ಇದು ನಮ್ಮ ಸೌಹಾರ್ದ | ಒಂದೇ ದೈವವನ್ನು ಪೂಜಿಸುವ ಹಿಂದು-ಮುಸಲ್ಮಾನರು

  • ಹಾಜಿ ಸರ್ವರ್ ಎಂದು ಮುಸಲ್ಮಾನರು, ಹಾದಿ ಶರಣ ಎಂದು ಹಿಂದುಗಳು ಪೂಜಿಸುತ್ತಾರೆ
  • ಎರಡು ಧರ್ಮಗಳ ನಡುವಿನ ಭಾವೈಕ್ಯತೆ ಸಾರುವ ಸ್ಥಳ ಹಾಜಿ ಸರ್ವರ್ ಗುಡ್ಡ

ಬೆಟ್ಟದ ಮೇಲಿನ ದರ್ಗಾಕ್ಕೆ ಹಿಂದೂಗಳು ಮತ್ತು ಬೆಟ್ಟದ ಕೆಳಗಿನ ನಾಗರಕಟ್ಟೆಗೆ ಮುಸಲ್ಮಾನರು ಪೂಜೆ ಸಲ್ಲಿಸುವ ಧಾರ್ಮಿಕ ಸೌಹಾರ್ದ ಪದ್ದತಿಗೆ ಕಲಬುರಗಿ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮ ಸಾಕ್ಷಿಯಾಗಲಿದೆ.

ಬೆಟ್ಟದ ಮೇಲಿರುವ ದರ್ಗಾ - ಹಿಂದು, ಮುಸ್ಲಿಮರ ಭಾವೈಕ್ಯದ ಸಂಕೇತವಾಗಿದೆ. ಇಲ್ಲಿನ ಸಂತರನ್ನು ಮುಸ್ಲಿಮರು ಹಾಜಿ ಸರ್ವರ್ ಎಂದು ಕರೆದರೆ, ಹಿಂದೂಗಳು ಹಾದಿ ಶರಣ ಎಂದು ಆರಾಧಿಸುತ್ತಾರೆ. 

Eedina App

ಪ್ರತಿವರ್ಷ ಗ್ರಾಮದ ಎಲ್ಲ ಸಮುದಾಯದವರು ಸೇರಿ ಗಂಧೋತ್ಸವವನ್ನು ಆಚರಿಸುವುದು ಇಲ್ಲಿನ ಪದ್ದತಿ. ಇದರೊಂದಿಗೆ ಪಂಚಕಳಶ ಪೂಜೆ ನಡೆಯುತ್ತದೆ. ಇದು ನೋಡುಗರಿಗೆ ಮೈ ನವಿರೇಳಿಸುತ್ತದೆ.  

ಗ್ರಾಮದ ನಡುವೆ ಇರುವ ಈರೋಡೇಶ್ವರ ದೇವಸ್ಥಾನದ ಕಟ್ಟಡದ ಮೇಲೆ ದರ್ಗಾದ ಕಳಸ ಮತ್ತು ಎರಡು ಬೆಳ್ಳಿ ಕುದುರೆಯನ್ನಿಟ್ಟು ಪೂಜಿಸುತ್ತಾರೆ. ನಂತರ ಮುಸಲ್ಮಾನರು ಕುರಾನ್ ಪಠಿಸಿ ದೇವಸ್ಥಾನದಿಂದ ಕಳಸಗಳ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ಹಾಜಿ ಸರ್ವರ್‌ಗೆ ಅರ್ಪಿಸಿದ್ದ ಹೂಗಳನ್ನೇ ಈರೋಡೇಶ್ವರ ದೇವರಿಗೂ ನೀಡಲಾಗುತ್ತದೆ. 

AV Eye Hospital ad

ಹಾಜಿ ಸರ್ವರ್‌ಗೆ ಹರಕೆ ಹೊತ್ತವರು ಬೆಳ್ಳಿ ಕುದುರೆ, ಬೆಳ್ಳಿ ಛತ್ರಿ ಮತ್ತು ಟ್ಯೂಬ್ ಲೈಟ್ ಹಾಗೂ ಪುಷ್ಟಗುಚ್ಚವನ್ನು ಅರ್ಪಿಸುತ್ತಾರೆ. ಕಳಸಗಳ ಅಕ್ಕಪಕ್ಕದಲ್ಲಿ ನಿಂತ ಹೂಗಾರರು ಮತ್ತು ಮುಲ್ಲಾಗಳು ಹರಕೆಯ ವಸ್ತುಗಳನ್ನು ಸ್ವೀಕರಿಸುತ್ತಾರೆ.

