ಇದು ನಮ್ಮ ಸೌಹಾರ್ದ | ಭಾವೈಕ್ಯತೆ ಸಾರಿದ ಕೋಟೆನಾಡು ಗಜೇಂದ್ರಗಡ

  • ಪೈಗಂಬರ್‌, ಬಸವಣ್ಣ ಸಾರಿದ ಸಂದೇಶ ಒಂದೇ ಎಂದ ಜನ
  • ಶರೀಫಜ್ಜ, ಸೂಫಿ-ಸಂತರು, ದಾಸರು ನೆಲೆಸಿದ ನಾಡು ಕರ್ನಾಟಕ

ಗಜೇಂದ್ರಗಡ ನಗರವು ಮೊದಲಿಂದಲೂ ಇಲ್ಲಿನ ಭಾವೈಕತೆಯಿಂದ ಕೂಡಿಬಾಳುವಂಥ ನಗರ. ಇಲ್ಲಿನ ವಿಶೇಷವೆಂದರೆ, ನಗರದಲ್ಲಿ 18 ಮಸೀದಿಗಳು, 18 ಹಿಂದು ದೇವಸ್ಥಾನಗಳು, 18 ಬಾವಿಗಳಿವೆ. ಇಲ್ಲಿನ ಜನರು ಯಾವುದೇ ಹಬ್ಬ ಆಚರಣೆಗಳಲ್ಲಿ ಅನ್ಯೋನ್ಯತೆಯಿಂದ ಪಾಲಗೊಂಡು ಶಾಂತಿ-ಸೌಹಾರ್ದತೆಯಿಂದ ಆಚರಿಸಿ ಸಂಭ್ರಮಿಸುತ್ತಾರೆ. 

ಗದಗ ಜಿಲ್ಲೆಯಲ್ಲಿರುವ ನಗರವನ್ನು ಕೋಟೆನಾಡು ಎಂತಲೇ ಕರೆಯುತ್ತಾರೆ. ಇಲ್ಲಿ ಇದೂವರೆಗೂ ಯಾವುದೇ ಕೋಮುಗಲೆಬೆಗೆ ಅವಕಾಶ ಮಾಡಿಕೊಟ್ಟಿಲ್ಲ. ಇಲ್ಲಿನ ಜನರ ಬಾಂಧವ್ಯ ಯಾವ ರೀತಿಯೆಂದರೆ, ಎಲ್ಲರೂ ಕೂಡಿ ಬಾಳುತ್ತ ಚಿಕ್ಕವ್ವ-ದೊಡ್ಡವ್ವ, ಕಾಕ-ಕಾಕಿ, ಅಣ್ಣ-ತಮ್ಮ, ದಾದಾ-ದೀದಿ ಎಂದು ಕರೆದುಕೊಳ್ಳುತ್ತ ಜಾತಿ-ಧರ್ಮಗಳನ್ನು ಮೀರಿ ಒಂದೇ ಕುಟುಂಬದ ಸದಸ್ಯರಂತೆ ಸಂಬಂಧಗಳನ್ನು ಬೆಳೆಸಿಕೊಡಿದ್ದಾರೆ.

ಇತ್ತೀಚೆಗೆ, ರಾಜ್ಯದಲ್ಲಿ ಗದ್ದಲ ಎಬ್ಬಿಸಿದ ಹಿಜಾಬ್, ಹಲಾಲ್‌ ಕಟ್‌ನಂತಹ ವಿವಾದಗಳೂ ಇಲ್ಲಿನ ಜನರ ಸೌಹಾರ್ದವನ್ನು ಕದಡುವಲ್ಲಿ ವಿಫಲವಾದವು. ರಾಜ್ಯದ ಹಲವೆಡೆ ನಡೆದ ಗದ್ದಲಗಳಿಗೆ ಪ್ರತಿಯಾಗಿ ನಗರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವಕೇಂದ್ರ, ದಲಿತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಒಗ್ಗೂಡಿ ರಂಝಾನ್‌ ಮತ್ತು ಬಸವ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು. 

ಜಾಮಿಯ ಮಸೀದಿಯಿಂದ ಈದ್ಗಾ ಮೈದಾನದವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ಪೈಗಂಬರ್‌ ಸಾರಿದ ಸಂದೇಶವು ಒಂದೇ, ಬಸವಣ್ಣನವರು ಸಾರಿದ ಸಂದೇಶವು ಒಂದೇ ಎನ್ನುವ ಸೌಹಾರ್ದಯುತ ಘೋಷಣೆಗಳನ್ನು ಮೊಳಗಿಸಿದರು. 

ಕೋಮುದ್ವೇಷ ಹೊತ್ತಿ ಉರಿಯುತ್ತಿರುವಾಗ ಶಾಂತಿ-ಸೌಹಾರ್ದತೆಯ, ಭಾವೈಕ್ಯತೆಯ, ಕೂಡಿ ಬಾಳುವ ಸಂದೇಶ ಸಾರುವುದು ಅತ್ಯಗತ್ಯ. ಅದನ್ನು ನಾಡಿನಾದ್ಯಂತ ಸಾರಬೇಕು ಎಂದು ಜಾಥಾ ಸಾರಿ ಹೇಳಿದೆ. 

ಕರ್ನಾಟಕವು ಬಸವಣ್ಣನ ನಾಡು, ಶರೀಫಜ್ಜ ನೆಲೆಸಿದ ಬೀಡು, ಸೂಫಿ-ಸಂತರು-ದಾಸರು ಓಡಾಡಿದ ಈ ನೆಲದಲ್ಲಿ ಐಕ್ಯತೆಯನ್ನು ಉಳಿಸಲು ನಾವೆಲ್ಲರೂ ಶ್ರಮಿಸಬೇಕು. ಹೋರಾಡಬೇಕು ಎಂದು ಟೆಕ್ಕೇದ್‌ ದರ್ಗಾದ ಹಜರತ್‌ ನಿಜಾಮುದೀನ್ ಷಾ ಮಕಾಂದಾರ್‌ ಹೇಳಿದರು. 

ಕಾರ್ಯಕ್ರಮದಲ್ಲಿ ಮೈಸೂರು ಮಠದ ಜಗದ್ಗುರು ವಿಜಯಮಹಾಂತ ಶ್ರೀಗಳು, ಅಂಜುಮನ್‌ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಡಿ.ಕೋಲಕಾರ್‌, ಮಾಸುಮಲಿ ಮದಗಾರ, ಹಸನ್‌ ತಟಗಾರ, ದಾವಲಸಾಬ್‌ ತಾಳಿಕೋಟೆ, ಬಸವರಾಜ ಶೀಲವಂತರ ಇನ್ನೂ ಇತರ ಸಂಘಟನೆಯ ಮುಖಂಡರುಗಳು ಪಾಲ್ಗೊಂಡಿದ್ದರು.

ಮಾಸ್‌ ಮೀಡಿಯಾ ರಾಯಚೂರು ಜಿಲ್ಲಾ ಸಂಯೋಜಕ ಲಕ್ಷ್ಮಣ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್