ್ಗೆ ಕಳುಹಿಸುತ್ತಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರಸ್ತೆಗಳಲ್ಲಿ ಮತ್ತೆ ಕಾಣಿಸಿಕೊಂಡ 'ಪೇಸಿಎಂ' ಪೋಸ್ಟರ್ಗಳು
“ಸೌಲಭ್ಯಗಳ ಕೊರತೆಯಿಂದ ಕೆಲವು ತಿಂಗಳ ಹಿಂದೆ ರೋಗಿಯೊಬ್ಬರು ಸಾವನ್ನಪ್ಪಿದ್ದರು. ಗರ್ಭಿಣಿಯರು ಆಸ್ಪತ್ರೆಗೆ ಭೇಟಿ ನೀಡಲು ಬಯಸಿದರೆ ಜಿಮ್ಸ್ಗೆ ತೆರಳಬೇಕು. ಆದರೆ, ಜಿಮ್ಸ್ಗೆ ಹೋಗಿ-ಬರಲು ಆಟೋ ರಿಕ್ಷಾ ಶುಲ್ಕ ₹400 ಖರ್ಚು ಮಾಡಬೇಕಾಗುತ್ತದೆ. ಹದಗೆಟ್ಟ ರಸ್ತೆಗಳಲ್ಲಿ ರೋಗಿಗಳು ಪ್ರಯಾಣಿಸಬೇಕಾಗಿದೆ” ಎಂದು ವಿವರಿಸಿದರು.
ದಂಡಪ್ಪ ಮಾನ್ವಿ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಕೆಲ ಸೌಲಭ್ಯಗಳು ಸ್ಥಳಾಂತರಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ, ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ತಿಳಿಸಿದರು.