ಇದನ್ನು ಓದಿದ್ದೀರಾ? ಕಾರ್ಮಿಕ ದಿನಾಚರಣೆ| ಬಂಡವಾಳಶಾಹಿ ಪರ ಧೋರಣೆ ಪಾಲಿಸುತ್ತಿರುವ ಸರ್ಕಾರ: ನ್ಯಾ. ವಿ.ಗೋಪಾಲಗೌಡ

ಈ ಪೂಜೆಯ ಮತ್ತೊಂದು ವಿಶೇಷವೆಂದರೆ, ಗ್ರಾಮದ ಹೂಗಾರರ ಮನೆಯಲ್ಲಿ ದರ್ಗಾದ ಕಳಸ ಇಡುವುದು. ಅಲ್ಲಿಂದ ಕಳಶವನ್ನು ದರ್ಗಾಕ್ಕೆ ಕೊಂಡೊಯ್ಯುತ್ತಾರೆ. ಈ ವೇಳೆ ಮುಲ್ಲಾಗಳು ಸಾಂಬ್ರಾಣಿ ಧೂಪ ಹಿಡಿದರೆ, ಹಿಂದುಗಳು ಗಂಧದ ಬಟ್ಟಲು ಹಿಡಿದು ಮೆರವಣಿಗೆ ಸಾಗುತ್ತಾರೆ. ಹೀಗೆ ಸಾಗುವಾಗ ಹಲವು ಸಾಂಸ್ಕೃತಿಕ ನೃತ್ಯಗಳು ನಡೆಯುತ್ತವೆ. ಕಳಸಗಳನ್ನು ಬೆಟ್ಟದ ಮೇಲಿನ ದರ್ಗಾದ ಮೇಲಿರಿಸಿ, ಬೆಳ್ಳಿ ಕುದುರೆಗಳನ್ನು ದರ್ಗಾದ ಒಳಗಿರಿಸಿ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡುತ್ತಾರೆ. ನಂತರ ಹಿಂದುಗಳು ಸಿಹಿ ತಿಂಡಿ ರೊಟ್ಟಿ ಸವಿದರೆ, ಮುಸಲ್ಮಾನರು ಮಾಂಸಹಾರವನ್ನು ಪ್ರಸಾದವಾಗಿ ಸವಿಯುತ್ತಾರೆ.

ಹಿಂದೂ-ಮುಸ್ಲಿಂ ಬಳೆಗಾರರು 

ಹಿಂದು ಬಳೆಗಾರರು ಮುಸ್ಲಿಂ ಹೆಣ್ಣುಮಕ್ಕಳಿಗೆ, ಮುಸ್ಲಿಂ ಬಳೆಗಾರರು ಹಿಂದು ಹೆಣ್ಣುಮಕ್ಕಳಿಗೆ ಬಳೆ ತೊಡಿಸುವುದು ಗಂಧೋತ್ಸವದ ಮತ್ತೊಂದು ವಿಶೇಷ.

ಬಳೆತೊಡಿಸುವುದರ ಬಗ್ಗೆ ಲಾಡ್ಲಾಪುರ ಗ್ರಾಮದ ಮಹಮ್ಮದ್ ಶಬ್ಬೀರ್ ಅವರು ಹೀಗೆ ಹೇಳುತ್ತಾರೆ. “ಇಲ್ಲಿ ನಾವು ಮುಸಲ್ಮಾನರು, ಅವರು ಹಿಂದುಗಳು ಎಂಬ ಭೇದವಿಲ್ಲ. ನಾವೆಲ್ಲ ಒಂದೇ. ಎರಡು ಕೋಮಿನವರು ವರ್ಷಕ್ಕೊಮ್ಮೆ ಒಟ್ಟಾಗಿ ಸೇರಿ ಸಂತೋಷದಿಂದ ಹಬ್ಬ ಮಾಡುತ್ತೇವೆ” ಎಂದು ಅವರು ಸೌಹಾರ್ದತೆಯ ಮಾತನಾಗಳನ್ನಾಡಿದ್ದಾರೆ.

