
- ಕ್ರಮ ಕೈಗೊಳ್ಳದ ಮುಖ್ಯ ಅಧಿಕಾರಿ ವಿರುದ್ಧ ಆಕ್ರೋಶ
- ಜಿಲ್ಲಾಡಳಿತಕ್ಕೆ ದೂರು ನೀಡಲು ನಿರ್ಧರಿಸಿದ ವಿರೋಧ ಪಕ್ಷದ ಸದಸ್ಯರು
ಮಹಿಳೆಯರಿಗೂ ಸಮಾನ ಅವಕಾಶ, ಅಧಿಕಾರ ದೊರೆಯಬೇಕೆಂಬ ಉದ್ದೇಶದಿಂದ ರಾಜಕೀಯದಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ, ಮಹಿಳೆಯರು ಚುಣಾವಣೆಯಲ್ಲಿ ಗೆದ್ದು, ಅಧಿಕಾರ ನಡೆಸಲು ಎಲ್ಲ ಅರ್ಹತೆ ಇದ್ದಾಗಲೂ ಅಧಿಕಾರ ಅನುಭವಿಸುವವರು ಮಾತ್ರ ಬಹುತೇಕ ಅವರ ಗಂಡಂದಿರೇ ಎಂಬ ಆರೋಪವಿದೆ. ಅದನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಸಾಕ್ಷೀಕರಿಸಿದೆ.
ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ ಅವರ ಪತಿ ಸಂದೀಪ ನಗರಸಭೆಯ ಎಲ್ಲ ವಿಚಾರಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದಾಗಿ, ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳು ರೋಸಿಹೋಗಿದ್ದಾರೆ. ನಗರಸಭೆಯ ವಿಪಕ್ಷ ಸದಸ್ಯರು ಅಧ್ಯಕ್ಷೆ ವಿರುದ್ಧ ಜಿಲ್ಲಾಡಳಿತಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿರುವ ಎಎಪಿ ಮುಖಂಡ ಶರಣಪ್ಪ ಸಜ್ಜಿಹೊಲ, "ಮಹಿಳಾ ಜನಪ್ರತಿನಿಧಿಗಳ ಬದಲಿಗೆ ಅವರ ಗಂಡಂದಿರ ಹಸ್ತಕ್ಷೇಪ ಮಾಡುತ್ತಿರುವುದು ಈಗಂತೂ ಮೀತಿಮೀರಿದೆ. ಪ್ರಜಾಪ್ರಭುತ್ವದ ಮೂಲ ಉದ್ದೇಶಕ್ಕೆ ಧಕ್ಕೆ ಆಗುತ್ತಿದೆ. ಗಂಡಂದಿರ ಹಸ್ತಕ್ಷೇಪದಿಂದ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿರುವುದನ್ನು ಒಪ್ಪಿಕೊಂಡರೂ ಇದುವರೆಗೆ ಮುಖ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ" ಎಂದು ಕಿಡಿಕಾರಿದ್ದಾರೆ.
"ನಗರಸಭೆಯ ಮಹಿಳಾ ಸದಸ್ಯರು ಮತ್ತು ಅಧ್ಯಕ್ಷರ ಆಡಳಿತದಲ್ಲಿ ಅವರ ಗಂಡಂದಿರು ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ದಿನೇ ದಿನೇ ಆರೋಪಗಳು ಹೆಚ್ಚಾಗುತ್ತಿವೆ. ಈ ವಿಷಯ ತಮ್ಮ ಗಮನಕ್ಕೆ ಬಂದಿದ್ದರೂ ಮೌನವಾಗಿದ್ದಾರೆ. ಅಲ್ಲದೆ, ಈ ಬಗ್ಗೆ ದೂರುಗಳನ್ನು ಸ್ವೀಕರಿಸಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಲ್ಲಿ ಮುಖ್ಯ ಅಧಿಕಾರಿಗಳ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ" ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಪುರಸಭೆಯ ಪೌರಾಯುಕ್ತ ಆರ್ ವಿರುಪಾಕ್ಷ ಮೂರ್ತಿಯನ್ನು ಈದಿನ.ಕಾಮ್ ಪ್ರತಿನಿಧಿ ಸಂಪರ್ಕಿಸಿದ್ದು, "ಆರೋಪ, ಪ್ರತ್ಯಾರೋಪಗಳು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆದಿವೆ. ಇದಕ್ಕೂ ನಮಗೂ ಸಂಬಂಧ ಇಲ್ಲ. ಪ್ರತಿಪಕ್ಷದ ಸದಸ್ಯರು ಜಿಲ್ಲಾಡಳಿತಕ್ಕೆ ದೂರು ನೀಡುವುದಾಗಿಯೂ ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ವರದಿ ಕೇಳಿದರೆ, ಕೊಡುತ್ತೇವೆ. ಆಡಳಿತದಲ್ಲಿ ಯಾರ ಹಸ್ತಕ್ಷೇಪವೂ ನಡೆದಿಲ್ಲ. ಪಕ್ಷಗಳ ವ್ಯವಹಾರವನ್ನು ಹೊರಗಡೆ ಇಟ್ಟುಕೊಳ್ಳಲು ಹೇಳಿದ್ದೇನೆ. ಹೀಗಾಗಿ ಯಾವುದೇ ಯೋಜನೆಗಳ ಅನುಷ್ಠಾನ ಮತ್ತು ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗಿಲ್ಲ" ಎಂದು ತಿಳಿಸಿದ್ದಾರೆ.