ಅರಣ್ಯಭೂಮಿ ಹಕ್ಕು | ಗಾಂಧಿ ಜಯಂತಿಯಂದು ಸ್ಪೀಕರ್‌ ಕಾಗೇರಿ ಮನೆಮುಂದೆ ಧರಣಿಗೆ ಹೋರಾಟಗಾರರ ನಿರ್ಧಾರ

  •  ಅರಣ್ಯಭೂಮಿ ಹಕ್ಕು ಹೋರಾಟ; ಸ್ಪೀಕರ್‌ ಮನೆ ಮುಂದೆ ಧರಣಿ
  •  ಸುಪ್ರೀಂಕೋರ್ಟ್‌ನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಆಗ್ರಹ

ಕಳೆದ 32 ವರ್ಷಗಳಿಂದ ಅರಣ್ಯಭೂಮಿ ಹಕ್ಕುಪತ್ರಕ್ಕಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿರುವ ಉತ್ತರಕನ್ನಡ ಜಿಲ್ಲೆಯ ಶಿರಸಿ ಭಾಗದ ಅರಣ್ಯವಾಸಿಗಳು, ಅಕ್ಟೋಬರ್‌ 02ರ ಗಾಂಧಿ ಜಯಂತಿಯಂದು ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನೇತೃತ್ವದಲ್ಲಿ ಅರಣ್ಯವಾಸಿಗಳು ಮೂರು ದಶಕಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಮಳೆಗಾಲದ ಅಧಿವೇಶನದಲ್ಲಿ ನಮ್ಮ ಸಮಸ್ಯೆ ಬಗ್ಗೆ ಚರ್ಚಿಸಿ, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಒತ್ತಾಯಿಸಿದ್ದರು. ಆ ಬಗ್ಗೆ ಪ್ರಶ್ನೆ ಎತ್ತುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಅರಣ್ಯಭೂಮಿ ಹಕ್ಕು ಹೋರಾಟಗಾರರು ಮನವಿ ಮಾಡಿದ್ದರು.

ಆದರೆ, ಅಧಿವೇಶನದಲ್ಲಿ ಅರಣ್ಯವಾಸಿಗಳ ಅಳಲಿನ ಬಗ್ಗೆ ಸರ್ಕಾರ ಕಿವಿಗೊಡದಿದ್ದ ಹಿನ್ನೆಲೆಯಲ್ಲಿ ಗಾಂಧಿ ಜಯಂತಿ ದಿನ ಬೃಹತ್‌ ಮೆರವಣಿಗೆ ಮತ್ತು ಧರಣಿ ನಡೆಸಲು ಮುಂದಾಗಿದ್ದಾರೆ.

ಈ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ ರವೀಂದ್ರ ನಾಯ್ಕ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "ಮಹಾತ್ಮ ಗಾಂಧಿ ಜಯಂತಿಯಂದು ಬಿಡ್ಕಿಬೈಲಿನ ಗಾಂಧಿ ಪ್ರತಿಮೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ನಂತರ ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆ ಮುಂದೆ ಧರಣಿ ಕೂರುತ್ತೇವೆ" ಎಂದು ಮಾಹಿತಿ ನೀಡಿದರು.

AV Eye Hospital ad

ಈ ಸುದ್ದಿ ಓದಿದ್ದೀರಾ? ಶಿರಸಿ| ಮಾರಿಕಾಂಬೆ ಮುಂದೆ ಅರಣ್ಯವಾಸಿಗಳ ಉರುಳು ಸೇವೆ; ಭೂಮಿಹಕ್ಕಿಗಾಗಿ ಸರ್ಕಾರಕ್ಕೆ ಆಗ್ರಹ

ಅರಣ್ಯವಾಸಿಗಳ ಹಕ್ಕೊತ್ತಾಯ

ಅರಣ್ಯವಾಸಿಗಳಿಗೆ ಭೂಮಿಹಕ್ಕು ನೀಡದಂತೆ ಮತ್ತು ಅರಣ್ಯ ಪ್ರದೇಶದಲ್ಲಿ ವಾಸುತ್ತಿರುವವರನ್ನು ಹೊರಹಾಕಿ, ಅಲ್ಲಿ ಅರಣ್ಯೀಕರಣ ಮಾಡಬೇಕು ಎಂದು ಎಂಟು ಪರಿಸರವಾದಿ ಸಂಘಟನೆಗಳು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿವೆ.

ಜೊತೆಗೆ ಅರ್ಜಿ ತಿರಸ್ಕೃತಗೊಂಡವರನ್ನು ಅರಣ್ಯದಿಂದ ಹೊರಹಾಕುವುದಾಗಿ ಕರ್ನಾಟಕ ಸರ್ಕಾರ ಕೂಡ ಅಫಿಡವಿಟ್‌ ಸಲ್ಲಿಸಿದೆ. ಇದರಿಂದಾಗಿ ಶಿರಸಿ ಭಾಗದ ಅರಣ್ಯ ಭೂಮಿ ಸಾಗುವಳಿದಾರರೂ ಸೇರಿದಂತೆ ರಾಜ್ಯದ ಸುಮಾರು ಐದು ಲಕ್ಷ ಜನರು ನಿರಾಶ್ರಿತರಾಗುವ ಆತಂಕವಿದೆ. ಹಾಗಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಒತ್ತಾಯಿಸಿ ಕಳೆದ 32 ವರ್ಷಗಳಿಂದ ಅರಣ್ಯಭೂಮಿ ಹೋರಾಟಗಾರರು ಹೋರಾಟ ನಡೆಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app