“ಪುರಾತನ ಕಾಲದಿಂದಲೂ ನಮ್ಮ ನಡುವೆ ಸಾಮರಸ್ಯ, ಭಾವೈಕ್ಯತೆಯಿದೆ. ಅದನ್ನು ಸಾರುವ ಹಿನ್ನೆಲೆಯಲ್ಲೇ ದರ್ಗಾದಲ್ಲಿ ಹೂಗಾರರೇ ಪೂಜಾರಿಕೆ ಮಾಡುತ್ತಾ ಬಂದಿದ್ದಾರೆ. ಅಲ್ಲದೆ, ಮುಸ್ಲಿಂ ಜನಾಂಗದವರು ತರುವ ನೈವೆದ್ಯವನ್ನು ಹೂಗಾರರು ಸ್ವೀಕರಿಸುತ್ತಾರೆ. ಅದು ಸ್ವತಃ ಹಾಜಿ ಸರ್ವರ್ ಅವರೇ ಸ್ವೀಕರಿಸಿದಂತೆ ಎಂಬ ಭಾವ ಮುಸಲ್ಮಾನರಿಗಿದೆ” ಎಂದು ಲಾಡ್ಲಾಪುರ ಗ್ರಾಮದ ಸೈಯದ್ ಗೌಸೊಮುದ್ದೀನ್ ಖಾದ್ರಿ ಹೇಳುತ್ತಾರೆ.

ಗ್ರಾಮದ ಹಿಂದೂ ಮುಖಂಡ ವಿಶ್ವನಾಥ್‌ ಗಂಧಿ ಮಾತನಾಡಿ, "ದೇಶದಲ್ಲಿ ಕೋಮುಗಲಭೆ ಅಥವಾ ಹಿಂಸಾಚಾರ ನಡೆದರೂ, ನಮ್ಮ ಸೌಹಾರ್ದತೆ ಕದಡುವುದಿಲ್ಲ. ನಾವುಗಳು ಅದಕ್ಕೆ ಕಿವಿಗೊಟ್ಟಿಲ್ಲ. ಎಲ್ಲರೂ ಕೂಡಿ ವ್ಯಾಪಾರ, ಹಬ್ಬ ಮಾಡುತ್ತೇವೆ. ನಾವೆಲ್ಲ ಒಂದೇ. ಮುಂದೆಯೂ ಹೀಗೆ ಸಾಮರಸ್ಯ ಕಾಪಾಡಿಕೊಂಡು ಹೋಗುತ್ತೇವೆ" ಎನ್ನುತ್ತಾರೆ.

ಸಂತ ಹಾಜಿ ಸರ್ವರ್ ನೆಲಸಿರುವ ಗುಡ್ಡದ ಕಥೆ

ಹಿಂದೊಮ್ಮೆ, ಲಾಡ್ಲಾಪುರ ಗ್ರಾಮಕ್ಕೆ ಬಂದ ಸಂತ ಹಾಜಿ ಸರ್ವರ್ ಅವರು ಅಲ್ಲಿದ್ದ ಹಿಂದೂ-ಮುಸ್ಲಿಂ ಹುಡುಗರಿಬ್ಬರನ್ನು ತಮ್ಮ ಬಳಿ ಕರೆಯುತ್ತಾರೆ. ನಂತರ, ಹಿಂದೂ ಹುಡುಗನಿಗೆ ನೀರು ತರುವಂತೆಯೂ, ಮುಸ್ಲಿಂ ಹುಡುಗನಿಗೆ ಹಾಲು ತರುವಂತೆಯೂ ಹೇಳುತ್ತಾರೆ.

ಹಿಂದು ಹುಡುಗ ತಂದ ನೀರಿನಿಂದ ಕೈಕಾಲು ತೊಳೆದುಕೊಂಡು, ಮುಸ್ಲಿಂ ಹುಡುಗ ತಂದ ಹಾಲನ್ನು ಕುಡಿಯುತ್ತಾರೆ. ನಂತರ ಇಬ್ಬರನ್ನು ಹಿಂದೆ ತಿರುಗಿ ನೋಡದಂತೆ ಹೋಗಿಬೇಕೆಂದು ಹೇಳುತ್ತಾರೆ. ಆದರೆ, ಕುತೂಹಲ ತಡೆಯದ ಹುಡುಗರು ಸ್ವಲ್ಪ ದೂರ ಕ್ರಮಿಸಿ ಹಿಂದೆ ತಿರುಗುತ್ತಾರೆ. ಆ ಕ್ಷಣವೇ ಸಂತ ಹಾಜಿ ಸರ್ವರ್ ಒಂದು ಗುಡ್ಡವಾಗಿ ರೂಪು ತಳೆಯುತ್ತಾರೆ. ಇದು ಅಲ್ಲಿಯ ಜನರ ನಂಬಿಕೆಯಾಗಿದ್ದು, ಹಾಜಿಯನ್ನು ದೇವರೆಂದು ಹಿಂದೂ ಮುಸಲ್ಮಾನರಿಬ್ಬರು ಸೇರಿ ಪೂಜೆ ಸಲ್ಲಿಸುತ್ತಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app